ADVERTISEMENT

ಮನೆ ಹಾನಿ; ಜನರ ಕಷ್ಟ ಕೇಳದ ಸರ್ಕಾರ

ಜಿಲ್ಲೆಯಲ್ಲಿ 91,292 ಹೆಕ್ಟೇರ್‌ ಕೃಷಿ ಬೆಳೆ ಹಾನಿ– 1491 ಮನೆಗಳಿಗೆ ಭಾಗಶಃ ಹಾನಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 5:20 IST
Last Updated 8 ಆಗಸ್ಟ್ 2022, 5:20 IST
ಮಳೆಯಿಂದಾಗಿ ಬೆಳೆ ಹಾನಿಯಾಗಿರುವುದು
ಮಳೆಯಿಂದಾಗಿ ಬೆಳೆ ಹಾನಿಯಾಗಿರುವುದು   

ಗದಗ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಒಂದೆಡೆಯಾದರೆ; ಮನೆ ಕಳೆದುಕೊಂಡು ಅತಂತ್ರರಾಗಿರುವ ಜನರು ಮತ್ತೊಂದೆಡೆ. ಸಂಕಷ್ಟಕ್ಕೆ ಸಿಲುಕಿರುವ ಇಬ್ಬರೂ ಮುಂದಿನ ಬದುಕು ಹೇಗೆ? ಎಂಬ ಭೀತಿಯಲ್ಲಿ ದಿನ ದೂಡುತ್ತಿದ್ದಾರೆ.

ಏಪ್ರಿಲ್‌ 1ರಿಂದ ಆಗಸ್ಟ್‌ 6ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 1,491 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮೂರು ಮನೆಗಳು ಸಂಪೂರ್ಣ ನಾಶವಾಗಿವೆ. ಮಳೆಯ ಅವಘಡದಿಂದಾಗಿ 9 ಮಂದಿ ಹಾಗೂ 51 ಜಾನುವಾರುಗಳ ಜೀವಹಾನಿಯಾಗಿದೆ.

ಇದೇ ಅವಧಿಯ ನಡುವೆ 91,292 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದೆ. 249 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಾಶವಾಗಿದೆ.

ADVERTISEMENT

ರೈತರು ಮತ್ತು ಸಾರ್ವಜನಿಕರು ಕಷ್ಟದಲ್ಲಿದ್ದಾಗ ನೆರವಿಗೆ ನಿಲ್ಲಬೇಕಿದ್ದ ಸರ್ಕಾರ ಮೈ ಮರೆತು ಕುಳಿತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೂಚನೆಯನ್ನೂ ಧಿಕ್ಕರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಮಳೆಯಿಂದ ನಷ್ಟ ಅನುಭವಿಸಿರುವ ಜನರ ಕಷ್ಟ ಕೇಳಲು ಒಮ್ಮೆಯೂ ಜಿಲ್ಲೆಗೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಯಲ್ಲಿ ಈವರೆಗೆ 273 ಮಿ.ಮೀಟರ್‌ ಮಳೆಯಾಗಿದ್ದು, ವಾಡಿಕೆಗಿಂದ ಶೇ 57ರಷ್ಟು ಹೆಚ್ಚು ಮಳೆಯಾಗಿದೆ. ನರಗುಂದ ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಅದೇರೀತಿ, ಶಿರಹಟ್ಟಿ ತಾಲ್ಲೂಕಿನಲ್ಲಿ 97, ರೋಣ 73, ಗದಗ 193, ಮುಂಡರಗಿ 27, ನರಗುಂದ 144, ಲಕ್ಷ್ಮೇಶ್ವರ 68, ಗಜೇಂದ್ರಗಡ 34 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಪೈಕಿ 211 ಮನೆಗಳಿಗೆ ₹6.752 ಲಕ್ಷ ಪರಿಹಾರ ನೀಡಲಾಗಿದ್ದು, ಸರ್ವೇ ಕಾರ್ಯ ಪ್ರಗತಿಯಲ್ಲಿದೆ’ ಎಂದು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ತಿಳಿಸಿದ್ದಾರೆ.

‘ಮಳೆಯಿಂದ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆಬರೆ ಹಾನಿಗೆ ₹10 ಸಾವಿರ, ‘ಎ’ ವರ್ಗದಲ್ಲಿ ಶೇ 75 ಕ್ಕಿಂತ ಹೆಚ್ಚು ಮನೆ ಹಾನಿಯಾಗಿದ್ದರೆ ₹5 ಲಕ್ಷ, ‘ಬಿ2’ ವರ್ಗದಲ್ಲಿ ಶೇ 25ರಿಂದ ಶೇ 75ರಷ್ಟು ತೀವ್ರ ಮನೆಹಾನಿಯಾಗಿದ್ದರೆ ₹5 ಲಕ್ಷ, ‘ಬಿ1’ ವರ್ಗದಲ್ಲಿ ಶೇ 25ರಿಂದ ಶೇ 75ರಷ್ಟು ಹಾನಿಯಾಗಿದ್ದರೆ ದುರಸ್ತಿಗೆ ₹3 ಲಕ್ಷ, ಶೇ 15ರಿಂದ ಶೇ25ರಷ್ಟು ಭಾಗಶಃ ಹಾನಿಯಾಗಿದ್ದರೆ ₹50 ಸಾವಿರ ಪರಿಹಾರ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

13 ಮಣ್ಣಿನ ಮನೆಗಳಿಗೆ ಹಾನಿ

ಮುಳಗುಂದ: ಜುಲೈ ಅಂತ್ಯದಲ್ಲಿ ಸುರಿದ ಭಾರಿ ಮಳೆಗೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 13 ಮಣ್ಣಿನ ಮನೆಗಳು ಭಾಗಶಃ ಬಿದ್ದಿವೆ.

ಮನೆಗೆ ಹಾನಿಯಾಗಿರುವ ಕುರಿತು ಅರ್ಜಿ ಸಲ್ಲಿಕೆಯಾಗಿದ್ದು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಜಂಟಿ ಸರ್ವೇ ನಡೆಸಿ ವರದಿ ಸಲ್ಲಿಸಿದ್ದು ಪರಿಹಾರ ದೊರೆಯುವ ಹಂತದಲ್ಲಿವೆ. ಸತತ ಮಳೆಯಿಂದ ಸೊರಟೂರು, ಚಿಂಚಲಿ, ಯಲಿಶಿರೂರ ಗ್ರಾಮಗಳ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಮಣ್ಣಿನ ಮನೆಗಳಿಗೆ ಹಾನಿಯಾಗಿದೆ.

ಪಟ್ಟಣದಲ್ಲಿ ಶೇ 25ರಷ್ಟು ಮಣ್ಣಿನ ಮನೆಗಳಿದ್ದು ಅವು ಕಡುಬಡವರದ್ದಾಗಿವೆ. ಪ್ರತಿವರ್ಷವೂ ಸತತ ಮಳೆಗೆ ಹಾನಿಗೆ ಒಳಗಾಗುತ್ತಿವೆ. ಶಿಥಿಲಗೊಂಡಿರುವ ಮಣ್ಣಿನ ಮನೆಗಳನ್ನು ಸರ್ಕಾರ ಗುರುತಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವ ಪ್ರಯತ್ನ ಮಾಡಬೇಕು. ಮನೆ ಹಾನಿಗೊಂಡಾಗ ಅಲ್ಪ ಸ್ವಲ್ಪ ಪರಿಹಾರ ನೀಡುವುದರಿಂದ ರಿಪೇರಿಗೆ ಮಾತ್ರ ಸಾಕಾಗುತ್ತಿದೆ. ಪೂರ್ಣ ಪ್ರಮಾಣದ ಮನೆಗಳ ನಿರ್ಮಾಣಕ್ಕೆ ಪರಿಹಾರ ನೀಡಬೇಕು ಎಂದು ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಎಂ.ಎಸ್.ಕಣವಿ ಆಗ್ರಹಿಸಿದರು.

ಆ.5ರವರೆಗೆ 13 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿರುವ ಕುರಿತು ಅರ್ಜಿ ಬಂದಿದ್ದು, ಎಲ್ಲವನ್ನು ಪರಿಶೀಲನೆ ಮಾಡಿ ವರದಿ ಕೊಡಲಾಗಿದೆ. ಈವರೆಗೆ ಪೂರ್ಣ ಪ್ರಮಾಣದ ಪಕ್ಕಾ ಮನೆಗಳಿಗೆ ಹಾನಿಯಾಗಿಲ್ಲ ಎಂದು ಗ್ರಾಮ ಲೆಕ್ಕಾಧಿಕಾರಿ ಶ್ರೀಧರ ಪಟ್ಟೇದ ಹೇಳಿದರು.

ಭಾರಿ ಮಳೆ: ಅಪಾರ ಮನೆಗಳಿಗೆ ಹಾನಿ

ಮುಂಡರಗಿ: ಮೇನಲ್ಲಿ ಸುರಿದ ಅಕಾಲಿಕ ಮಳೆ ಹಾಗೂ ಮುಂಗಾರು ಹಂಗಾಮಿನ ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ವಾಡಿಕೆಗಿಂದ ಹೆಚ್ಚಾಗಿ ಸುರಿದ ಭಾರಿ ಮಳೆಯ ಕಾರಣದಿಂದಾಗಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಮನೆಗಳು ಧರೆಗು
ರುಳಿವೆ ಹಾಗೂ ಕೆಲವು ಮನೆಗಳು ಹಾನಿಗೊಳಗಾಗಿವೆ.

ಮಳೆಯ ಹೊಡೆತಕ್ಕೆ ಬಹುತೇಕ ಮಣ್ಣಿನ ಮನೆಗಳು ಹಾನಿಯಾಗಿದ್ದು, ತುಂಬಾ ಹಳೆಯ ಮನೆಗಳು ನಿರಂತರವಾಗಿ ಸುರಿದ ಮಳೆಯ
ನೀರಿನಿಂದ ತೊಯ್ದು ನೆಲ್ಕುರುಳಿವೆ. ಪಟ್ಟಣದ ಕೋಟೆ ಭಾಗ, ಅಂಬೇಡ್ಕರ್ ನಗರ, ಕಡ್ಲಿಪೇಟೆ ಓಣಿ, ದುರ್ಗಾದೇವಿ ನಗರ ಮೊದಲಾದ ಭಾಗಗಳಲ್ಲಿ ಮಣ್ಣಿನ ಮನೆಗಳಿಗೆ ಹಾನಿಯಾಗಿದೆ.

ಮೇ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯ ಕಾರಣದಿಂದ ಮುಂಡರಗಿ ಹಾಗೂ ಡಂಬಳ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಒಟ್ಟು 125 ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು. ಹಾನಿಗೊಳಗಾದ ಪ್ರತಿ ಮನೆಗಳಿಗೆ ಕಂದಾಯ ಇಲಾಖೆಯ ವತಿಯಿಂದ ತಲಾ ₹3,200 ಪರಿಹಾರ ನೀಡಲಾಗಿದೆ. ಜುಲೈ 28ರಂದು ಪಟ್ಟಣದ ಬ್ರಾಹ್ಮಣರ ಓಣಿಯಲ್ಲಿ ಮಣ್ಣಿನ ಮನೆ ಕುಸಿದು ವ್ಯಕ್ತಿಯೊಬ್ಬರು ಮೃತರಾಗಿದ್ದರು. ತಹಶೀಲ್ದಾರ್ ಆಶಪ್ಪ ಪೂಜಾರಿ ಹಾಗೂ ಮತ್ತಿತರ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೆಟಿ ನೀಡಿದ್ದರು.

ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿಯೂ ಅಗತ್ಯಕ್ಕಿಂತ ಹೆಚ್ಚಾಗಿ ಮಳೆ ಸುರಿದಿದ್ದು, ಹಾನಿಗೊಳಗಾದ ಹಾಗೂ ಸಂಪೂರ್ಣವಾಗಿ ಬಿದ್ದುಹೋಗಿರುವ ಮನೆಗಳ ಸಮೀಕ್ಷಾ ಕಾರ್ಯ ನಡೆದಿದೆ ಎಂದು ಕಂದಾಯ ನಿರೀಕ್ಷಕ ರಾಘವೇಂದ್ರ ದೊಂಬರ ತಿಳಿಸಿದ್ದಾರೆ.

ಜನಜೀವನ ಅಸ್ತವ್ಯಸ್ತ

ಶಿರಹಟ್ಟಿ: ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬಿಟ್ಟುಬಿಡದೆ ಸುರಿದ ಮಳೆಯಿಂದಾಗಿ ಹೊಲಗಳಲ್ಲಿ ಗೋವಿನಜೋಳ, ಶೇಂಗಾ, ಹತ್ತಿ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅಲ್ಲದೇ ಕಟಾವಿನ ಹಂತದಲ್ಲಿರುವ ಹೆಸರು ಹೊಲಗಳಲ್ಲಿ ನೀರು ತುಂಬಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಇದುವರೆಗೆ ತಾಲ್ಲೂಕಿನಲ್ಲಿ 18.48 ಹೆಕ್ಟೇರ್ ಕೃಷಿ ಭೂಮಿ ಹಾಗೂ 46.12 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರ ಹಾನಿಗೀಡಾಗಿದೆ. ಮಳೆ ಹೀಗೆ ಮುಂದುವರಿದರೆ ಎಲ್ಲಾ ಬೆಳೆಗಳು ನಾಶವಾಗುತ್ತವೆ ಎಂದು ರೈತರು ಚಿಂತಾಕ್ರಾಂತರಾಗಿದ್ದಾರೆ. ಇದುವರೆಗೆ ಮಳೆಯಿಂದಾಗಿ 20 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 40 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆ ಹಾನಿಗೊಳಗಾಗಿದೆ. ಗ್ರಾಮಗಳಲ್ಲಿರುವ ಮಣ್ಣಿನ ಬಹುತೇಕ ಮನೆಗಳು ಸೋರುತ್ತಿವೆ. ಮಳೆಯಿಂದಾಗಿ 257 ಮನೆಗಳು ಹಾನಿಗೊಳಗಾಗಿದ್ದು, ಎರಡು ಜೀವ ಹಾನಿ ಕೂಡ ಸಂಭವಿಸಿದೆ.

ಪ್ರಸ್ತುತವಾಗಿ ಶಿಥಿಲಗೊಂಡಿರುವ ಮನೆಗಳು ಬೀಳುವ ಹಂತಲ್ಲಿದ್ದು, ಭಯದಲ್ಲೇ ಬದುಕು ಸಾಗಿಸುವ ಅನಿವಾರ್ಯತೆ ಬಂದೊದಗಿದೆ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.

ನರೇಗಲ್:‌ 9,800 ಹೆಕ್ಟೇರ್‌ ಬೆಳೆಹಾನಿ

ನರೇಗಲ್:‌ ಹೋಬಳಿಯ ಎಲ್ಲೆಡೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಂದಾಜು 9,800 ಹೆಕ್ಟೇರ್‌ ಮುಂಗಾರು ಬೆಳೆ
ಹಾನಿಯಾಗಿದೆ ಎಂದು ನರೇಗಲ್‌ ಹೋಬಳಿ ಕೃಷಿ ಕೇಂದ್ರದ ಅಧಿಕಾರಿ ಸಿ. ಕೆ. ಕಮ್ಮಾರ ತಿಳಿಸಿದರು.

ಈಗಾಗಲೇ ಬೆಳೆವಿಮೆ ತುಂಬಿರುವ ರೈತರ ಹೊಲದಲ್ಲಿ ನೀರು ನಿಂತು ಬೆಳೆ ಹಾನಿಯಾಗಿದ್ದರೆ ಸ್ವತಃ ರೈತರೇ ಅರ್ಜಿಗಳನ್ನು ತುಂಬಿ ರೋಣ ಸಹಾಯಕ ನಿರ್ದೇಶಕರ ಕಚೇರಿಯಲ್ಲಿರುವ ಬೆಳೆವಿಮೆ ಕಂಪನಿಯ ಸಿಬ್ಬಂದಿಗೆ ನೀಡಲು ತಿಳಿಸಲಾಗಿದೆ. ಬೆಳೆವಿಮೆ ತುಂಬದೇ ಇರುವ ರೈತರು ಕೃಷಿ ಇಲಾಖೆ ಯೋಜನೆಯಡಿ ಬರುವ ಪರಿಹಾರದಲ್ಲಿ ಅಂದಾಜು ಶೇ 30ರಿಂದ ಶೇ 35ರಷ್ಟು ಪರಿಹಾರ ಸಿಗಲಿದೆ ಎಂದು ಮಾಹಿತಿ ನೀಡಿದರು.

172 ಮನೆಗಳಿಗೆ ಹಾನಿ

ರೋಣ: ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅತಿವೃಷ್ಟಿಯಿಂದ 172ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಹಲವು ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ಎದುರಾಗಿದೆ.ವಿಪರೀತ ಸುರಿದ ಮಳೆರಾಯನ ಅವಕೃಪೆಗೆ ಜನ ತತ್ತರಿಸಿ ಹೋಗಿರುವಾಗ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡದ ಕಂದಾಯ ಇಲಾಖೆಯ ಅಧಿಕಾರಿಗಳು
ಬೇಜವಾಬ್ದಾರಿ ಮೆರೆಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಅತಿಯಾದ ಮಳೆಯಿಂದ ಹಾನಿಗೊಳಗಾದ ಮನೆಗಳ ಬಗ್ಗೆ ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳ ಬಳಿ ನಿಖರ ಮಾಹಿತಿ ಇಲ್ಲ. ತಹಶೀಲ್ದಾರ್‌ ಮತ್ತು ಉಪ ತಹಶೀಲ್ದಾರ್‌ ಬಳಿಯೂ ಅಂಕಿ ಅಂಶ ಇಲ್ಲ.

ತಾಲ್ಲೂಕಿನಲ್ಲಿ ಬಿದ್ದ 172 ಮನೆಗಳ ಪೈಕಿ 143 ಮನೆಗಳಿಗೆ ತಲಾ ₹3,200 ಪರಿಹಾರ ನೀಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

‘ಅರ್ಧ ಮನೆ ಬಿದ್ದರೂ, ಪೂರ್ಣಮನೆ ಬಿದ್ದರೂ ಅಷ್ಟೇ ₹3,200 ಮಾತ್ರ ಪರಿಹಾರ. ಆ ಹಣ ರಿಪೇರಿಗೂ ಸಾಲುವು
ದಿಲ್ಲ. ಮಳೆಯಿಂದ ಯಾವ ಮನೆಗೆ ಎಷ್ಟು ಹಾನಿಯಾಗಿದೆ ಎಂದು ಸರಿಯಾಗಿ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಕ್ಷಣಾ ಸೇನಾ ತಾಲ್ಲೂಕು ಘಟಕದ ಅಧ್ಯಕ್ಷ ಮೈನುದ್ದೀನ ನದಾಫ್ ಆಗ್ರಹಿಸಿದ್ದಾರೆ.

ಮಳೆಗೆ 64 ಮನೆಗಳಿಗೆ ಹಾನಿ

ಗಜೇಂದ್ರಗಡ: ತಾಲ್ಲೂಕಿನಲ್ಲಿ ನಿರಂತರ ಮಳೆಗೆ ರೈತರ ಬೆಳೆಗಳ ಜೊತೆಗೆ ಹಲವು ಮನೆಗಳಿಗೂ ಹಾನಿಯಾಗಿದೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಒಟ್ಟು 64 ಮನೆಗಳು ಹಾನಿಯಾಗಿವೆ.

ಗಜೇಂದ್ರಗಡ ತಾಲ್ಲೂಕಿನಲ್ಲಿ ಮಳೆಯಿಂದ 64 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಸಂತ್ರಸ್ತರ ಅರ್ಜಿಗಳನ್ನು ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ರಾಜೀವ್ ಗಾಂಧಿ ವಸತಿ ನಿಗಮದ ಲಾಗಿನ್‌ಗೆ ಹಾಕಿದ್ದಾರೆ. ಈವರೆಗೂ ಯಾವ ಸಂತ್ರಸ್ತರಿಗೂ ಪರಿಹಾರ ಲಭಿಸಿಲ್ಲ. ಗಜೇಂದ್ರಗಡ ತಾಲ್ಲೂಕಿನಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಒಟ್ಟು 64 ಮನೆಗಳಿಗೆ ಹಾನಿಯಾಗಿದೆ. ಯಾವ ಗ್ರಾಮದಲ್ಲಿ ಎಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಕೊಡಲು ಆಗುವುದಿಲ್ಲ ಗಜೇಂದ್ರಗಡ ತಾಲ್ಲೂಕು ಕಂದಾಯ ನಿರೀಕ್ಷಕಿ ಗೌರಮ್ಮ ಆನಂದಪ್ಪನವರ ಹೇಳಿದರು.

ಮಣ್ಣಿನ ಮನೆಗಳು ಧರೆಗೆ

ಲಕ್ಷ್ಮೇಶ್ವರ: ಕಳೆದ 8-10 ದಿನಗಳ ಹಿಂದೆ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಬಹಳಷ್ಟು ಮಣ್ಣಿನ ಮನೆಗಳು ನೆಲಕ್ಕರುಳಿವೆ. ಹೆಚ್ಚಾಗಿ ಬಟ್ಟೂರು, ಹುಲ್ಲೂರು, ಲಕ್ಷ್ಮೇಶ್ವರದ ದೇಸಾಯಿಬಣ, ಹಿರೇಬಣ, ಬಸಾಪುರ, ಶಿಗ್ಲಿ ಗ್ರಾಮ
ಗಳಲ್ಲಿ ಮನೆಗಳು ಬಿದ್ದು ನಷ್ಟ ಉಂಟಾಗಿದೆ.

ಕಂದಾಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ 50 ಮನೆಗಳು ಭಾಗಶಃ ಬಿದ್ದಿವೆ ಎಂದು ಗೊತ್ತಾಗಿದೆ. ‘ಮಳೆಗೆ ಬಿದ್ದ ಮನೆಗಳಿಗೆ ಪರಿಹಾರ ನೀಡುವ ಸಲುವಾಗಿ ಪೋರ್ಟಲ್ ಶುರು ಮಾಡಲಾಗಿದೆ. ಈಗಾಗಲೇ ಶೇ 20ರಷ್ಟು ಅರ್ಜಿ
ಗಳು ಅಪ್‍ಲೋಡ್ ಮಾಡುವ ಕೆಲಸ ಮುಗಿದಿದೆ. ಅರ್ತೀ ಶಿಘ್ರದಲ್ಲಿಯೇ ಬಿದ್ದ ಮನೆಗಳ ಮಾಲೀಕರಿಗೆ ಪರಿಹಾರ ನೀಡಲಾಗುವುದು’ ಎಂದು ತಹಶೀಲ್ದಾರ ಪರಶುರಾಮ ಸತ್ತಿಗೇರಿ ಹೇಳಿದರು.

ಈಗಲೂ ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಗೊಜನೂರು, ಬಟ್ಟೂರು, ಪುಟಗಾಂವ್‍ಬಡ್ನಿ, ಹುಲ್ಲೂರು, ಆದರಹಳ್ಳಿ ಭಾಗದಲ್ಲಿ ಪ್ರತಿದಿನ ಮಳೆಯಾಗುತ್ತಿದ್ದು ಮಣ್ಣಿನ ಮನೆಗಳಲ್ಲಿ ವಾಸವಾಗಿರುವ ನಿವಾಸಿಗಳು ಭಯದಲ್ಲೇ ಬದುಕು ದೂಡುತ್ತಿ
ದ್ದಾರೆ.

ನಿರ್ವಹಣೆ: ಕೆ.ಎಂ.ಸತೀಶ್‌ ಬೆಳ್ಳಕ್ಕಿ
ಪ್ರಜಾವಾಣಿ ತಂಡ: ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ, ನಿಂಗರಾಜ ಹಮ್ಮಿಗಿ, ಚಂದ್ರಶೇಖರ ಭಜಂತ್ರಿ, ಚಂದ್ರು ರಾಥೋಡ್‌, ಪ್ರಕಾಶ್‌ ಗುದ್ನೆಪ್ಪನವರ, ಶ್ರೀಶೈಲ ಎಂ. ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.