ರಾಂಪುರ: ಸಮೀಪದ ಬೆನಕಟ್ಟಿ ಗ್ರಾಮದಲ್ಲಿ ಶನಿವಾರ ಮಹಾಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ವೈಶಿಷ್ಟ್ಯಪೂರ್ಣವಾಗಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ನಾರಾಯಣಭಟ್ ಜೋಶಿ ಅವರಿಂದ ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಮಹಿಳೆಯರು ಮಲ್ಲಮ್ಮಳ ತೊಟ್ಟಿಲು ಪೂಜೆ ಮಾಡಿ, ಅನೇಕ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಸಿದರು.
10 ಗಂಟೆಗೆ ಹೇಮರಡ್ಡಿ ಮಲ್ಲಮ್ಮಳ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು. 350ಕ್ಕೂ ಹೆಚ್ಚು ಕುಂಭ ಹೊತ್ತ ಮಹಿಳೆಯರು, ವಿವಿಧ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಾರ್ಗದುದ್ದಕ್ಕೂ ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿ, ಹಣ್ಣು, ಕಾಯಿ ಸಮರ್ಪಿಸಿದರು.
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.