ADVERTISEMENT

ಹಾವೇರಿ: ತ್ಯಾಜ್ಯ ಘಟಕದ ಸುತ್ತ ಹಸಿರು ಸಿರಿ!

ಲಕ್ಷ್ಮೇಶ್ವರದಲ್ಲಿ ಪುರಸಭೆಯಿಂದ ಮಾದರಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ

ನಾಗರಾಜ ಎಸ್‌.ಹಣಗಿ
Published 20 ಅಕ್ಟೋಬರ್ 2020, 19:45 IST
Last Updated 20 ಅಕ್ಟೋಬರ್ 2020, 19:45 IST
ಲಕ್ಷ್ಮೇಶ್ವರದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿದ ಮರುಬಳಕೆ ಕಸ
ಲಕ್ಷ್ಮೇಶ್ವರದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿದ ಮರುಬಳಕೆ ಕಸ   

ಲಕ್ಷ್ಮೇಶ್ವರ: ಊರಿನ ಕಸಕಡ್ಡಿಯನ್ನು ಒಡಲಲ್ಲಿ ತುಂಬಿಕೊಂಡಿರುವ ಇಲ್ಲಿನ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ.

13 ಎಕರೆ ವಿಸ್ತೀರ್ಣದ ಘಟಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ತಪಸಿ, ಹೊಂಗೆ, ಬೇವು, ನೇರಳೆ, ಮಳೆ ಸಸಿಗಳನ್ನು ನೆಡಲಾಗಿತ್ತು. ಎರಡು ವರ್ಷಗಳಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಎಲ್ಲ ಸಸಿಗಳು ಚೆನ್ನಾಗಿ ಬೆಳೆದಿದ್ದು, ಹಸಿರು ವನಸಿರಿ ಇಡೀ ಘಟಕವನ್ನೇ ಆವರಿಸಿದೆ.

ಪಟ್ಟಣದಲ್ಲಿ ಪ್ರತಿದಿನ 12 ಟನ್‍ನಷ್ಟು ಕಸ ಉತ್ಪಾದನೆ ಆಗುತ್ತಿದ್ದು, ಅದರಲ್ಲಿ 6 ಟನ್ ಒಣ ಮತ್ತು 6 ಟನ್ ಹಸಿ ಕಸ ಇರುತ್ತದೆ. 7 ಮಿನಿ ಟಿಪ್ಪರ್‌ಗಳಲ್ಲಿ ಅದನ್ನು ಸಂಗ್ರಹಿಸಿ ಘಟಕಕ್ಕೆ ಸಾಗಿಸುವ ವ್ಯವಸ್ಥೆ ಇದೆ. ಟಿಪ್ಪರ್‌ಗಳಿಗೆ ತುಂಗಾ, ಕಾಳಿ, ಸಿಂಧು, ಕಬಿನಿ, ಕಾವೇರಿ, ಭೀಮಾ, ವರದಾ ಎಕ್ಸ್‌ಪ್ರೆಸ್ ಎಂದು ನದಿಗಳ ಹೆಸರನ್ನು ನಾಮಕರಣ ಮಾಡಿರುವುದು ಮತ್ತೊಂದು ವಿಶೇಷ.

ADVERTISEMENT

ವಾಹನಗಳು ತಂದು ಸುರಿದ ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಲಾಗುವುದು. ಮರುಬಳಕೆಗೆ ಅನುಕೂಲ ಆಗಿರುವ ಕುಡಿಯುವ ನೀರಿನ ಪ್ಲಾಸ್ಟಿಕ್ ಪ್ಯಾಕೇಟ್‌ಗಳು, ಮದ್ಯದ ಬಾಟಲ್ ಮತ್ತು ರಿಫೀಲ್ ಪ್ಯಾಕ್, ಕಬ್ಬಿಣದ ತುಂಡುಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಲು ಶೆಡ್‍ಗಳನ್ನು ನಿರ್ಮಿಸಲಾಗಿದೆ.

ಹೀಗೆ ಸಂಗ್ರಹಗೊಂಡ ತ್ಯಾಜ್ಯವನ್ನು ವರ್ಷಕ್ಕೊಮ್ಮೆ ಹರಾಜು ಹಾಕಲಾಗುತ್ತದೆ. ಇಂತಹ ವಸ್ತುಗಳಿಂದ ಈ ವರ್ಷಪುರಸಭೆಗೆ ₹12 ಸಾವಿರ ಆದಾಯ ಬಂದಿದೆ.

‘ಯಾವುದಕ್ಕೂ ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ಹಾಳೆಗಳನ್ನು ಬೇಲ್ ಮಾಡಿ ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುತ್ತೇವೆ. ಹೀಗಾಗಿ ಘಟಕದಲ್ಲಿನ ತ್ಯಾಜ್ಯ ಪ್ರತಿವರ್ಷ ಸಂಪೂರ್ಣವಾಗಿ ವಿಲೇವಾರಿ ಆಗಿ ಮತ್ತೆ ಕಸ ಸಂಗ್ರಹಿಸಲು ಅನುಕೂಲ ಆಗುತ್ತದೆ’ ಎನ್ನುತ್ತಾರೆ ಪುರಸಭೆ ಪರಿಸರ ಎಂಜಿನಿಯರ್ ಆನಂದ ಬದಿ.

‘ಅಂದಾಜು 56 ಕಾಯಂ ಪೌರಕಾರ್ಮಿಕರ ಅವಶ್ಯಕತೆ ಇದೆ. ಆದರೆ ಸದ್ಯ 16 ಪೌರಕಾರ್ಮಿಕರು ಮಾತ್ರ ಇದ್ದು, ಉಳಿದವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಕಾರ್ಮಿಕರು ಇದ್ದರೆ ಇನ್ನೂ ವ್ಯವಸ್ಥಿತವಾಗಿ ಊರನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯ’ ಎಂಬುದು ಪುರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಮತ್ತು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.