ADVERTISEMENT

ರೋಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಮೂಲ ಸೌಕರ್ಯ ಅಭಿವೃದ್ಧಿಗೆ ಆಗ್ರಹಿಸಿ ಪಟ್ಟಣ ಬಂದ್‌ಗೆ ವಿವಿಧ ಸಂಘಟನೆಗಳ ಕರೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 6:33 IST
Last Updated 13 ಅಕ್ಟೋಬರ್ 2021, 6:33 IST
ರೋಣದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು
ರೋಣದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾದಾಗ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು   

ರೋಣ: ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ, ಬೀದಿ ದೀಪ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ರೋಣ ಅಭಿವೃದ್ಧಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ರೈತ ಸಂಘಟನೆ ಕರೆ ನೀಡಿದ್ದ ಬಂದ್‌ಗೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಹು ವರ್ಷಗಳ ನಂತರ ರೈತ, ದಲಿತ, ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಒಂದಾಗಿ ಹೋರಾಟಕ್ಕೆ ಕರೆ ನೀಡಿದ್ದವು.

ಬಂದ್ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ರೋಣ ಪಟ್ಟಣ ಸ್ತಬ್ಧಗೊಂಡಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಬಂದ್‍ಗೆ ಬೆಂಬಲ ವ್ಯಕ್ತವಾಯಿತು. ಸದಾ ಜನಜಂಗುಳಿ ಇರುತ್ತಿದ್ದ ಸೂಡಿ ವೃತ್,ಮುಲ್ಲಾನಭಾವಿ ಕ್ರಾಸ್, ಬಸ್ ನಿಲ್ದಾಣ ರಸ್ತೆ, ಪೋತರಾಜಕಟ್ಟಿ ಹಾಗೂ ಪ್ರಮುಖ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ವಿವಿಧ ಸಂಘಟನೆಗಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿಸಿದರು. ಖಾಸಗಿ ವಾಹನಗಳ ಮಾಲೀಕರು ಬಂದ್‍ಗೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಸ್ ಸಂಚಾರ ಇದ್ದರೂ ಪ್ರಯಾಣಿಕರು ಇರಲಿಲ್ಲ.

ADVERTISEMENT

ಇನ್ನು ಮುಲ್ಲಾನಭಾವಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಂಜೆಯ ವರೆಗೂ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಹೇಳಿದಾಗ, ಸಿಪಿಐ ಸುಧೀರ ಬೆಂಕಿ ಆಕ್ಷೇಪ ವ್ಯಕ್ತಪಡಿಸಿದರು. ಸಂಜೆಯ ವರೆಗೆ ರಸ್ತೆ ತಡೆಯಬೇಡಿ ಎಂದಾಗ ಪ್ರತಿಭಟನಾ ನಿರತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ರೋಣ ಪುರಸಭೆಯ ಮುಖ್ಯಾಧಿಕಾರಿ ನೂರೂಲ್ಲಾಖಾನ್. ಲೊಕೋಪಯೋಗಿ ಇಲಾಖೆ ಎಂಜಿನಿಯರ್‌ ಆರ್.ಡಿ. ಯಲಿಗಾರ. ಉಪ ತಹಶೀಲ್ದಾರ್ ಜೆ.ಟಿ. ಕೊಪ್ಪದ ಪ್ರತಿಭಟನಾ ಸ್ಥಳಕ್ಕೆ ಬಂದು, ರಸ್ತೆ ಅಭಿವೃದ್ಧಿಗಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಲೀಲಾ ಚಿತ್ರಗಾರ, ಚಂದ್ರಶೇಖರ ಕನ್ನೂರ, ಗೀತಾ ನಂದೀಕೊಲಮಠ, ವೀರಪ್ಪ ತೆಗ್ಗಿನಮನಿ, ಇಮಾಮಸಾಬ ಜಲವಾರ, ಮುತ್ತು ಕೊಳ್ಳಿ, ಹನಮಂತ ಚಲುವಾದಿ, ಬಸವರಾಜ ಹಲಗಿ, ಅಬ್ದುಲ್ ಹೂಸೂರ, ಶಂಕ್ರ ಮರವಾಡಿ, ರಿಯಾಜ್ ಮುಲ್ಲಾ, ಶ್ರೀಧರ ಚಿತ್ರಗಾರ, ಕೃಷ್ಣ ಕೊಪ್ಪದ, ಕೃಷ್ಣ ರಂಗರೇಜ್, ಪ್ರಮೋದ ಪೂಜಾರ, ದಲಿತ ಸಂಘಟನೆಯ ಮೌನೇಶ ಹಾದಿಮನಿ, ಕನ್ನಡ ಪರ ಸಂಘಟನೆ ಆರ್.ಬಿ. ರಡ್ಡೇರ, ಬೀದಿ ಬದಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಇಮಾಮ್‍ಸಾಬ್ ಜಲವಾರ, ಮುಸ್ಲಿಂ ಯುವ ವೇದಿಕೆ ಸಂಚಾಲಕ ಅಬ್ದುಲ್ ಹೊಸಮನಿ, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡ ಪರ ಹೋರಾಟ ಸಮಿತಿಗಳು ಹಾಗೂ ರೋಣ ನಗರದ ಎಲ್ಲಾ ಸಂಘ ಸಂಸ್ಥೆಗಳು, ಆಝಾದ್‌ ಯುವಕ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.