ADVERTISEMENT

ಕೆರೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆಗೆ ಆಹ್ವಾನಿಸಿದರೇ ಗೈರು: ಎಚ್‌ಡಿಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 7:57 IST
Last Updated 24 ಆಗಸ್ಟ್ 2021, 7:57 IST

ಲಕ್ಷ್ಮೇಶ್ವರ/ಶಿರಹಟ್ಟಿ: ‘ಕೆರೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆಗೆ ಬನ್ನಿ ಎಂದು ಆಹ್ವಾನಿಸಿ ಶಾಸಕ ರಾಮಣ್ಣ ಲಮಾಣಿ ಹಾಗೂ ಸಚಿವ ಸಿ.ಸಿ.ಪಾಟೀಲ ಅವರೇ ಗೈರಾಗಿದ್ದಾರೆ. ಕಾರ್ಯಕ್ರಮದ ಶ್ರೇಯಸ್ಸು ಕುಮಾರಸ್ವಾಮಿಗೆ ಹೋಗಬಹುದೆಂದುಅವರಿಬ್ಬರೂ ಅಪಾರ್ಥ ಮಾಡಿಕೊಂಡಂತಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಸೋಮವಾರ ಲಕ್ಷ್ಮೇಶ್ವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿರಹಟ್ಟಿ ತಾಲ್ಲೂಕಿನ ಸುಗ್ನಳ್ಳಿ ಗ್ರಾಮದ ಆಲದಮ್ಮನ ಕೆರೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳಿಗಾಗಿ ₹24 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಕೆರೆಯ ಭೂಮಿಪೂಜೆಗೆ ಬರಲೇ ಎಂದು ಸಚಿವ ಸಿ.ಸಿ.ಪಾಟೀಲ ಮತ್ತು ಶಾಸಕ ರಾಮಣ್ಣ ಲಮಾಣಿ ಅವರನ್ನು ಕೇಳಿಕೊಂಡಿದ್ದೆ. ಅವರೂ ಬನ್ನಿ ಎಂದು ಆಹ್ವಾನಿಸಿದ್ದರು. ಆದರೆ ಇಂದು ಅವರೇ ಇಲ್ಲ’ ಎಂದು ಕಿಡಿಕಾರಿದರು.

‘ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇದೇ ರಾಮಣ್ಣ ಲಮಾಣಿ ಕ್ಷೇತ್ರದ ಅಭಿವೃದ್ಧಿಗೆ ₹50 ಕೋಟಿ ಅನುದಾನದ ಬೇಡಿಕೆ ಇಟ್ಟಿದ್ದರು. ಬಿಜೆಪಿ ಶಾಸಕ ಎಂದು ನೋಡದೇ ಅನುದಾನ ಬಿಡುಗಡೆ ಮಾಡಿದ್ದೆ. ಆದರೆ ಈಗ ಅವರ ಆಹ್ವಾನದ ಮೇರೆಗೆ ಕ್ಷೇತ್ರಕ್ಕೆ ಬಂದರೆ ಅವರೇ ಇಲ್ಲ. ನಾನೊಬ್ಬ ಜವಾಬ್ದಾರಿಯುತ ಮನುಷ್ಯ. ಸ್ಥಳೀಯ ಶಾಸಕರು ಇಲ್ಲದೇ ಅಧಿಕೃತವಾಗಿ ಭೂಮಿಪೂಜೆ ಮಾಡಬಾರದು. ಆದರೆ, ಸುಗ್ನಳ್ಳಿ ಗ್ರಾಮಸ್ಥರ ಮನವಿ ಮೇರೆಗೆ ಅಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ಕುಟುಕಿದರು.

ADVERTISEMENT

‘ಈಗಾಗಲೇ ಎಲ್ಲ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು ₹24 ಕೋಟಿ ವೆಚ್ಚದ ಕಾಮಗಾರಿಗಳನ್ನು ಪ್ರಾಮಾಣಿಕವಾಗಿ ಮುಗಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.