ಗಜೇಂದ್ರಗಡ: ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿದ್ದು, ಹಲವು ಕಡೆಗಳಲ್ಲಿ ಕಳಪೆ ಕಾಮಗಾರಿ ಹಾಗೂ ಅವುಗಳ ಸೂಕ್ತ ನಿರ್ವಹಣೆ ಕೊರತೆಯಿಂದ ಬಳಕೆ ಮಾಡಲಾಗದಂತ ಸ್ಥಿತಿಯಲ್ಲಿವೆ.
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮೂತ್ರಾಲಯಗಳಿವೆ. ಆದರೆ ಅವುಗಳ ಸ್ವಚ್ಛತೆಗೆ ಪ್ರತ್ಯೇಕ ಸಿಬ್ಬಂದಿ ಹಾಗೂ ಅನುದಾನವಿಲ್ಲದ ಕಾರಣ ಬಹುತೇಕ ಮೂತ್ರಾಲಯಗಳು ವಿದ್ಯಾರ್ಥಿಗಳ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಅಲ್ಲದೆ ಹಲವು ಶಾಲೆಗಳಲ್ಲಿ ಶೌಚಾಲಯಗಳಿದ್ದು, ನೀರಿನ ಸಮಸ್ಯೆ, ಸ್ವಚ್ಛತೆ ಕೊರತೆ ಸೇರಿದಂತೆ ಒಂದಿಲ್ಲೊಂದು ಕಾರಣದಿಂದ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಶಾಲೆಗಳಲ್ಲಿನ ಶಿಕ್ಷಕರು ಶಾಲಾ ಅವಧಿಯಲ್ಲಿ ಶೌಚಕ್ಕೆ ಊರ ಹೊರಗೆ ಅಥವಾ ಪಟ್ಟಣಕ್ಕೆ ಹೋಗುವ ದುಸ್ಥಿತಿ ಇದೆ.
ಪಟ್ಟಣದ ಕೆಜಿಎಂಎಸ್ ಶಾಲೆ ಆವರಣದಲ್ಲಿ ಪುರಸಭೆ ವತಿಯಿಂದ 2023-24ನೇ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ₹5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಆದರೆ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಶಾಲೆ ಆರಂಭವಾದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಶೌಚಕ್ಕೆ ಮನೆಗೆ ತರಳುವಂತಾಗಿದೆ.
ಸಮೀಪದ ಮುಶಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತ್ಯೇಕ ಶೌಚಾಲಯಗಳಿವೆ. ಆದರೆ ನೀರಿನ ಸಮಸ್ಯೆಯಿಂದ ಅವುಗಳಿಗೆ ಬೀಗ ಹಾಕಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು, ಶಾಲಾ ಕಟ್ಟಡಗಳ ಸಂದಿಗಳನ್ನು ಮೂತ್ರ ವಿಸರ್ಜನೆಗೆ ಬಳಕೆ ಮಾಡುತ್ತಿದ್ದಾರೆ.
ಸಮೀಪದ ರಾಜೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ಹಲವು ಬಾರಿ ದುರಸ್ತಿ ಮಾಡಿದರೂ ಸ್ವಚ್ಛತೆ, ನೀರಿನ ವ್ಯವಸ್ಥೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ.
ಶಾಲೆಗಳಲ್ಲಿ ಶೌಚಾಲಯ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸಭೆಯಲ್ಲಿ ತಿಳಿಸುವುದರ ಜತೆಗೆ ಸುತ್ತೋಲೆ ಹೊರಡಿಸಲಾಗಿದೆ. ಕೆಲವು ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ
–ಎಂ.ಎ.ಫಣಿಬಂಧ ಪ್ರಭಾರಿ ಬಿಇಒ ರೋಣ
ದುರಸ್ತಿ ಮಾಡಿಸಲಾಗದ ಸ್ಥಿತಿಯಲ್ಲಿ ಶೌಚಾಲಯಗಳು ‘ರೋಣ-ಗಜೇಂದ್ರಗಡ ತಾಲ್ಲೂಕಿನಲ್ಲಿ ಶೌಚಾಲಯವಿಲ್ಲದ ಯಾವ ಶಾಲೆಗಳು ಇಲ್ಲ. ₹5-₹10 ಸಾವಿರ ವೆಚ್ಚದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿರುವ ಶೌಚಾಲಯಗಳ ದುರಸ್ತಿಗೆ ಶಾಲೆ ಅನುದಾನ ಬಳಕೆ ಮಾಡುವಂತೆ ಶಾಲೆಯ ಮುಖ್ಯಶಿಕ್ಷಕರಿಗೆ ತಿಳಿಸಲಾಗಿದೆ. ಗಜೇಂದ್ರಗಡ-ರೋಣ ತಾಲ್ಲೂಕಿನ ಸುಮಾರು 80 ಶಾಲೆಗಳಲ್ಲಿ ದುರಸ್ತಿ ಮಾಡಿರುವುದಾಗಿ ಆಯಾ ಶಾಲೆಯ ಮುಖ್ಯಶಿಕ್ಷಕರು ತಿಳಿಸಿದ್ದಾರೆ. 107 ಶಾಲೆಗಳಲ್ಲಿ ಶೌಚಾಲಯಗಳು ಉತ್ತಮ ಸ್ಥಿತಿಯಲ್ಲಿವೆ. 10-15 ಶಾಲೆಗಳಲ್ಲಿ ಶೌಚಾಲಯಗಳು ದುರಸ್ತಿ ಮಾಡಿಸಲಾರದಂತಹ ಸ್ಥಿತಿಯಲ್ಲಿವೆʼ ಎಂದು ಪ್ರಭಾರಿ ಬಿಇಒ ಎಂ.ಎ.ಫಣಿಬಂಧ ಮಾಹಿತಿ ನೀಡಿದರು.
ಗಬ್ಬೆದ್ದು ನಾರುವ ಮೂತ್ರಾಲಯ ‘ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂತ್ರಾಲಯಗಳಿಲ್ಲ. ಅಲ್ಲದೆ ಶಿಕ್ಷಕರಿಗೆ ಶೌಚಾಲಯಗಳಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಮೂತ್ರಾಲಯ ಕಟ್ಟಿಕೊಂಡು ಗಬ್ಬೆದ್ದು ನಾರುವುದು ಸಾಮಾನ್ಯವಾಗಿದೆ. ಶಿಕ್ಷಕರು ಮೂತ್ರ ವಿಸರ್ಜನೆ ಹಾಗೂ ಶೌಚಕ್ಕೆ ಶಾಲೆಯಿಂದ ಹೊರಗೆ ಹೋಗಬೇಕಾದ ಸ್ಥಿತಿಯಿದೆ’ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ಅಲವತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.