ADVERTISEMENT

ಬೆಳೆ ಜಲಾವೃತ: ಮನೆಗಳು ಕುಸಿತ

ಅಹೋರಾತ್ರಿ ಸುರಿದ ಮಳೆ: ರಸ್ತೆ ಮೇಲೆ ಹರಿದ ಚರಂಡಿ ನೀರು, ಜನಜೀವನ ಸಂಪೂರ್ಣ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:40 IST
Last Updated 27 ಸೆಪ್ಟೆಂಬರ್ 2020, 2:40 IST
ನರಗುಂದದಲ್ಲಿ ಮನೆಗಳು ಕುಸಿದಿವೆ
ನರಗುಂದದಲ್ಲಿ ಮನೆಗಳು ಕುಸಿದಿವೆ   

ನರಗುಂದ: ಪಟ್ಟಣ ಹಾಗೂ ತಾಲ್ಲೂಕಿನ ಜನರು ಮಳೆಗೆ ತತ್ತರಿಸಿದ್ದು ಶುಕ್ರವಾರ ಸಂಜೆಯಿಂದ ಅಹೋರಾತ್ರಿ ಮಳೆ ಸುರಿದರೆ, ಶನಿವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನದವರೆಗೂ ಜೋರಾಗಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು.

ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಗೆ ರೈತರು ತೀವ್ರ ತೊಂದರೆಗೆ ಒಳಗಾಗಿದ್ದರು, ಈಗ ಮತ್ತೆ ಮಳೆ ಸುರಿದ ಪರಿಣಾಮ ಬೆಳೆ ಹಾನಿಯಾಗಿದೆ. ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಹಲವಾರು ಮನೆಗಳು ಕುಸಿದಿವೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಶುಕ್ರವಾರ ರಾತ್ರಿ ಕೆಲವು ಮನೆಗಳಿಗೆ ನೀರು ನುಗ್ಗಿ ತಗ್ಗು ಪ್ರದೇಶದ ನಿವಾಸಿಗಳಿಗೆ ತೊಂದರೆಯಾಯಿತು.

ಕಣಕಿಕೊಪ್ಪಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಇರುವ ಹಿರೇಹಳ್ಳ ತುಂಬಿ ಹರಿದು ನರಗುಂದ-ಕಣಕಿಕೊಪ್ಪದ ನಡುವೆ ಸಂಪರ್ಕ ಸ್ಥಗಿತಗೊಂಡಿದೆ. ಈ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿತ್ತು, ಈಗ ಅದು ಸಂಪೂರ್ಣ ಕಿತ್ತು ಹೋಗಿದೆ. ಕೆಳವು ಹಳ್ಳಗಳು ಶುಕ್ರವಾರ ರಾತ್ರಿ ತುಂಬಿ ಹರಿದು ಸಂಚಾರಕ್ಕೆ ತೊಂದರೆ ಆಯಿತು.

ADVERTISEMENT

ಮನೆ ಕುಸಿತ : ಪಟ್ಟಣದದ ಕಸಬಾ, ಅರ್ಭಾಣ, ದಂಡಾಪೂರ ಸೇರಿದಂತೆ ವಿವಿಧ ಓಣಿಗಳಲ್ಲಿ ಹಲವಾರು ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಮನೆಗಳು ಸೋರುತ್ತಿವೆ.

ಬೆಳೆ ಹಾನಿ: ಶುಕ್ರವಾರ ಅಹೋರಾತ್ರಿ ಸುರಿದ ಮಳೆಗೆ ಬಹುತೇಕ ಎಲ್ಲ ಬೆಳೆಗಳು ಹಾನಿಯಾಗಿವೆ, ಈರುಳ್ಳಿ, ಹತ್ತಿ, ಗೋವಿನಜೋಳ ಹಾಗೂ ಮೆನಸಿನಕಾಯಿ ಬೆಳೆಗಳು ಜಲಾವೃತವಾಗಿವೆ.

ನರೇಗಲ್: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಮಳೆ‌ ಸತತವಾಗಿ ಸುರಿಯುತ್ತಿದೆ.

ರಾತ್ರಿ 12 ಗಂಟೆಗೆ ಆರಂಭಗೊಂಡ ಜಿಟಿಜಿಟಿ ಮಳೆ ಶನಿವಾರ ನಸುಕಿನ ಜಾವದ ವರೆಗೆ ಸುರಿಯಿತು. ಬಳಿಕ ಕೆಲಕಾಲ ಬಿರುಸಾಗಿ ಸುರಿದ ಮಳೆ ಮತ್ತೆ ಜಿಟಿಜಿಟಿಯಾಗಿ ಸುರಿಯಿತು. ಬಿಡುವು ಕೊಡದೆ ಮಳೆ
ಸುರಿಯುತ್ತಿರುವ ಕಾರಣ ಶನಿವಾರ ಬೆಳಿಗ್ಗೆ ದೈನಂದಿನ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಯಿತು. ಕೆಲವರು ಮಳೆಯಲ್ಲೇ ನೆನೆದುಕೊಂಡು ಹೋದರು. ಮತ್ತೆ ಕೆಲವರು ಕೊಡೆಗಳನ್ನು, ಜಾಕೆಟ್‌ಗಳನ್ನು ಆಶ್ರಯಿಸಿಕೊಂಡು ಹೆಜ್ಜೆ ಹಾಕಿದರು.

ಸತತ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ
ವಿರಳವಾಗಿದೆ. ಅನ್ನದಾನೇಶ್ವರ ಕಾಲೇಜಿನ ರಸ್ತೆ, 3ನೇ ವಾರ್ಡ್, 6ನೇ ವಾರ್ಡ್, ಕೋಚಲಾಪುರ, ಕೋಡೊಕೊಪ್ಪ, ದ್ಯಾಂಪುರ ಸೇರಿದಂತೆ ಹಲವೆಡೆ ರಸ್ತೆ ಮೇಲೆ‌ ನೀರು ಸಂಗ್ರಹಗೊಂಡಿದೆ.

ಹೋಬಳಿಯ ಮಾರನಬಸರಿ, ಜಕ್ಕಲಿ, ನಿಡಗುಂದಿ, ಅಬ್ಬಿಗೇರಿ, ನಿಡಗುಂದಿ ಕೊಪ್ಪ, ಹಾಲಕೆರೆ, ಕಳಕಾಪುರ, ಹೊಸಳ್ಳಿ, ತೋಟಗಂಟಿ, ಬೂದಿಹಾಳ, ಡ. ಸ. ಹಡಗಲಿ, ಯರೆಬೇಲೇರಿ, ಕುರುಡಗಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಮಳೆಯ ಆರ್ಭಟಕ್ಕೆ ಮಣ್ಣಿನಮನೆ, ಗುಡಿಸಲಲ್ಲಿ ವಾಸಿಸುವ ಜನರಲ್ಲಿ ಆತಂಕ ಹೆಚ್ಚಾಗಿದೆ. ಬೆಳೆಗಳು ನೀರಿನಲ್ಲಿ ನಿಂತಿರುವುದರಿಂದ ರೈತರ ಅಪಾರ ಪ್ರಮಾಣದ ಬೆಳೆ ಅತಿವೃಷ್ಟಿಯಿಂದ ಹಾಳಾಗುವ ಸಾಧ್ಯತೆ ಇದೆ ಎಂದು ರೈತ ಮಲ್ಲಪ್ಪ ದಿಂಡೂರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.