
ಬೇಡಿಕೆ ಈಡೇರಿಸುವುದಾಗಿ ಸಚಿವರ ಭರವಸೆ | ಹೋರಾಟದಲ್ಲಿ ವಿವಿಧ ಜಿಲ್ಲೆ ಉಪನ್ಯಾಸಕರು ಭಾಗಿ | ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಹೋರಾಟ
ಗದಗ: ‘ಅತಿಥಿ ಉಪನ್ಯಾಸಕರಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಅವರ ಚರ್ಚೆ ನಡೆಯುತ್ತಿದೆ. ಯಾರಿಗೂ ಅನ್ಯಾಯವಾಗದ ರೀತಿ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು. ನಿಮಗೆ ಒಂದು ಸೂಕ್ತ ಅವಕಾಶ ಮಾಡಿಕೊಡಲು ಪ್ರಯತ್ನಿಸಲಾಗುವುದು’ ಎಂದು ಸಚಿವ ಎಚ್. ಕೆ. ಪಾಟೀಲ ಹೇಳಿದರು.
ಪಟ್ಟಣದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ 13ನೇ ದಿನ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
‘ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ನೀಡಿದ ಭರವಸೆ ಮೇರೆಗೆ ಅತಿಥಿ ಉಪನ್ಯಾಸಕರು ಹೋರಾಟ ಸ್ಥಗಿತಗೊಳಿಸಿದರು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಹನಮಂತಗೌಡ ಕಲ್ಮನಿ ಹೇಳಿದರು.
ಹೋರಾಟದಲ್ಲಿ ಶಿರಸಿ, ಹಾವೇರಿ, ಧಾರವಾಡ, ಕೊಪ್ಪಳ, ಅಂಕೋಲಾ, ಕುಮಟಾ, ದಾಂಡೇಲಿ, ಬೆಳಗಾವಿ, ಬಾಗಲಕೋಟೆ, ಗದಗ ಸೇರಿದಂತೆ ವಿವಿಧ ಜಿಲ್ಲೆಯ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.