ADVERTISEMENT

ಮುಂಡರಗಿ | ಅನಿಶ್ಚಿತ ಸ್ಥಿತಿಯಲ್ಲಿ ಅತಿಥಿ ಶಿಕ್ಷಕರು: ವಿದ್ಯಾರ್ಥಿಗಳಿಗೂ ತೊಂದರೆ

ಕಾಯಂ ಸಿಬ್ಬಂದಿ ಇಲ್ಲದೇ ಸೊರಗಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 3:12 IST
Last Updated 1 ಡಿಸೆಂಬರ್ 2025, 3:12 IST
ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ
ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ   

ಮುಂಡರಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರು ಹಾಗೂ ಶಿಕ್ಷಕರು ಇಲ್ಲವಾದ್ದರಿಂದ ಬಹುತೇಕ ಶಾಲೆ, ಕಾಲೇಜುಗಳ ಪಾಠ, ಪ್ರವಚನ ಹಾಗೂ ಬೋಧನೆಯು ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದೆ.

ಕೆಲಸಕ್ಕೆ ತಕ್ಕ ಹಾಗೂ ನ್ಯಾಯಸಮ್ಮತ ಪ್ರತಿಫಲ ದೊರೆಯದೇ ಇರುವುದರಿಂದ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದು, ಸೇವಾ ಭದ್ರತೆ ದೊರೆಯದೇ ಅವರೆಲ್ಲ ಹಲವು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ.

ತಾಲ್ಲೂಕಿನಾದ್ಯಂತ 99 ಸರ್ಕಾರಿ ಪ್ರಾಥಮಿಕ ಶಾಲೆಗಳು, 5 ಅನುದಾನಿತ ಹಾಗೂ 19 ಅನುದಾನರಹಿತ ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅದೇ ರೀತಿ 18 ಸರ್ಕಾರಿ ಪ್ರೌಢಶಾಲೆಗಳು, 12 ಅನುದಾನಿತ ಹಾಗೂ 5 ಅನುದಾನರಹಿತ ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

ADVERTISEMENT

ಬಹುತೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 106 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೌಢಶಾಲೆಗಳಲ್ಲಿ ವಿವಿಧ ವಿಷಯಗಳ ಒಟ್ಟು 26 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯು ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ₹10 ಸಾವಿರ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ₹10,500 ಮಾಸಿಕ ಗೌರವ ವೇತನ ನೀಡುತ್ತಲಿದೆ.

ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವ ಹೊಣೆಯು ಆಯಾ ಶಾಲೆಗಳ ಮುಖ್ಯಶಿಕ್ಷಕರ ಮೇಲಿದ್ದು, ಅರ್ಹತೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾಗುವ ಶಿಕ್ಷಕರನ್ನು ಪ್ರತಿ ವರ್ಷ ಮಾರ್ಚ್‌ನಲ್ಲಿ (ಶೈಕ್ಷಣಿಕ ವರ್ಷದ ಕೊನೆಯ ತಿಂಗಳು) ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ಹೀಗಾಗಿ ಅತಿಥಿ ಶಿಕ್ಷಕರು ವರ್ಷದಲ್ಲಿ ಕೇವಲ ಹತ್ತು ತಿಂಗಳು ಮಾತ್ರ ಕೆಲಸ ಮಾಡಿ ಮನೆಗೆ ಹೋಗಬೇಕಿದೆ.

ಅತಿಥಿ ಶಿಕ್ಷಕರ ಸಮಸ್ಯೆಗಳಂತೆ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರು ಹಲವು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪಟ್ಟಣದಲ್ಲಿ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನು ಒಳಗೊಂಡಿದೆ. ಕಾಲೇಜಿನಲ್ಲಿ ಒಟ್ಟು 441 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಾಲೇಜಿನಲ್ಲಿ ಒಟ್ಟು 23 ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಕೇವಲ ಹತ್ತು ಕಾಯಂ ಉಪನ್ಯಾಸಕರಿದ್ದಾರೆ.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಪದವಿ ಕಾಲೇಜಿನಲ್ಲಿ ಒಟ್ಟು 942 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 15 ಅತಿಥಿ ಉಪನ್ಯಾಸಕರು ಹಾಗೂ 7 ಕಾಯಂ ಉಪನ್ಯಾಸಕರಿದ್ದಾರೆ.

ಈ ಮೊದಲು ಸ್ನಾತಕೋತ್ತರ ಪದವಿಯಲ್ಲಿ ಶೇ 55ಕ್ಕಿಂತ ಹೆಚ್ಚು ಅಂಕ ಗಳಿಸಿದವರನ್ನು ಗರಿಷ್ಠ ಅಂಕಗಳ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಅವರಿಗೆ ಮಾಸಿಕ ₹30 ಸಾವಿರ ವೇತನ ನೀಡಲಾಗುತ್ತಿತ್ತು. ಈಗ ಯುಜಿಸಿಯು (ವಿಶ್ವವಿದ್ಯಾನಿಲಯ ಅನುದಾನ ಆಯೋಗ) ಅತಿಥಿ ಉಪನ್ಯಾಸಕರ ನೇಮಕಕ್ಕೂ ಹಲವು ನಿಬಂಧನೆಗಳನ್ನು ವಿಧಿಸಿದ್ದು, ರಾಜ್ಯದಾದ್ಯಂತ ಸುಮಾರು 6,000 ಅತಿಥಿ ಉಪನ್ಯಾಸಕರು ತಮ್ಮ ತಾತ್ಕಾಲಿಕ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ.

ಅತಿಥಿ ಉಪನ್ಯಾಸಕ ಹುದ್ದೆ ಬೇಕೆನ್ನುವವರು ಸಹಿತ ಈಗ ನೆಟ್, ಸ್ಲೆಟ್‌, ಎಂ. ಫಿಲ್, ಪಿಎಚ್‌ಡಿ ಮೊದಲಾದ ಅರ್ಹತೆಗಳನ್ನು ಹೊಂದಿರಬೇಕೆಂದು ಯುಜಿಸಿ ಆದೇಶಿಸಿದ್ದು, ಅಂತಹ ವಿಶೇಷ ಅರ್ಹತೆ ಇಲ್ಲದ ಅತಿಥಿ ಉಪನ್ಯಾಸಕರು ಈಗ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ನೂರಾರು ಅತಿಥಿ ಉಪನ್ಯಾಸಕರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಬಹುತೇಕರು ವಯೋಮಿತಿ ಮೀರುತ್ತಿದ್ದು, ಏನು ಮಾಡಬೇಕೆಂದು ತಿಳಿಯದೇ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಅತ್ತ ಅತಿಥಿ ಉಪನ್ಯಾಸಕ ಹುದ್ದೆಯು ದೊರೆಯದೇ, ಇತ್ತ ನೇಮಕಾತಿಯೂ ನಡೆಯದೇ ಅವರೆಲ್ಲ ಸಂಪೂರ್ಣವಾಗಿ ಅತಂತ್ರವಾಗಿದ್ದಾರೆ.

ಪಟ್ಟಣದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು 834 ವಿದ್ಯಾರ್ಥಿಗಳಿದ್ದು, ಅಲ್ಲಿ ಒಟ್ಟು 26 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 13 ಪೂರ್ಣಕಾಲಿಕ ಉಪನ್ಯಾಸಕರಿದ್ದಾರೆ. ತಾಲ್ಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಹಲವು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲಾ ಸೇವಾ ಭದ್ರತೆ ಇಲ್ಲದೆ ಅತಂತ್ರರಾಗಿದ್ದು, ಹುದ್ದೆ ಭರ್ತಿ ಮಾಡಿಕೊಳ್ಳದ ಸರ್ಕಾರವನ್ನು ಶಪಿಸುತ್ತಿದ್ದಾರೆ. 

ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಈ ಅವ್ಯವಸ್ಥೆ ಸರಿಪಡಿಸಿ, ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಅತೀ ಹೆಚ್ಚು ಅತಿಥಿ ಉಪನ್ಯಾಸಕರನ್ನು ಹೊಂದಿರುವ ಮುಂಡರಗಿಯ ಜಗದ್ಗುರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜು
ತಾಲ್ಲೂಕಿನಾದ್ಯಂತ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಎಲ್ಲ ಶಿಕ್ಷಕರನ್ನು ಪಾರದರ್ಶಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಿಯಮಿತವಾಗಿ ಎಲ್ಲರಿಗೂ ಸಕಾಲದಲ್ಲಿ ವೇತನ ನೀಡಲಾಗುತ್ತದೆ.
ಗಂಗಾಧರ ಅಣ್ಣಿಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮುಂಡರಗಿ

ಯಾರು ಏನಂತಾರೆ?

ಯುಜಿಸಿ ಅರ್ಹತೆಗಳು ಅಪ್ರಸ್ತುತ ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತಂತೆ ಪ್ರಸ್ತುತ ಯುಜಿಸಿ ಹೊರಡಿಸಿರುವ ನಿಯಮಗಳು ಹಾಗೂ ಆಯ್ಕೆಗೆ ಸಂಬಂಧಿಸಿದ ಮಾನದಂಡಗಳು ಅಸಮರ್ಪಕವಾಗಿದ್ದು ಅವುಗಳ ಕಾರಣದಿಂದ ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ. ಈ ಕುರಿತು ಅತಿಥಿ ಉಪನ್ಯಾಸಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಇತ್ತ ಗಮನ ಹರಿಸದಿರುವುದು ದುರ್ದೈವದ ಸಂಗತಿಯಾಗಿದೆ.

-ಪ್ರೊ. ಮಿಟ್ಯಾ ನಾಯಕ, ಅತಿಥಿ ಉಪನ್ಯಾಸಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಹಿಂದಿನವರನ್ನು ಕೈಬಿಡುವುದು ಅಸಮಂಜಸ ಯುಜಿಸಿ ಅರ್ಹತೆ ಇಲ್ಲದಿದ್ದರೂ ಕಳೆದ 15-20ವರ್ಷಗಳಿಂದ ಅತ್ಯಲ್ಪ ವೇತನ ಪಡೆದುಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಯುಜಿಸಿ ಮಾನದಂಡಗಳ ಕಾರಣದಿಂದ ಕೈಬಿಡುವುದು ಸರಿಯಲ್ಲ. ಪ್ರತಿ ವರ್ಷ ಕೌನ್ಸೆಲಿಂಗ್ ಮಾಡದೆ ಈ ಹಿಂದೆ ಕೆಲಸ ಮಾಡಿದವರನ್ನು ಮುಂದುವರಿಸಿ ಅವರಿಗೆ ಸೇವಾ ಭದ್ರತೆ ಒದಗಿಸಬೇಕು.

–ಮಂಜುನಾಥ ಗದಗ ಅತಿಥಿ ಉಪನ್ಯಾಸಕರು ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜು ಮುಂಡರಗಿ

ಹುದ್ದೆ ಅನಿಶ್ಚಿತ ಅತಿಥಿ ಶಿಕ್ಷಕರ ಹುದ್ದೆ ಸದಾ ಅನಿಶ್ಚಿತತೆಯಿಂದ ಕೂಡಿದ್ದು ಕಾರ್ಯನಿರ್ವಹಿಸುವ ಹುದ್ದೆಗೆ ಪೂರ್ಣಕಾಲಿಕ ಶಿಕ್ಷಕರು ಬಂದ ತಕ್ಷಣ ಅತಿಥಿ ಶಿಕ್ಷಕರು ತಮ್ಮ ಹುದ್ದೆಯನ್ನು ತೆರವುಗೊಳಿಸಿ ಬೇರೊಂದು ಶಾಲೆಯನ್ನು ನೋಡಿಕೊಳ್ಳಬೇಕು. ಈ ಕಾರಣದಿಂದಾಗಿ ನಾಲ್ಕು ವರ್ಷದಲ್ಲಿ ನಾನು ಆರು ಶಾಲೆಗಳಲ್ಲಿ ಬದಲಿಸಬೇಕಾಯಿತು.

–ಹರೀಶ ಗಂಗಾವತಿ ಅತಿಥಿ ಶಿಕ್ಷಕ ಶಿಂಗಟಾಲೂರ ಸರ್ಕಾರಿ ಪ್ರೌಢಶಾಲೆ

ಬೋಧನೆ ಅಪೂರ್ಣ ಬಹುತೇಕ ಎಲ್ಲ ಕಾಲೇಜುಗಳ ಬೋಧನೆಯು ಅತಿಥಿ ಉಪನ್ಯಾಸಕರನ್ನು ಅವಲಂಬಿಸಿದ್ದು ಸರ್ಕಾರ ಅವರ ಬೇಡಿಕೆಗಳ ಈಡೇರಿಕೆಯತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಪಠ್ಯಕ್ರಮ ಪೂರ್ಣಗೊಳ್ಳದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ.

–ಆಕಾಶ ಕೋಡಿಹಳ್ಳಿ ಪದವಿ ವಿದ್ಯಾರ್ಥಿ ಮುಂಡರಗಿ

Cut-off box - ನೇಮಕಾತಿಗೆ ದೊರೆಯದ ಅನುಮತಿ ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಹಲವಾರು ಖಾಸಗಿ ಅನುದಾನಿತ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಲಿವೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ ಮರಣ ಹಾಗೂ ಮತ್ತಿತರ ಕಾರಣಗಳಿಂದ ತೆರವಾಗಿರುವ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡುತ್ತಿಲ್ಲ. ಹೀಗಾಗಿ ಎಲ್ಲ ಖಾಸಗಿ ಶಾಲಾ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರು ಸಂಸ್ಥೆಯವರು ನೀಡುವ ಅಲ್ಪ ವೇತನವನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. 2015ರಿಂದ 2020ರವರೆಗಿನ ಅವಧಿಯಲ್ಲಿ ನಿವೃತ್ತರಾಗಿರುವ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ. ಖಾಲಿ ಹುದ್ದೆ ಭರ್ತಿಗೆ ಒಳ ಮೀಸಲಾತಿ ಅನುಷ್ಠಾನ ಸೇರಿದಂತೆ ಸರ್ಕಾರ ಹಲವಾರು ನಿಬಂಧನೆಗಳನ್ನು ಹೇರಿದ್ದು ಹುದ್ದೆಗಳ ಭರ್ತಿಗೆ ತೊಡಕಾಗಿರುವ ಅಂಶಗಳನ್ನು ಸರ್ಕಾರವೇ ನಿವಾರಿಸಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹೇಳುತ್ತಿದ್ದಾರೆ.

ಸಂಸ್ಥೆಗಳಿಗೆ ಹೆಚ್ಚುವರಿ ಹೊರೆ

ಸರ್ಕಾರ ಖಾಲಿ ಹುದ್ದೆ ಭರ್ತಿಗೆ ಅನುಮತಿ ನೀಡದಿರುವ ಕಾರಣದಿಂದ ಹಲವು ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತಲಿವೆ. ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಎಲ್ಲ ಅಂಗ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದುಕೊಳ್ಳುತ್ತಿದ್ದು ಅದರಲ್ಲಿಯೇ ಶಾಲಾ ಕಾಲೇಜುಗಳ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ನೀಡಬೇಕಿದೆ. ‘ನಮ್ಮ ವಿದ್ಯಾ ಸಮಿತಿಯ ಅಡಿಯಲ್ಲಿ 33 ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಸಿಬ್ಬಂದಿ ವೇತನಕ್ಕಾಗಿಯೇ ಮಾಸಿಕ ₹12 ಲಕ್ಷದಿಂದ ₹14ಲಕ್ಷ ನೀಡಬೇಕಿದೆ’ ಎಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.