ADVERTISEMENT

ಗದಗ: ಏಳು ವರ್ಷ ಕಳೆದರೂ ಮೇಲ್ದರ್ಜೆಗೇರದ ಪೊಲೀಸ್ ಠಾಣೆ

ಅಪರಾಧ ವಿಭಾಗದ ಪಿಎಸ್ಐ ಹುದ್ದೆ ಖಾಲಿ: ಮೇಲ್ದರ್ಜೆಗೇರಿಸಲು ಸಾರ್ವಜನಿಕರ ಆಗ್ರಹ

ಶ್ರೀಶೈಲ ಎಂ.ಕುಂಬಾರ
Published 27 ಜುಲೈ 2025, 2:28 IST
Last Updated 27 ಜುಲೈ 2025, 2:28 IST
ಗಜೇಂದ್ರಗಡ ಪೊಲೀಸ್ ಠಾಣೆ (ಸಂಗ್ರಹ ಚಿತ್ರ)
ಗಜೇಂದ್ರಗಡ ಪೊಲೀಸ್ ಠಾಣೆ (ಸಂಗ್ರಹ ಚಿತ್ರ)   

ಗಜೇಂದ್ರಗಡ: ನೂತನ ತಾಲ್ಲೂಕು ಕೇಂದ್ರವಾದ ಗಜೇಂದ್ರಗಡ ಪಟ್ಟಣದಲ್ಲಿ ಪ್ರತಿವರ್ಷ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಪಟ್ಟಣದಲ್ಲಿರುವ ಪೊಲೀಸ್ ಉಪ ನಿರೀಕ್ಷಕ ಠಾಣೆಯನ್ನು ಪೊಲೀಸ್ ನಿರೀಕ್ಷಕ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿಲ್ಲ.

ರೋಣ ರಸ್ತೆಯಲ್ಲಿರುವ ಪೊಲೀಸ್‌ ಠಾಣೆ ರೇವಡಿಯವರ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಠಾಣೆಯಲ್ಲಿ ಒಬ್ಬರು ಪಿಎಸ್ಐ, 4 ಮಂದಿ ಎಎಸ್ಐ, 12 ಜನ ಹೆಡ್ ಕಾನ್‌ಸ್ಟೆಬಲ್, 27 ಜನ ಕಾನ್‌ಸ್ಟೆಬಲ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಪರಾಧ ವಿಭಾಗದ ಪಿಎಸ್ಐ ಹುದ್ದೆ ಖಾಲಿಯಿದೆ.

ಪೊಲೀಸ್ ಠಾಣೆ 36 ಹಳ್ಳಿಗಳನ್ನು ಒಳಗೊಂಡಂತೆ 181.12 ಚ.ಕಿ.ಮೀ ವ್ಯಾಪ್ತಿ ಹೊಂದಿದೆ. 2011ರ ಜನಗಣತಿ ಪ್ರಕಾರ 83,677 ಜನಸಂಖ್ಯೆ ಹೊಂದಿದ್ದು, ಸದ್ಯದ ಜನಸಂಖ್ಯೆ ಅಂದಾಜು ಒಂದೂವರೆ ಲಕ್ಷವಿದೆ. ಪಟ್ಟಣ ನೂತನ ತಾಲ್ಲೂಕು ಕೇಂದ್ರವಾಗಿ 7 ವರ್ಷ ಕಳೆದರೂ ಪಟ್ಟಣದಲ್ಲಿರುವ ರೋಣ ಪೊಲೀಸ್ ಠಾಣೆ ವೃತ್ತದಲ್ಲಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಗಜೇಂದ್ರಗಡ ಪೊಲೀಸ್‌ ಠಾಣೆ ವ್ಯಾಪ್ತಿಯು ಯಲಬುರ್ಗಾ, ಕುಷ್ಟಗಿ, ಬದಾಮಿ, ಹುನಗುಂದ ತಾಲ್ಲೂಕುಗಳ ಗಡಿ ಹಂಚಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 367 ಗಜೇಂದ್ರಗಡ ಠಾಣೆ ವ್ಯಾಪ್ತಿಯಲ್ಲಿ ಸುಮಾರು 37 ಕಿ.ಮೀ ಇದ್ದು, ರಸ್ತೆ ಅಪಘಾತ ಹೆಚ್ಚಾಗಿ ನಡೆಯುತ್ತವೆ. ಪಟ್ಟಣದಲ್ಲಿ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಅಲ್ಲದೆ ಬಹಳಷ್ಟು ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ, ಉಪಾಧ್ಯಕ್ಷರು ಪಟ್ಟಣದಲ್ಲಿರುವುದರಿಂದ ಪೊಲೀಸ್‌ ಠಾಣೆ ಮೇಲ್ದರ್ಜೆಗೇರಿಸುವುದು ಅವಶ್ಯಕವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಗಜೇಂದ್ರಗಡ ಪಟ್ಟಣ ವಾಣಿಜ್ಯ ಕೇಂದ್ರವಾಗಿದ್ದು, ತಾಲ್ಲೂಕು ಸೇರಿದಂತೆ ಸುತ್ತಲಿನ ತಾಲ್ಲೂಕುಗಳ ಜನರು ವ್ಯಾಪರ-ವಹಿವಾಟಿಗೆ ಪಟ್ಟಣಕ್ಕೆ ಬರುತ್ತಾರೆ. ಪಟ್ಟಣದ ಸುತ್ತಲಿನ ಜಮೀನುಗಳಿಗೆ ಬಂಗಾರದ ಬೆಲೆ ಬಂದಿರುವುದರಿಂದ ಪ್ರತಿದಿನ ಒಂದಿಲ್ಲೊಂದು ತಂಟೆ-ತಕರಾರುಗಳು ಪೊಲೀಸ್‌ ಠಾಣೆ ಮೆಟ್ಟಿಲೇರುವುದು ಸಾಮಾನ್ಯವಾಗಿದೆ. ಹೀಗಾಗಿ ಗಜೇಂದ್ರಗಡದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಿಸಲು ಸ್ಥಳೀಯ ಪೊಲೀಸ್‌ ಠಾಣೆಯನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಸೂಕ್ತ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

‘ಗಜೇಂದ್ರಗಡ ಪಟ್ಟಣ ವಾಣಿಜ್ಯ ಕೇಂದ್ರವಾಗಿದ್ದು, ಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  ಜನಸಾಂದ್ರತೆ, ಅಪರಾಧ ಪ್ರಕರಣ ಹೆಚ್ಚು ಇರುವುದರಿಂದ ಗಜೇಂದ್ರಗಡ ಪೊಲೀಸ್ ಠಾಣೆಯನ್ನು ನಿರೀಕ್ಷಕ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಇದರಿಂದ ಠಾಣೆಗೆ ಹೆಚ್ಚಿನ ಸಿಬ್ಭಂದಿ ನಿಯೋಜನೆಯಾಗುವುದರ ಜತೆಗೆ ಸೂಕ್ಷ್ಮ ಪ್ರಕರಣಗಳಲ್ಲಿ ಪರಿಣಾಮಕಾರಿ ತನಿಖೆ ನಡೆಸಲು ಸಹಕಾರಿ’ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಗಜೇಂದ್ರಗಡ ಪೊಲೀಸ್‌ ಠಾಣೆಯನ್ನು ಮೇಲ್ದರ್ಜೆಗೇರಿಸುವಂತೆ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಮಟ್ಟದಲ್ಲಿ ಅನುಮೋದನೆ ಆಗಬೇಕಿದೆ
– ಪ್ರಭುಗೌಡ ಕಿರೇದಳ್ಳಿ, ಡಿವೈಎಸ್‌ಪಿ ನರಗುಂದ

ಅಪರಾಧ ಪ್ರಕರಣಗಳ ವಿವರ

ವರ್ಷ; ಪ್ರಕರಣಗಳು

  • 2018 - 300

  • 2019 - 154

  • 2020 - 203

  • 2021 - 120

  • 2022 - 209

  • 2023 - 224

  • 2024 - 184

  • 2025 - 130

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.