ADVERTISEMENT

ಲಕ್ಷ್ಮೇಶ್ವರ | ಹುಲಿವೇಷ ಬರೆಯುವ ಕಲಾವಿದರು

ಮೊಹರಂ: ಕಿನ್ನಾಳ ಕಲೆಯ ವಿಶೇಷ

ನಾಗರಾಜ ಎಸ್‌.ಹಣಗಿ
Published 16 ಜುಲೈ 2024, 6:07 IST
Last Updated 16 ಜುಲೈ 2024, 6:07 IST
ಲಕ್ಷ್ಮೇಶ್ವರದ ಕಲಾವಿದ ಪ್ರವೀಣ ಗಾಯಕರ ಮೊಹರಂ ಹಬ್ಬದ ನಿಮಿತ್ತ ಹುಲಿವೇಷ ಬರೆಯುವುದರಲ್ಲಿ ತಲ್ಲೀನರಾಗಿರುವುದು
ಲಕ್ಷ್ಮೇಶ್ವರದ ಕಲಾವಿದ ಪ್ರವೀಣ ಗಾಯಕರ ಮೊಹರಂ ಹಬ್ಬದ ನಿಮಿತ್ತ ಹುಲಿವೇಷ ಬರೆಯುವುದರಲ್ಲಿ ತಲ್ಲೀನರಾಗಿರುವುದು   

ಲಕ್ಷ್ಮೇಶ್ವರ: ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬದಲ್ಲಿ ಜನರು ದೇವರಿಗೆ (ಪಂಜಾ) ಹರಕೆ ಹೊತ್ತುಕೊಳ್ಳುವುದು ಹಿಂದಿನಿಂದ ಬಂದ ಸಂಪ್ರದಾಯ. ಸಂತಾನಭಾಗ್ಯ, ಕುಟುಂಬದ ಆರೋಗ್ಯ ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಜನ ದೇವರ ಮೊರೆ ಹೋಗಿ, ಹರಕೆ ಹೋರುತ್ತಾರೆ. ಹುಲಿ ವೇಷ ಬರೆಸಿಕೊಳ್ಳುವುದು ಈ ಭಾಗದ ಜನ ನಂಬಿದ ಹರಕೆಗಳಲ್ಲಿ ಒಂದು.

ಹುಲಿ ವೇಷ ಧರಿಸಿ ತಮ್ಮ ಮಗ ಹುಲಿಯ ಹಾಗೆ ಆಗಲಿ, ಆರೋಗ್ಯವಂತನಾಗಲಿ, ಉಜ್ವಲ ಭವಿಷ್ಯ ಪಡೆಯಲಿ ಎಂದು ಬಯಸಿ 5, 11, 21 ವರ್ಷ ಅಥವಾ ಜೀವಿತಾವಧಿಯಿರುವವರೆಗೂ ಹುಲಿವೇಷ ಬರೆಸುತ್ತೇವೆ ಎಂದು ತಂದೆ– ತಾಯಿಯರು ಹರಕೆ ಹೊರುತ್ತಾರೆ.

ಹುಲಿವೇಷ ಬರೆಯುವುದು ಒಂದು ವಿಶಿಷ್ಠ ಕಲೆ. ಇದನ್ನು ಲಕ್ಷ್ಮೇಶ್ವರರ ಚಿತ್ರಗಾರ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಭಕ್ತಿ, ಶ್ರದ್ಧೆ, ನಂಬಿಕೆಯಿಂದ ಸಾಂಪ್ರದಾಯಕವಾಗಿ ಮಾಡಿಕೊಂಡು ಬರುತ್ತಿದೆ. ಕಿನ್ನಾಳ ಕಲೆಯನ್ನು ಕರಗತ ಮಾಡಿಕೊಂಡಿರು ಇವರದ್ದು, ಈ ಭಾಗದಲ್ಲಿ ಹುಲಿ ವೇಷ ಬರೆಯುವ ಏಕೈಕ ಕುಟುಂಬ.

ADVERTISEMENT

ಈ ಚಿತ್ರಗಾರ ಕುಟುಂಬ ತಮ್ಮದೇ ಶೈಲಿಯಲ್ಲಿ ಸಾಂಪ್ರದಾಯದ ಬಣ್ಣಗಳನ್ನು ಬಳಸಿ ಅಲಂಕಾರಿಕ ಚಿತ್ರಗಳನ್ನು, ಸುಳಿವುಗಳನ್ನು ಹಳದಿ, ಕೆಂಪು, ಹಸಿರು, ಕರಿ ಮುಖ್ಯ ಬಣ್ಣಗಳಾಗಿ ಬಳಸಿಕೊಂಡು ಹುಲಿವೇಷ ಬರೆಯುವುದರಲ್ಲಿ ಪರಿಣತರು. ಹುಲಿ ವೇಷಕ್ಕೆ ಹಳದಿ ಬಣ್ಣದ ಮೇಲೆ ನವಿಲಿನ ಚಿತ್ರ, ಹುಲಿಯ ಚಿತ್ರ, ಕುದುರೆಯ ಚಿತ್ರ, ಹಸ್ತ, ದೇವರ ಛತ್ರಿ, ಮೀನು, ಹಾವಿನ ಚಿತ್ರಗಳನ್ನು ಸೊಗಸಾಗಿ, ಆಕರ್ಷಕವಾಗಿ ಬಿಡಿಸುವಲ್ಲಿ ನೈಪುಣ್ಯತೆ ಪಡೆದಿದ್ದಾರೆ. ಕೊನೆಯಲ್ಲಿ ವೇಷಕ್ಕೆ ದೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಕೈಗೆ ನವಿಲುಗರಿ ಕಟ್ಟಲಾಗುತ್ತದೆ.

ಈ ಪ್ರತಿ ಚಿತ್ರಗಳೂ ಕೆಲ ಸಂದೇಶಗಳನ್ನು ಸಾರುತ್ತವೆ. ನವಿಲಿನ ಚಿತ್ರ ವೇಷಧಾರಿಯ ಕನಸುಗಳು ನನಸಾಗಲಿ, ಗರಿಗೆದರಲಿ ಎಂದು ಸೂಚಿಸಿದರೆ, ಹುಲಿಯ ಚಿತ್ರ ಹುಲಿಯ ಹಾಗೆ ಘರ್ಜಿಸಲಿ, ಬಲಶಾಲಿಯಾಗಲಿ ಎಂದು ಸಾರುತ್ತದೆ. ಅದರಂತೆ ಏಕ ಚಿತ್ತದಿಂದ ವೇಗವಾಗಿ ಬದುಕು ಯಶಸ್ವಿನ ಕಡೆಗೆ ಸಾಗಲೆಂಬುದನ್ನು ಕುದುರೆಯ ಚಿತ್ರ ಸಾರುತ್ತದೆ. ಇನ್ನು ಹಸ್ತ ಚಿತ್ರವು ದೇವರ ಆರ್ಶೀವಾದವು ಸದಾ ವೇಷಗಾರನ ಮೇಲಿರಲಿ ಎಂದು ಬಿಂಬಿಸಿದರೆ, ಮೀನಿನ ಚಿತ್ರ ಸದಾ ಚಲನಶೀಲನಾಗಿರಲಿ ಎಂದು ಸಾರುತ್ತದೆ. ಹಾವಿನ ಚಿತ್ರ ಯಾವುದೇ ಸೇಡು, ಕೆಡಕುಗಳು ತಾಗದಿರಲೆಂಬುದನ್ನು ಸಾರುತ್ತದೆ.

‘ನಾಲ್ಕು ತಲೆಮಾರಿನಿಂದ ನಮ್ಮ ಕುಟುಂಬ ಹುಲಿವೇಷ ಬರೆಯುವುದನ್ನು ರೂಢಿಸಿಕೊಂಡು ಬಂದಿದೆ. ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ಪದ್ಧತಿಯಂತೆಯೇ ಈಗಲೂ ಸಂಪ್ರದಾಯಕ ಬಣ್ಣಗಳನ್ನು ಬಳಸಿ ಹುಲಿವೇಷ ಬರೆಯುತ್ತಿದ್ದೇವೆ. ಆ ಮೂಲಕ ದೇವರು ಕೊಟ್ಟ ಕಲೆಯನ್ನು ಉಪಯೋಗಿಸುತ್ತಿದ್ದೇವೆ’ ಎಂದು ಹುಲಿವೇಷ ಕಲಾವಿದ ಪ್ರವೀಣ ಗಾಯಕರ ಹೇಳಿದರು.

ಹೀಗೆ ಹುಲಿವೇಷ ಬರೆಯುವುದರ ಹಿಂದೆ ದೊಡ್ಡ ಸಂಪ್ರದಾಯ, ಪರಂಪರೆ ಮತ್ತು ಉದ್ದೇಶ ಇದೆ. ಈ ವರ್ಷವೂ ಕೂಡ ಹರಕೆ ಹೊತ್ತ ನೂರಾರು ಜನರು ಹುಲಿವೇಷ ಬರೆಸಿಕೊಳ್ಳಲು ಗಾಯಕರ ಮನೆಗೆ ಧಾವಿಸುತ್ತಿದ್ದಾರೆ.

ಹುಲಿವೇಷದಲ್ಲಿ ಕಿನ್ನಾಳ ಕಲೆ ತುಂಬಿಕೊಂಡಿದೆ. ಇದನ್ನು ಬರೆಯಲು ಪ್ರಾವೀಣ್ಯತೆ ಮತ್ತು ತನ್ಮಯತೆ ಅಗತ್ಯ -ನಾಗೇಶ ಚಿತ್ರಗಾರ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.