ADVERTISEMENT

ಸಿ.ಟಿ.ರವಿ ಕನ್ನಡಿಗರ ಕ್ಷಮೆ ಕೇಳಲಿ: ಎಚ್‌.ಕೆ.ಪಾಟೀಲ ಆಗ್ರಹ

ಕ್ರೀಡಾ ಪ್ರಶಸ್ತಿಗೆ ಮರುನಾಮಕರಣ; ಪ್ರಧಾನಿ ಮೋದಿಯಿಂದ ಸಣ್ಣತನದ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:31 IST
Last Updated 11 ಆಗಸ್ಟ್ 2021, 4:31 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್‌ ಅನ್ನು ಮರು ಟ್ವೀಟ್‌ ಮಾಡಿ ಬೆಂಬಲಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡೆ ಆಶ್ಚರ್ಯ ಮತ್ತು ನೋವು ತರಿಸಿದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಎಚ್‌.ಕೆ.ಪಾಟೀಲ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಕೆದಾಟು ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿ ಸರಿಯಾದ ನಿಲುವು ತೆಗೆದುಕೊಂಡಿದ್ದಾರೆ. ಆದರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಜನರಿಗೆ ದ್ವಂದ್ವ ಮೂಡಿದ್ದು, ಬಿಜೆಪಿ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು. ಕೆ.ಅಣ್ಣಾಮಲೈ ಹೇಳಿಕೆ ಬೆಂಬಲಿಸಿ ಮರು ಟ್ವೀಟ್‌ ಮಾಡಿರುವ ಸಿ.ಟಿ.ರವಿ ತನ್ನ ನಿಲುವು ಬದಲಿಸಿಕೊಂಡು ಕನ್ನಡಿಗರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

‘ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಎಂದು ಮರುನಾಮಕಾರಣ ಮಾಡಿರುವುದು ರಾಜಕೀಯ ದುರುದ್ದೇಶದ ನಡೆಯೇ ಹೊರತು, ಕ್ರೀಡಾ ಪ್ರೀತಿಯಿಂದಲ್ಲ. ರಾಜೀವ್‌ ಗಾಂಧಿ ಹೆಸರು ತೆಗೆದು ಪ್ರಧಾನಿ ಮೋದಿ ಸಣ್ಣತನದ ರಾಜಕಾರಣ ಮಾಡಿದ್ದಾರೆ. ಇದು ಕ್ರೀಡಾಕ್ಷೇತ್ರಕ್ಕೆ ಮಾಡಿದ ಅವಮಾನ’ ಎಂದು ಕಿಡಿಕಾರಿದರು.

ADVERTISEMENT

‘ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌ ಬಗ್ಗೆ ವಿಶೇಷ ಗೌರವ, ಅಭಿಮಾನ ಇದೆ. ಅವರ ಹೆಸರಿನಲ್ಲಿ ಮತ್ತೊಂದು ಉನ್ನತ ಪ್ರಶಸ್ತಿ ನೀಡಬಹುದಿತ್ತು. ಆದರೆ, ಪ್ರಧಾನಿ ಮೋದಿ ಅವರು ಈ ವಿಚಾರದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡಿ, ಭಾರತೀಯರಿಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.