ರೋಣ: ‘ಅಲ್ಪಸಂಖ್ಯಾತರ ಅಭಿವೃದ್ದಿಗೆ ಸರ್ಕಾರ ಬದ್ದವಾಗಿದೆ. ಅಲ್ಪಸಂಖ್ಯಾತರಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ರೋಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ’ ಎಂದು ಶಾಸಕ ಜಿ. ಎಸ್ ಪಾಟೀಲ ಹೇಳಿದರು.
ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮೀಟಿ ನೇತೃತ್ವದಲ್ಲಿ ಅಂಜುಮನ್ ಶಾಲೆಯ ಮುಂಭಾಗದಲ್ಲಿ ಶನಿವಾರ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಮತಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ ವಸತಿ ಶಾಲೆ ಹಾಗೂ ಕಾಲೇಜುಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗಳಿಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜತೆಗೆ ಅಲ್ಪಸಂಖ್ಯಾತರ ಸಮುದಾಯ ಅಭಿವೃದ್ದಿಗೆ ಹಲವು ಗ್ರಾಮಗಳಲ್ಲಿ ಶಾದಿ ಮಹಲ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಮತಕ್ಷೇತ್ರದ ಅಭಿವೃದ್ದಿಗಾಗಿ ಶಿಕ್ಷಣ, ಕೃಷಿ, ಕೈಗಾರಿಕೆ, ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದರು.
ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಹೊರಪೇಟೆ ದರ್ಗಾದ ಹಜರತ್ ಸೈಯದ್ ಶಾ ಸುಲೇಮಾನ್ ಶಾವಲಿ ಅಜ್ಜ, ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ, ಅಂಜುಮನ್ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಬಾವಾಸಾಬ ಬೆಟಗೇರಿ, ಮಲ್ಲಿಕ ಯಲಿಗಾರ, ಎ.ಎಸ್. ಖತೀಬ್, ಅಪ್ತಾಬ್ ತಹಶೀಲ್ದಾರ, ಹನುಮಂತ ತಳ್ಳಿಕೇರಿ, ಯೂಸೂಫ್ ಇಟಗಿ, ಕಲೀಲ ರಾಮದುರ್ಗ, ಬಸೀರ್‌ಅಹಮ್ಮದ ಕೊಪ್ಪಳ, ಅಬ್ಬು ಹೊಸೂರ, ರಿಯಾಜ್ ಮುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.