
ಗಜೇಂದ್ರಗಡ: ‘ಗೌರಿ ಗೌರಿ ಗಾಣಾ ಗೌರಿ ಮೇಣಾಧಾರಿ, ಕುಂಕುಮಧಾರಿ, ಅಣ್ಣನಂತ ಅವರಿಕೋಲ್ ಅವರಿಕೋಲ್, ತಮ್ಮನಂತ ತವರಿಕೋಲ್ ತವರಿಕೋಲ್, ನಿಲ್ಲವ್ವ ನಿಲ್ಲವ್ವ ಗೌರವ್ವಾ ಗೌರವ್ವಾ, ವರ್ಷಕ್ಕೊಮ್ಮೆ ಕರಿಸಿದ್ಯಾ ಕರಿಸಿದ್ಯಾ, ಅರಿಷಿಣ ಪತ್ತಲಾ ಉಡಿಸಿದ್ಯಾ ಉಡಿಸಿದ್ಯಾ....
ಇದು ಗೌರಿ ಹುಣ್ಣಿಮೆ ದಿನ ಮಹಿಳೆಯರು ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳು, ಕಣಕದ ಆರತಿ, ಹೊನ್ನಂಬರಿ ಹೂವು, ಹಣ್ಣಿ ಹೂ ಇಟ್ಟುಕೊಂಡು ಗೌರಮ್ಮನನ್ನು ಪ್ರತಿಷ್ಠಾಪಿಸಿದವರ ಮನೆಗೆ ಆರತಿ ಬೆಳಗಲು ಹೋಗುವಾಗಿ ಹಾಡುವ ಹಾಡು.
ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಸಮಯದಲ್ಲಿ ಬರುವ ಗೌರಿ ಹುಣ್ಣಿಮೆ ಗ್ರಾಮೀಣ ಪ್ರದೇಶದಲ್ಲಿ ಸಡಗರ ಸಂಭ್ರಮ ತರುತ್ತದೆ. ಸೀಗಿ ಹುಣ್ಣಿಮೆ ಹಾಗೂ ಗೌರಿ ಹುಣ್ಣಿಮೆಗಳು ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಹಬ್ಬಗಳು. ಈ ಹಬ್ಬಗಳ ಸಂದರ್ಭದಲ್ಲಿ ಒಂದು ವಾರದ ಮೊದಲಿನಿಂದಲೇ ಓಣಿಯ ಮಹಿಳೆಯರು ಊಟ ಮುಗಿಸಿದ ಬಳಿಕ ಒಂದೆಡೆ ಸೇರಿ ಹುಣ್ಣಿಮೆ ಬೆಳದಿಂಗಳಿನಲ್ಲಿ ಪದಗಳನ್ನು ಹಾಡುವುದು, ಮಕ್ಕಳು ಗ್ರಾಮೀಣ ಆಟಗಳನ್ನು ಆಡುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮರೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಈ ವೈಭವ ಕಾಣಸಿಗುತ್ತದೆ.
ಗೌರಿ ಹುಣ್ಣಿಮೆ ದಿನ ಹೆಣ್ಣು ಮಕ್ಕಳು ಹೊಸ ಸೀರೆಯುಟ್ಟು ಗೆಳತಿಯರೊಂದಿಗೆ ಅರತಿ ತಟ್ಟೆಗಳನ್ನು ಹಿಡಿದು ಹಾಡುತ್ತ ಗೌರಮ್ಮನನ್ನು ಪ್ರತಿಷ್ಠಾಪಿಸಿದವರ ಮನೆಗೆ ತೆರಳಿ ಆರತಿ ಬೆಳಗಿ ಸಂಭ್ರಮಿಸುತ್ತಾರೆ. ಅಲ್ಲದೆ ಹೊಸದಾಗಿ ಮದುವೆ ನಿಶ್ಚಯವಾದವರು ಸಕ್ಕರೆ ಗೊಂಬೆ, ಹೊಸ ಸೀರೆ ಮತ್ತು ದಂಡಿಗಳನ್ನು ತೆಗೆದುಕೊಂಡು ವಧುವಿನ ಮನೆಗೆ ಹೋಗಿ, ಹೊಸ ಸೀರೆಯುಟ್ಟ ವಧುವಿನಿಂದ ಆರತಿ ಬೆಳಗಿಸುವುದು, ಮನೆಯ ಹೆಣ್ಣು ಮೊಮ್ಮಕ್ಕಳಿಗೆ ಆರತಿ ಹಾಗೂ ಹೊಸ ಬಟ್ಟೆ ಕೊಡಿಸುವುದು ಸಂಪ್ರದಾಯ.
ಗೌರಿ ಹುಣ್ಣಿಮೆ ಪ್ರಯುಕ್ತ ಸಕ್ಕರೆ ಗೊಂಬೆ ತಯಾರಕರು 10–15 ದಿನಗಳ ಮೊದಲೇ ಸಕ್ಕರೆ ಗೊಂಬೆಗಳನ್ನು ತಯಾರಿಸಿದ್ದು, ಮಾರುಕಟ್ಟೆಯಲ್ಲಿ ಲಕ್ಷ್ಮೀ, ಗಣೇಶ, ವೀರಭದ್ರ, ಬಸವಣ್ಣ, ಆನೆ, ಒಂಟೆ, ಕುದುರಿ, ತೇರು, ಕೂರಿಗೆ ಹೀಗೆ ವಿವಿಧ ಆಕೃತಿಯ ಬಣ್ಣ ಬಣ್ಣದ ಸಕ್ಕರೆ ಗೊಂಬೆಗಳು ಮಾರಟ ಮಾಡುತ್ತಿದ್ದಾರೆ. ಒಂದು ಕೆಜಿ ಸಕ್ಕರೆ ಗೊಂಬೆಗಳಿಗೆ ₹110-₹120ರಂತೆ ಮಾರಾಟ ಆಗುತ್ತಿದೆ.