ADVERTISEMENT

ಅತಿವೃಷ್ಟಿ : ಶೇಂಗಾ ಇಳುವರಿ ಕುಂಠಿತ

ಪ್ರತಿ ಎಕರೆಗೆ 5–8 ಚೀಲ ಇಳುವರಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 12:08 IST
Last Updated 30 ಸೆಪ್ಟೆಂಬರ್ 2020, 12:08 IST
ಮುಳಗುಂದದಲ್ಲಿ ಕಂಟಿ ಶೇಂಗಾ ಕೊಯ್ಲಿನ ನಂತರ ವಕ್ಕಣಿ ಮಾಡಿ ಒಣಗಲು ಹಾಕಿರುವುದು
ಮುಳಗುಂದದಲ್ಲಿ ಕಂಟಿ ಶೇಂಗಾ ಕೊಯ್ಲಿನ ನಂತರ ವಕ್ಕಣಿ ಮಾಡಿ ಒಣಗಲು ಹಾಕಿರುವುದು   

ಮುಳಗುಂದ : ಈ ಬಾರಿ ಅತಿವೃಷ್ಟಿಯಿಂದ ಶೇಂಗಾ ಬೆಳೆ ಕಾಯಿ ಬಿಡದೇ ಇಳುವರಿ ಕನಿಷ್ಠ ಮಟ್ಟಕ್ಕೆ ಇಳಿದಿದ್ದು ರೈತ ಸಮುದಾಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ.

ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಕಂಟಿ ಶೇಂಗಾ ಕೊಯ್ಲು ನಡೆದಿದ್ದು ಗಿಡವೊಂದಕ್ಕೆ 10 ರಿಂದ 15 ಕಾಯಿಗಳು ಮಾತ್ರ ಹಿಡಿದಿವೆ. ಬಿತ್ತನೆಯ ಆರಂಭದ ದಿನಗಳಲ್ಲಿ ಉತ್ತಮವಾಗಿ ಸುರಿದಿದ್ದ ಮಳೆಯಿಂದ ಶೇಂಗಾ ದೃಢವಾಗಿ ಬೆಳೆದಿತ್ತು, ಆದರೆ ಕಾಯಿ ಹಿಡಿದಿಲ್ಲ.

ಕೆಲವೊಂದು ಹೊಲಗಳಲ್ಲಿ ಮೊಣಕಾಲು ಎತ್ತರಕ್ಕೆ ಶೇಂಗಾ ಬೆಳೆದಿದ್ದನ್ನು ನೋಡಿದರೆ ರೈತರು ಈ ಬಾರಿ ಎಕರೆಗೆ 20 ರಿಂದ 25 ಚೀಲ ಶೇಂಗಾ ಇಳುವರಿ ನಿರೀಕ್ಷೆ ಮಾಡಿದ್ದರು. ಆದರೆ ಶೇಂಗಾ ಕಾಯಿ ಬಿಡುವ ಅವಧಿಯಿಂದ ಕೊಯ್ಲಿಗೆ ಬರುವವರೆಗೂ ಮಳೆ ಬಿಟ್ಟು ಬಿಡದೇ ಸುರಿಯಿತು. ಇದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ನೆಲ ಆರದ ಹಿನ್ನೆಲೆಯಲ್ಲಿ ಕಾಯಿ ಕಮರಿ ಹೋಗಿದೆ. ಹೀಗಾಗಿ ಪ್ರತಿ ಎಕರೆಗೆ 5-8 ಚೀಲ ಮಾತ್ರ ಇಳುವರಿ ಬಂದಿದೆ.

ADVERTISEMENT

ಬಿತ್ತನೆಬೀಜ, ಗೊಬ್ಬರ, ಕಳೆ ತೆಗೆಸಿ ಕಟಾವು, ವಕ್ಕಣಿ ಮಾಡಿ ರಾಶಿ ಮಾಡುವವರೆಗೂ ಪ್ರತಿ ಎಕರೆಗೆ ₹8 ರಿಂದ 10 ಸಾವಿರ ಖರ್ಚು ಮಾಡಲಾಗಿದೆ. ಆದರೆ ಇಳುವರಿ ಕಡಿಮೆಯಾಗಿದ್ದರಿಂದ ಖರ್ಚಿನ ಬಾಬತ್ತು ಸಿಗದ ಸ್ಥಿತಿಯಿದೆ. ಕೊಯ್ಲಿನ ನಂತರವೂ ಕಳೆದ ವಾರ ಮಳೆಗೆ ಸಿಲುಕಿ ಕೊಳೆ ರೋಗಕ್ಕೆ ತುತ್ತಾಗಿದೆ. ಜತೆಗೆ ಆಳಿನ ಖರ್ಚು ಮತ್ತೆ ಹೆಚ್ಚಾಗಿದೆ. ಇದರ ಮಧ್ಯೆ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗುತ್ತಿಲ್ಲ ಎಂದು ರೈತ ಅಲ್ಲಾಭಕ್ಷ ದೊಡ್ಡಮನಿ ಅಳಲು ತೊಡಿಕೊಂಡರು.

ಪ್ರಸಕ್ತ ವರ್ಷದಲ್ಲಿ ಮುಳಗುಂದ ಸೇರಿದಂತೆ ನೀಲಗುಂದ, ಚಿಂಚಲಿ, ಕಲ್ಲೂರ, ಬಸಾಪುರ ಹಾಗೂ ಶೀತಾಲಹರಿ ಗ್ರಾಮಗಳ ವ್ಯಾಪ್ತಿಯಲ್ಲಿ 650 ಹೆಕ್ಟೇರ್ ಭೂಮಿಯಲ್ಲಿ ಕಂಟಿ ಶೇಂಗಾ ಮತ್ತು 1,300 ಹೆಕ್ಟೇರ್ ನಲ್ಲಿ ಬಳ್ಳಿ ಶೇಂಗಾ ಬಿತ್ತನೆ ಮಾಡಲಾಗಿದೆ. ಕಂಟಿ ಶೇಂಗಾ ವಕ್ಕಣಿ ನಂತರ ಬಳ್ಳಿ ಶೇಂಗಾ ಕೂಡ ಕೊಯ್ಲಿಗೆ ಬರಲಿದ್ದು ಅದರ ಇಳುವರಿ ಕೂಡ ಕಡಿಮೆಯಾಗಲಿದೆ ಎಂದು ರೈತರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.