ADVERTISEMENT

ಮನುಕುಲದ ಶ್ರೇಯಕ್ಕೆ ದಾರಿ ತೋರಿದ ಮಲ್ಲಮ್ಮ

ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ: ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:08 IST
Last Updated 10 ಮೇ 2025, 16:08 IST
ಗದಗ ನಗರದ ಶಿವಾನಂದ ಕಲ್ಯಾಣ‌ ಮಂಟಪದಲ್ಲಿ ಶನಿವಾರ ನಡೆದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು
ಗದಗ ನಗರದ ಶಿವಾನಂದ ಕಲ್ಯಾಣ‌ ಮಂಟಪದಲ್ಲಿ ಶನಿವಾರ ನಡೆದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು   

ಗದಗ: ‘ವೇಮನರನ್ನು ತಿದ್ಧುವ ಮೂಲಕ‌ ಸಮಾಜಕ್ಕೆ ದಾರ್ಶನಿಕ, ಮಹಾ ತತ್ವಜ್ಞಾನಿಯನ್ನು ನೀಡಿದಂತಹ ಮಹಾನುಭಾವೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದ ಶಿವಾನಂದ ಕಲ್ಯಾಣ‌ ಮಂಟಪದಲ್ಲಿ ಶನಿವಾರ ನಡೆದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹೇಮರಡ್ಡಿ ಮಲ್ಲಮ್ಮ‌ ಅವರನ್ನು ಜನರಿಗೆ ಸಾಕಷ್ಟು ನಾಟಕಗಳು, ಕೀರ್ತನೆ ಹಾಗೂ ಪುರಾಣಗಳ‌ ಮೂಲಕ ಪರಿಚಯಿಸಲಾಗುತ್ತಿದೆ. ಭಕ್ತಿಯ ಪರಕಾಷ್ಠೆ, ಶ್ರೇಷ್ಠತೆಯನ್ನು ಸಮಾಜಕ್ಕೆ ತೊರಿಸಿದವರು ಮಲ್ಲಮ್ಮ’ ಎಂದರು.

ADVERTISEMENT

‘ಮಹನೀಯರ ಜಯಂತಿಗಳು ಕೇವಲ‌ ಒಂದು ಸಮುದಾಯಕ್ಕೆ‌ ಮಾತ್ರ ಸೀಮಿತವಾಗಬಾರದು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತಹ ಕೆಲಸ ಆಗಬೇಕು. ಜಾತಿ, ಮತ ಎಂದು ಭೇದಭಾವ ಮಾಡದೆ ಇಡೀ‌ ಮನುಕುಲದ ಶ್ರೇಯಕ್ಕೆ ದಾರಿ‌‌ ತೋರಿದಂತಹ ಹೇಮರಡ್ಡಿ ಮಲ್ಲಮ್ಮ ಅವರಿಗೆ ನಾವೆಲ್ಲರೂ ಸದಾ ಚಿರಋಣಿ ಆಗಿರಬೇಕು’ ಎಂದರು.

ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ‘ಕುಟುಂಬಗಳು ಒಗ್ಗಟ್ಟಿನಿಂದ ಹೇಗೆ ಸಾಗಬೇಕು ಎಂಬ‌ ಪರಿಪಾಠವನ್ನು ಕಲಿಸಿದಂತಹ ಮಹಾ‌ಮಾತೆ ಹೇಮರಡ್ಡಿ ಮಲ್ಲಮ್ಮ‌ಅವರು ಸಂಸಾರದಲ್ಲಿ ‌ಬರುವಂತಹ ಕಷ್ಟಗಳನ್ನು ಎದುರಿಸಲು ಮಾರ್ಗದರ್ಶನ‌ ಮಾಡಿದ್ದಾರೆ. ಅವರ ಮಾರ್ಗದರ್ಶನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಸಮಾಜದಲ್ಲಿ‌ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಮಹನೀಯರ ಆದರ್ಶಗಳನ್ನು ಮೆಲಕು ಹಾಕುವುದರ ಮೂಲಕ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗಾಗಿ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ’ ಎಂದರು.

ಸಂಪನ್ಮೂಲ ವ್ಯಕ್ತಿ ವೀಣಾ ತಿರ್ಲಾಪುರ ಉಪನ್ಯಾಸ ನೀಡಿ, ‘ಪತಿಯಲ್ಲಿ ಪರಮಾತ್ಮನನ್ನು ಕಂಡಂತಹ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ. ಶಿವ ಪಾರ್ವತಿಯರ ಮಹಾನ್‌ ಭಕ್ತೆಯಾಗಿದ್ದ ಅವರು ಗಂಡನಲ್ಲಿದ್ದ ಸಾಧು ಸ್ವಭಾವವನ್ನು ಕಂಡು ಮಹಾದೇವನಂತೆ ಉಪಚರಿಸುತ್ತಾಳೆ. ಜೀವನವಿಡೀ ಕಷ್ಟವನ್ನುಂಡರೂ ಇತರರು ಕಷ್ಟದಲ್ಲಿರುವಾಗ ತನ್ನ ನೋವನ್ನೆಲ್ಲ ಮರೆತು ಅವರನ್ನು ಜೋಪಾನ ಮಾಡುತ್ತಿದ್ದರು’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ‌ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಬಿ.ಆರ್.ಯಾವಗಲ್, ಜಿಲ್ಲಾ ಪಂಚಾಯಿತಿ ಸಿಇಒ ಭರತ್‌ ಎಸ್., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ‌ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ರವೀಂದ್ರ ಮೂಲಿಮನಿ ಸೇರಿದಂತೆ ಸಮಾಜದ‌ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ಪಂಡಿತ್‌ ವೆಂಕಟೇಶ ಅಲ್ಕೋಡ್ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಎಸ್.ಎಸ್.ಶಿವನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾ‌ ಹುಚ್ಚಣ್ಣವರ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ‌ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.