ADVERTISEMENT

ಗದಗ | ‘ಅತಿಥಿ’ಗಳಿಗೆ ಅವಕಾಶ ನೀಡಿ: ಕಲ್ಮನಿ ಆಗ್ರಹ

12ನೆ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:44 IST
Last Updated 6 ಡಿಸೆಂಬರ್ 2025, 2:44 IST
ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನಮಂತಗೌಡ ಆರ್‌. ಕಲ್ಮನಿ ಮಾತನಾಡಿದರು
ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನಮಂತಗೌಡ ಆರ್‌. ಕಲ್ಮನಿ ಮಾತನಾಡಿದರು   

ಗದಗ: ‘ಸರ್ಕಾರದ ನಿರ್ಧಾರದಿಂದಾಗಿ ಹಲವು ವರ್ಷಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪಾಠ ಮಾಡುತ್ತ ಬಂದಿದ್ದ ಆರು ಸಾವಿರ ಅತಿಥಿ ಉಪನ್ಯಾಸಕ ಕುಟುಂಬ ಬೀದಿಗೆ ಬೀಳುವಂತಾಗಿದೆ. ಮಾನವೀಯತೆ ಆಧಾರದ ಮೇಲೆ ಸರ್ಕಾರ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಬೇಕು. ಜತೆಗೆ, ಸೇವೆ ಸಲ್ಲಿಸಿ ಹೊರಗುಳಿದವರಿಗೂ ಅವಕಾಶ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನಮಂತಗೌಡ ಆರ್‌. ಕಲ್ಮನಿ ಆಗ್ರಹಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಸರ್ಕಾರ ಅತಿಥಿ ಉಪನ್ಯಾಸಕರ ಬದುಕಿನ ಜತೆಗೆ ಚೆಲ್ಲಾಟವಾಡಬಾರದು. ಬುದ್ದಿಜೀವಿಗಳು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳು ಇವರ ಪರವಾಗಿ ಧ್ವನಿ ಎತ್ತಬೇಕು. ಸರ್ಕಾರ ಶೀಘ್ರವಾಗಿ ನ್ಯಾಯ ದೊರಕಿಸಿ ಕೊಡದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಅತಿಥಿ ಉಪನ್ಯಾಸಕಿ ಗೀತಾ ಎಂ.ಕೆ. ಮಾತನಾಡಿ, ‘12 ದಿನಗಳಿಂದ ಹೋರಾಟದಲ್ಲಿ ನಿರತರಾಗಿರುವ ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರ್ಕಾರ ಕಾಳಜಿ ತೋರಿಸದಿರುವುದು ಆತಂಕ ಮೂಡಿಸಿದೆ’ ಎಂದು ಅಲವತ್ತುಕೊಂಡರು.

‘ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಹೊರಗಿಡಬಾರದು. ಇದ್ದವರನ್ನೇ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

ಅತಿಥಿ ಉಪನ್ಯಾಸಕ ಶರಣಪ್ಪ ಮಡಿವಾಳರ ಮಾತನಾಡಿ, ‘ಮಾನವೀಯತೆ ಅಡಿ ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ಬಿ.ಎ, ಬಿಕಾಂ, ಬಿಎಸ್‌ಸಿಯ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಕಟ್ಟಿದ ನಮಗೆ ಇವತ್ತು ಯುಜಿಸಿ ನಿಯಮಾವಳಿ ಮುಂದಿಟ್ಟು 6 ಸಾವಿರ ಕುಟುಂಬಗಳನ್ನು ಬೀದಿಗೆ ಹಾಕುತ್ತಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಹೋರಾಟದಲ್ಲಿ ಎಂ.ವಿ.ದೇಸಾಯಿಗೌಡರ, ಶರಣು ಮರಗುದ್ದಿ, ಭಗತ್ ಸಿಂಗ್‌ ನವಲೂರಕರ, ಎಸ್.ಎ.ಸಂಗನಾಳ, ಶಾಂತನಗೌಡ ಹುಲ್ಲೂರ, ಶ್ರೀದೇವಿ, ರೇಖಾ, ಗೀತಾ ಮೇಟಿ ಸೇರಿದಂತೆ ರಾಯಚೂರು, ಹೊಸಪೇಟೆ, ದಾಂಡೇಲಿ, ಹೊನ್ನಾವರ, ಕಿತ್ತೂರು, ಕಾರವಾರ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಊರಿನ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.