
ಗಜೇಂದ್ರಗಡ: ತಾಲ್ಲೂಕಿನ ಕುರಿಗಾಹಿಗಳು ಪ್ರತಿ ವರ್ಷದಂತೆ ಬಲಿಪಾಡ್ಯಮಿ ದಿನ ಹಟ್ಟಿಪೂಜೆ, ಪಾಂಡವರ ಪೂಜೆ ಮಾಡುವ ಮೂಲಕ ಸಂಭ್ರಮದಿಂದ ದೀಪಾವಳಿ ಆಚರಿಸಿದರು.
ತಾಲ್ಲೂಕಿನ ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಾಲಕಾಲೇಶ್ವರ, ಕೊಡಗಾನೂರ, ಗೋಗೇರಿ, ಕುಂಟೋಜಿ ಸೇರಿದಂತೆ ಸುತ್ತಲಿನ ಗ್ರಾಮಗಳ ಕುರಿಗಾಹಿಗಳು ಬುಧವಾರ ಹಟ್ಟಿ ಮುಂದೆ ಲಕ್ಷ್ಮಿ ದೇವಿ ಹಾಗೂ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಹೊಸ ಮಣ್ಣಿನ ಮಡಿಕೆಯಲ್ಲಿ ಹಾಲು, ಶಾವಿಗೆ, ಬೇಳೆ ಹಾಕಿ ಉಕ್ಕಿಸುತ್ತಾರೆ. ಮಗಿಯಲ್ಲಿ ಯಾವ ದಿಕ್ಕಿನ ಕಡೆಗೆ ಹಾಲು ಉಕ್ಕಿ ಚೆಲ್ಲುತ್ತದೆಯೋ ಆ ದಿಕ್ಕಿನ ಕಡೆಗೆ ಶುಭ ಸೂಚಕ ಎಂದು ಭಾವಿಸಿ ಕುರಿ ಹಿಂಡು ಮೇಯಿಸಲು ತೆರಳುವುದು ಒಂದು ವಿಶೇಷ.
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಜನರು ಮಂಗಳವಾರ ಲಕ್ಷ್ಮಿ ಪೂಜೆ ನಡೆಸಿದರು. ಆಕಳ ಸಗಣಿಯಿಂದ ಪಾಂಡವರನ್ನು ಪ್ರತಿಷ್ಠಾಪಿಸಿ ಹೊನ್ನಂಬರಿ, ಮೊಸರು ಕಡ್ಡಿ, ಚಂಡು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಲಂಬಾಣಿ ತಾಂಡಾದಲ್ಲಿ ಯುವತಿಯರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಕಾಡಿನಿಂದ ಹೂಗಳನ್ನು ತಂದು ದೇವರಿಗೆ ಸಮರ್ಪಿಸಿದ ನಂತರ ಹಾಡಿ, ಕುಣಿದು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.