ADVERTISEMENT

ಕೋವಿಡ್‌ ನಿರ್ವಹಣೆಗೆ ಮುಂಜಾಗ್ರತೆ ವಹಿಸಿ: ಶಾಸಕ ಎಚ್‌.ಕೆ.ಪಾಟೀಲ ಪತ್ರ

​ಪ್ರಜಾವಾಣಿ ವಾರ್ತೆ
Published 4 ಮೇ 2021, 3:50 IST
Last Updated 4 ಮೇ 2021, 3:50 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ಜಿಲ್ಲೆಯ ಕೋವಿಡ್‌–19 ಸೊಂಕಿತರು ಮತ್ತು ಶಂಕಿತರು ಸಾವಿಗೀಡಾಗುವುದನ್ನು ತಪ್ಪಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಎಚ್‌.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅವರಿಗೆ ಪತ್ರ ಬರೆದಿದ್ದಾರೆ.

ವಿಜ್ಞಾನಿಗಳು ಅಂದಾಜಿಸಿದ ರೀತಿಯಲ್ಲಿ ಮೇ 15ರ ಹೊತ್ತಿಗೆ ದೇಶದಲ್ಲಿ ಪ್ರತಿದಿನ 8ರಿಂದ 10 ಲಕ್ಷ ಸೊಂಕಿತರು ಪತ್ತೆಯಾಗುವರು. 5 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಾರೆ. ಮೂರನೇ ಅಲೆ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಬಾರಿ ಹಾನಿ ಮಾಡಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಿಗೆ 3ನೇ ಅಲೆ ಭಾರಿ ತೊಂದರೆ ನೀಡುವುದಲ್ಲದೇ, ಬದುಕುಳಿಯುವುದು ಕಷ್ಟ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಗಂಭೀರ ಹೆಜ್ಜೆ ಇಡಬೇಕಿದೆ ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಲಸಿಕೆ ಲಭ್ಯವಿಲ್ಲ. ಈ ಕೊರತೆಯನ್ನು ನೀಗಿಸಲು ಆದಷ್ಟು ಬೇಗ ಕ್ರಮವಹಿಸಬೇಕು. ಜಿಮ್ಸ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಗೆ ಕೊರತೆ ಆಗದ ರೀತಿ ಕಾಳಜಿ ವಹಿಸಬೇಕು. ಈಗ ಇರುವುದರ ಜತೆಗೆ 13 ಅಥವಾ 20 ಕೆ.ಎಲ್‌. ಸಾಮರ್ಥ್ಯದ ಮತ್ತೊಂದು ಆಮ್ಲಜನಕ ಸಂಗ್ರಹ ಟ್ಯಾಂಕ್ ಸ್ಥಾಪಿಸಲು ತಕ್ಷಣ ಕ್ರಮವಹಿಸಬೇಕು. ಜಿಮ್ಸ್‌ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಅಗತ್ಯ ಬಿದ್ದರೆ ಖಾಸಗಿ ಅವರಿಗೆ ನೀಡಲು ಜಂಬೋ ಸಿಲಿಂಡರ್‌ಗಳ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ADVERTISEMENT

ಜಿಮ್ಸ್‌ನಲ್ಲಿ ವೆಂಟಿಲೇಟರ್ ಕೊರತೆ ಇದೆ. ಸರ್ಕಾರಕ್ಕೆ ಮನವಿ ಮಾಡಿ ಹಲವು ತಿಂಗಳಾದರೂ ಬಂದಿಲ್ಲ. ತಕ್ಷಣ ಕೆಲವೇ ದಿನಗಳಲ್ಲಿ ಅಂದರೆ 10 ದಿನಗಳಲ್ಲಿ ಕನಿಷ್ಠ 30 ವೆಂಟಿಲೇಟರ್‌ಗಳನ್ನು ಜಿಮ್ಸ್‌ನಲ್ಲಿ ಅಳವಡಿಸಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುವಾಗುವಂತೆ 100 ಹಾಸಿಗೆ ಹೆಚ್ಚಿಸಲು ಖಾಸಗಿ ಆಸ್ಪತ್ರೆಯವರಿಗೆ ಪ್ರೋತ್ಸಾಹ ನೀಡಬೇಕು. ಖಾಸಗಿ ಆಸ್ಪತ್ರೆಯವರಿಗೆ ರೆಮ್‌ಡಿಸಿವಿರ್ ಹಾಗೂ ಇತರೆ ಔಷಧಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸಬೇಕು. ಜಿಮ್ಸ್, ಸರ್ಕಾರಿ ವೈದ್ಯರು ಹಾಗೂ ಐಎಂಎ ಅವರನ್ನು ಸೇರಿಸಿ ಟಾಸ್ಕ್‌ಫೋರ್ಸ್ ತಂಡ ರಚಿಸಬೇಕು. ಕೊರೊನಾ ಸೈನಿಕರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ, ಆಸ್ಪತ್ರೆ ಒದಗಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ಏನಾಗಿದೆ?: ಎಚ್‌.ಕೆ.ಪಾಟೀಲ ಕಿಡಿ
ಗದಗ:
‘ಚಾಮರಾಜನಗರದಲ್ಲಿ ಬಹುದೊಡ್ಡ ದುರಂತ ಸಂಭವಿಸಿದೆ. ಆಮ್ಲಜನಕ ಕೊರತೆಯಿಂದಾಗಿ 24 ಮಂದಿ ಅಸುನೀಗಿದ್ದಾರೆ. ಅತಿ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆ ಮಾಡುತ್ತಿರುವ ರಾಜ್ಯ ನಮ್ಮದು. ಆದರೂ, ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಸರ್ಕಾರಕ್ಕೆ ಏನಾಗಿದೆ? ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?’ ಎಂದು ಶಾಸಕ ಎಚ್.ಕೆ.ಪಾಟೀಲ ಸರ್ಕಾರದ ವಿರುದ್ಧ ಕಿಡಿಕಾರಿದರು.

ಗದಗ ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ‘ಜನರ ಜೀವ ಉಳಿಸಿ ಎಂದು ಸರ್ಕಾರಕ್ಕೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಈಗಾಗಲೇ ಬೆಂಗಳೂರು ನಗರದ ರಾಜೇಶ್ವರಿ ಆಸ್ಪತ್ರೆಯಲ್ಲಿ 11 ಜನರು ಮೃತಪಟ್ಟಿದ್ದಾರೆ. ಯಾವುದೇ ರೀತಿಯಿಂದಾ‌ದರೂ ಸರಿ ಆಮ್ಲಜನಕ ಪಡೆದುಕೊಂಡು, ಆಸ್ಪತ್ರೆಗಳಿಗೆ ಸರಬರಾಜು ಮಾಡಿ. ರೋಗಿಗಳ ಜೀವ ಉಳಿಸಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.