ADVERTISEMENT

ಗದಗ | ಜಾಗತಿಕ ಅಶಾಂತಿಗೆ ಅಹಂ ಕಾರಣ: ಸಿ.ಎನ್‌.ಶ್ರೀಧರ್‌

ಗ್ರಾಮೀಣಾಭಿವೃದ್ಧಿ ವಿ.ವಿ. ಮತ್ತು ಎಚ್‌ಡಬ್ಲ್ಯುಪಿಎಲ್‌ ವಿಶ್ವ ಶಾಂತಿ ಸಂಸ್ಥೆ ಸಹಯೋಗ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 4:22 IST
Last Updated 9 ಆಗಸ್ಟ್ 2025, 4:22 IST
ಗದಗ ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿದರು
ಗದಗ ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿದರು   

ಗದಗ: ‘ಪ್ರಸ್ತುತ ದಿನಗಳಲ್ಲಿ ಮನುಷ್ಯನ ಅಹಂ ಹಾಗೂ ದುರಾಸೆಯ ಆಲೋಚನೆಗಳು ಜಾಗತಿಕ ಅಶಾಂತಿಗೆ ಕಾರಣವಾಗಿದೆ. ಈ ಸ್ವಭಾವ ದೂರವಾದರೆ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಹೇಳಿದರು.

ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಕೊರಿಯಾದ ಎಚ್‌ಡಬ್ಲ್ಯುಪಿಎಲ್‌ ವಿಶ್ವ ಶಾಂತಿ ಸಂಸ್ಥೆ ಸಹಯೋಗದಲ್ಲಿ ನಡೆದ ‘ಶಾಂತಿ, ಸಂಸ್ಕೃತಿಯ ಜಿಲ್ಲೆ ಘೋಷಣೆ ಹಾಗೂ ಶಾಂತಿ ಅನುಷ್ಠಾನ ವೇದಿಕೆ– ಎಚ್‌ಡಬ್ಲ್ಯುಪಿಎಲ್‌ 2025’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ವಾಧಿಕಾರ ಮನೋಭಾವ ನೆಲೆಗೊಳ್ಳುವುದರಿಂದ ದೇಶ ದೇಶಗಳ ನಡುವೆ ಸಾಮರಸ್ಯ ಕಳೆದುಹೋಗಿ ಜೀವಹಾನಿಯಂತಹ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ವಿಶ್ವಕ್ಕೆ ಶಾಂತಿಮಂತ್ರ ಸಾರಿದ ದೇಶ ಭಾರತ. ಇಂದು ಜಗತ್ತು ಬಯಸುತ್ತಿರುವುದು ಶಾಂತಿಯನ್ನು ಮಾತ್ರ. ಅದು ನೆಲೆಗೊಳ್ಳಬೇಕಾದರೆ ಸೌಹಾರ್ಯ ಮುಖ್ಯ. ಈ ದಿಸೆಯಲ್ಲಿ ವಿವಿ ಹಾಗೂ ಎಚ್‌ಡಬ್ಲ್ಯುಪಿಎಲ್‌ ಸಂಸ್ಥೆಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ. ಸುರೇಶ್‌ ವಿ.ನಾಡಗೌಡರ ಮಾತನಾಡಿ, ‘ವಿಶ್ವ ಒಂದು ಕುಟುಂಬವಿದ್ದಂತೆ, ಜಾಗತಿಕ ಮಟ್ಟದಲ್ಲಿ ಯಾವುದೇ ಭಾಗದಲ್ಲಿ ನಡೆಯುವ ಅಹಿತಕರ ಘಟನೆಗಳು, ಯುದ್ಧಗಳು ವಿಶ್ವದ ಎಲ್ಲಾ ಭಾಗಗಳಲ್ಲಿ ಅದರ ಪರಿಣಾಮ ಬೀರುತ್ತದೆ. ಶಾಂತಿ ಕದಡುವ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಅಗತ್ಯತೆ ನಮ್ಮ ಮುಂದಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸಹಬಾಳ್ವೆ ನೆಲಸಬೇಕು’ ಎಂದು ಹೇಳಿದರು.

ಎಚ್‌ಡಬ್ಲ್ಯುಪಿಎಲ್‌ ಗ್ಲೋಬಲ್‌ ಓ–3 ಮುಖ್ಯ ಶಾಖಾ ವ್ಯವಸ್ಥಾಪಕ ವೂನಾಮ್‌ ಕಿಂ, ಅಂತರರಾಷ್ಟ್ರೀಯ ಕಾನೂನು ಇಲಾಖೆಯ ಮಹಾನಿರ್ದೇಶಕ ಜೇಡನ್‌ ಲೀ ಹಾಗೂ ವಿಶ್ವ ಶಾಂತಿ ಸಂಸ್ಥೆಯ ಮೂವರು ಪ್ರತಿನಿಧಿಗಳು ವಿಶ್ವ ಶಾಂತಿಯ ಅಗತ್ಯತೆ ಕುರಿತಾಗಿ ಮಾತನಾಡಿದರು. ವಿವಿಧ ರಾಷ್ಟ್ರಗಳಲ್ಲಿ ನಡೆದಿರುವ ಯಶಸ್ವಿ ಶಾಂತಿ ಅನುಷ್ಠಾನ ಮಾದರಿಗಳನ್ನು ಹಂಚಿಕೊಂಡರು.

ಸಭಾ ಕಾರ್ಯಕ್ರಮದ ನಂತರ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಶಾಂತಿ ನಡಿಗೆ ಆಯೋಜಿಸಲಾಗಿತ್ತು. ಶಾಂತಿ, ಸಾಮರಸ್ಯ, ಸಹಬಾಳ್ವೆ ಮತ್ತು ಮಾನವ ಹಕ್ಕುಗಳ ಸಂದೇಶಗಳನ್ನು ಸಾರುವ ಬ್ಯಾನರ್‌ಗಳು ಮತ್ತು ಫಲಕಗಳನ್ನು ಪ್ರದರ್ಶಿಸಲಾಯಿತು. ಬಳಿಕ ಸಸಿಗಳನ್ನು ನೆಡಲಾಯಿತು.

ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರಶಾಂತ್ ಎಚ್. ಮೇರವಾಡೆ ಸಂಯೋಜಿಸಿದ್ದರು.

ಉಪನ್ಯಾಸಕಾರದ ಪ್ರಕಾಶ್ ಮಾಚೇನಹಳ್ಳಿ, ಅಭಿಷೇಕ್ ಎಚ್.ಇ., ಡಾ. ಚೈತ್ರಾ ಮತ್ತು ಸುರೇಶ್ ಲಮಾಣಿ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿಗಳು, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಒಡಂಬಡಿಕೆಗಳಿಗೆ ಸಹಿ:

ಈ ಕಾರ್ಯಕ್ರಮದ ಭಾಗವಾಗಿ ಗದಗ ನಗರದ ಎಚ್.ಸಿ.ಇ.ಎಸ್. ಕಾನೂನು ಕಾಲೇಜು ಮತ್ತು ಎ.ಎಸ್.ಎಸ್ ವಾಣಿಜ್ಯ ಕಾಲೇಜುಗಳ ನಡುವೆ ಎಚ್‌ಡಬ್ಲ್ಯುಪಿಎಲ್ ಜತೆಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಒಡಂಬಡಿಕೆಗಳು ಶೈಕ್ಷಣಿಕ ವಾತಾವರಣದಲ್ಲಿ ಶಾಂತಿ ಶಿಕ್ಷಣ ಯುವಕರ ಭಾಗವಹಿಸುವಿಕೆ ಮತ್ತು ಶಾಂತಿಯ ಸುಸ್ಥಿರ ಸಂಸ್ಕೃತಿಯನ್ನು ನಿರ್ಮಿಸಲು ಸಹಯೋಗದ ಉಪಕ್ರಮಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ ಎಂದು ಪ್ರತಿನಿಧಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.