ADVERTISEMENT

ಸಮಯವನ್ನು ಬಂಡವಾಳವಾಗಿಸಿಕೊಳ್ಳಿ

ಗದಗ: ವಾಣಿಜ್ಯೋದ್ಯಮ ನಗರವನ್ನಾಗಿ ಪರಿವರ್ತನೆ ಮಾಡಲು ಬದ್ಧ– ಸಿಎಂ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:38 IST
Last Updated 27 ಸೆಪ್ಟೆಂಬರ್ 2021, 5:38 IST
ಗದಗ ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನದ ಸಮಾರೋಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಆನಂದ್‌ ಪೊತ್ನೀಸ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಪತ್ರ ಸಲ್ಲಿಸಿದರು
ಗದಗ ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನದ ಸಮಾರೋಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಆನಂದ್‌ ಪೊತ್ನೀಸ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಪತ್ರ ಸಲ್ಲಿಸಿದರು   

ಗದಗ: ‘ದುಡ್ಡಿಗಿಂತ ಸಮಯ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ದುಡ್ಡು ಗಳಿಸಿದರೆ ಮಾತ್ರ ಅದರ ಮಹತ್ವ ದ್ವಿಗುಣಗೊಳ್ಳುತ್ತದೆ.ಹಾಗಾಗಿ, ವ್ಯಾಪಾರಸ್ಥರು ಸಮಯವನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುವುದನ್ನು ಕಲಿಯಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು, ‘ಸಮಯ ಪಾಲನೆ ಮುಖ್ಯವಾಗಿದ್ದು, ನಿಗದಿತ ಸಮಯದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸರ್ಕಾರವನ್ನೂ ಒತ್ತಾಯಿಸಬೇಕು. ಆಗ ಮಾತ್ರ ಉದ್ದಿಮೆದಾರರು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ಬಗೆಹರಿಯಲು ಸಾಧ್ಯ’ ಎಂದು ಅವರು ಹೇಳಿದರು.

‘ನಮ್ಮ ಕೃಷಿಕರು ಬೆಳೆಗಳು ಬೆಳೆದ ಬೆಳೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವಂತೆ ನಾವು ರೈತರನ್ನು ಸಿದ್ಧಗೊಳಿಸುವವರೆಗೆ ವ್ಯಾಪಾರ ಅಭಿವೃದ್ಧಿ ಆಗುವುದಿಲ್ಲ. ಕೃಷಿಕ ಕೇವಲ ಉತ್ಪಾದಕನಲ್ಲ; ಬಳಕೆದಾರನೂ ಹೌದು. ಈ ನಿಟ್ಟಿನಲ್ಲಿ ಕೃಷಿಕನ ಆದಾಯ ದ್ವಿಗುಣಗೊಳಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೈಗಾರಿಕಾ ಸ್ನೇಹಿ ನೀತಿ ರೂಪಿಸಿದೆ’ ಎಂದು ಹೇಳಿದರು.

ADVERTISEMENT

‘ಪ್ರಾಮಾಣಿಕ ಕೈಗಾರಿಕೋದ್ಯಮಿಗಳು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿಯೂ ವಾಣಿಜ್ಯೋದ್ಯಮಿಗಳ ಸಂಘ ಕೆಲಸ ನಿರ್ವಹಿಸಬೇಕು. ಏಕೆಂದರೆ ಕಾನೂನಿನ ದುರುಪಯೋಗ ಪಡೆಯುವ ಅನೇಕ ಕೈಗಾರಿಕೋದ್ಯಮಿಗಳು ಇದ್ದು, ಅವರನ್ನು ತಡೆಯುವ ಕೆಲಸವನ್ನೂ ಮಾಡಬೇಕು’ ಎಂದು ಹೇಳಿದರು.

ಕೈಗಾರಿಕೆಗಳನ್ನು ಆರಂಭಿಸಲು ನಿಯಮ ಸರಳೀಕರಣ, ಪಾರದರ್ಶಕತೆಗೆ ಆನ್‍ಲೈನ್ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ. ರಾಜ್ಯದಲ್ಲಿ ಡಿಜಿಟಲ್ ನೀತಿ ಜಾರಿ ಜೊತೆಗೆ ಗದಗ ಜಿಲ್ಲೆಯನ್ನು ವಾಣಿಜ್ಯೋದ್ಯಮ ನಗರವನ್ನಾಗಿಸಲಾಗುವುದು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಮಾತನಾಡಿ, ‘ಮಹಿಳಾ ಉದ್ದಿಮೆದಾರರಿಗೆ ಬಜೆಟ್‍ನಲ್ಲಿ ಸಾವಿರ ಕೋಟಿ ಮೀಸಲಿಡಬೇಕು. ಗದಗ ಜಿಲ್ಲೆಗೆ ಎಸ್‍ಎಫ್‍ಸಿಗೆ ₹10 ಕೋಟಿ ಬದಲಾಗಿ ₹100 ಕೋಟಿ ನೀಡಬೇಕು. ಕೈಗಾರಿಕೆಗೆ ಜಮೀನು ಪಡೆದವರಿಗೆ ಲೀಸ್ ಬದಲಾಗಿ ಸೇಲ್‌ ಡೀಡ್‌ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಆನಂದ ಎಲ್. ಪೊತ್ನೀಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೈಗಾರಿಕೆಗಳ ಆರಂಭಕ್ಕೆ ಇರುವ ಸಮಸ್ಯೆಗಳು, ತೆರಿಗೆ ಹೆಚ್ಚಳ, ಆನ್‍ಲೈನ್ ವ್ಯವಸ್ಥೆ ಜಾರಿ, ಗದಗ ಸೇರಿ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಗೊಂದು ಬೃಹತ್ ಕೈಗಾರಿಕೆ ಸ್ಥಾಪಿಸಲು ಕ್ರಮವಹಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಈಶ್ವಣ್ಣ ಮುನವಳ್ಳಿ, ಮಧು ಸೂಧನ ಪುಣೇಕರ, ಆರ್.ಬಿ. ದಾನಪ್ಪಗೌಡ್ರ, ಕೋಶಾಧ್ಯಕ್ಷ ಶರಣಬಸಪ್ಪ ಗುಡಿಮನಿ, ಮನೋಜ ಬಾಫಣಾ, ಎಚ್.ವಿ. ಶಾನುಭೋಗರ, ಸೋಮನಾಥ ಜಾಲಿ, ತೋಂಟೇಶ ಕುರಡಗಿ, ತಾತನಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಶೇಖಣ್ಣ ಗದ್ದಿಕೇರಿ, ಪದಾಧಿಕಾರಿಗಳಾದ ಸದಾಶಿವಯ್ಯ ಮದರಿಮಠ, ಹರೀಶ ಶಹಾ ಸೇರಿ ವಿವಿಧ ಜಿಲ್ಲೆಗಳ ವಾಣಿಜ್ಯೋದ್ಯಮಿಗಳು ಇದ್ದರು.

ಆಹಾರ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಪ್ರಯತ್ನ: ಸಿಎಂ ಭರವಸೆ

ಗದಗ: ‘ತುಂಗಭದ್ರಾ ಮತ್ತು ಕೃಷ್ಣಾ ನದಿ ತೀರಗಳ ಮಧ್ಯೆ ಇರುವ ಉತ್ತರ ಕರ್ನಾಟಕ ಯೋಜಿತ ರೀತಿಯಲ್ಲಿ ಮುನ್ನಡೆದರೆ ಈ ಭಾಗದ ಜಿಲ್ಲೆಗಳಲ್ಲಿ ಆಹಾರ ಸಂಸ್ಕರಣ ಘಟಕಗಳ ಸರಪಳಿಯನ್ನೇ ಸೃಷ್ಟಿಸಿ ಉತ್ತರ ಕರ್ನಾಟಕವನ್ನು ಮಿನಿ ಪಂಜಾಬ್‌ ಮಾಡಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ನಗರದಲ್ಲಿ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿ, ‘ಈ ಕಲ್ಪನೆ ಸಾಕಾರಕ್ಕೆ ನೀರಾವರಿ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳು ಒಂದುಗೂಡಬೇಕು. ರೈತ ಸ್ನೇಹಿ, ಪರಿಸರ ಸ್ನೇಹಿ ಉದ್ಯಮ ರೂಪಿಸಿ, ರೈತರಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಿದೆ’ ಎಂದು ಹೇಳಿದರು.

‘ಸರ್ಕಾರ ಈಗಾಗಲೇ ಘೋಷಿಸಿರುವ ‘ಒಂದು ಜಿಲ್ಲೆ- ಒಂದು ಉತ್ಪನ್ನ’ ಯೋಜನೆ ಯಶಸ್ಸಿಗೆ ವಾಣಿಜ್ಯೋದ್ಯಮಿಗಳು ನೀಡಿದ ಸಲಹೆಯಂತೆ ಪ್ರತಿ ಜಿಲ್ಲೆಯಲ್ಲಿ ಒಂದು ಆಹಾರ ಸಂಸ್ಕರಣ ಘಟಕ ಆರಂಭಿಸಲು ಯೋಚಿಸಲಾಗುವುದು’ ಎಂದು ತಿಳಿಸಿದರು.

‘ಉತ್ತರ ಕರ್ನಾಟಕದಲ್ಲಿ ಕೈಗಾರಿಕಾಭಿವೃದ್ಧಿ ಬಹಳ ಮುಖ್ಯ. ಜವಳಿ, ಆಟೊಮೊಬೈಲ್‌ ಮತ್ತು ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶಗಳಿವೆ. ಈ ಮೂರು ಉದ್ಯಮಗಳಿಂದ ಅತಿಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತದೆ. ವಾಣಿಜ್ಯೋದ್ಯಮಿಗಳು ಈ ಬಗ್ಗೆ ಸರ್ಕಾರದ ಜತೆಗೆ ಚರ್ಚಿಸಲು ಕಾರ್ಯಯೋಜನೆ ರೂಪಿಸಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.