
ಗದಗ: ‘ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉದ್ದೇಶ’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇವುಗಳ ಮಹತ್ವ ಅರ್ಥೈಸಿಕೊಂಡು ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಅರ್ಹರಿಗೆ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು. ಸಾರ್ವಜನಿಕರ ಸುರಕ್ಷತೆಗಾಗಿ ಗದಗ ಹೊಸ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅವುಗಳು ವ್ಯವಸ್ಥಿತವಾಗಿ ಇರುವ ಕುರಿತು ತಪಾಸಣೆ ನಡೆಸಬೇಕು’ ಎಂದು ತಿಳಿಸಿದರು.
ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಬಿ. ಅಳಗವಾಡಿ ಮಾತನಾಡಿ, ‘ಪಡಿತರ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಮರ್ಪಕ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಣೆಯಾಗುತ್ತಿರುವ ಕುರಿತು ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ, ಯೋಜನಾ ನಿರ್ದೇಶಕ ಎಂ.ಎಸ್.ಚಳಗೇರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರಾದ ಶರಣಪ್ಪ ಬೆಟಗೇರಿ, ಶರೀಫ್ ಬಿಳಿಯಲಿ, ನಾಗರಾಜ ಶಿವಪ್ಪ ಮಡಿವಾಳರ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಪುಲಕೇಶಿಗೌಡ ಪಾಟೀಲ, ಈಶಣ್ಣ ಹುಣಸೀಕಟ್ಟಿ, ಗೀತಾ ಸುರೇಶ ಬೀರಣ್ಣವರ, ವೀರಯ್ಯ ಮಠಪತಿ, ಆರ್.ಆರ್. ಗಡ್ಡದ್ದೇವರಮಠ, ಗ್ಯಾರಂಟಿ ಯೋಜನೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.