ADVERTISEMENT

ಗದಗ| ಇತಿಹಾಸ ರಮ್ಯ ವಿವರಣೆಯಲ್ಲ, ಬದುಕಿನ ಸಾರ: ಸಚಿವ ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 4:59 IST
Last Updated 9 ನವೆಂಬರ್ 2025, 4:59 IST
ಗದಗ ನಗರದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 39ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು
ಗದಗ ನಗರದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 39ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಚಿವ ಎಚ್‌.ಕೆ. ಪಾಟೀಲ ಉದ್ಘಾಟಿಸಿದರು   

ಗದಗ: ‘ಇತಿಹಾಸವೆಂದರೆ ರಮ್ಯ ವಿವರಣೆಯಲ್ಲ. ಸಮಾಜದಲ್ಲಿ ನಡೆಯುವ ಕ್ರಿಯೆ– ಪ್ರಕ್ರಿಯೆಗಳ ಸಾರವೇ ಇತಿಹಾಸ. ಅದು ನಮ್ಮ ಸಂಸ್ಕೃತಿ, ಪರಂಪರೆ. ನಮ್ಮ ಪೂರ್ವಜರು ಹೇಗೆ ಬಾಳಿ ಬದುಕಿದರು ಎಂಬ ಜೀವನ ವಿಧಾನ; ಮುಂದಿನವರು ಹೇಗೆ ಬದುಕಬೇಕು ಎಂಬುದನ್ನು ಸೂಚಿಸುವ ದಿಕ್ಸೂಚಿ’ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಕರ್ನಾಟಕ ಇತಿಹಾಸ ಅಕಾಡೆಮಿಯು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಇತಿಹಾಸ ಅಕಾಡೆಮಿಯ 39ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕರ್ನಾಟಕದಲ್ಲಿರುವಷ್ಟು ವೈವಿಧ್ಯ ಶಾಸನಗಳು ಬೇರೆಲ್ಲೂ ಕಂಡುಬರುವುದಿಲ್ಲ. ಐತಿಹಾಸಿಕವಾಗಿ ಕರ್ನಾಟಕ ಪ್ರಯೋಗ ಶಾಲೆಯೂ ಹೌದು. ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ ಮತ್ತು ಮಲಪ್ರಭಾ ನದಿಯ ದಂಡೆಗಳು ಪ್ರಾಚೀನ ಕಾಲದಲ್ಲಿಯೇ ನಾಗರಿಕತೆಯನ್ನು ಹುಟ್ಟುಹಾಕಿವೆ. ಈ ನೆಲದಲ್ಲಿ ಅನೇಕ ಪ್ರಾಗೈತಿಹಾಸಿಕ ಕುರುಹುಗಳು ಕಂಡುಬಂದಿವೆ’ ಎಂದು ಹೇಳಿದರು.

ADVERTISEMENT

‘ಕರ್ನಾಟಕದ ಇತಿಹಾಸ ಶ್ರೀಮಂತವಾಗಿದೆ. ಕಳೆದ ವರ್ಷ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಸಂಗ್ರಹ ಅಭಿಯಾನ ನಡೆಸಿ, ಮೂರು ದಿನಗಳಲ್ಲಿ 1,100ಕ್ಕೂ ಅಧಿಕ ಅಮೂಲ್ಯ ಶಾಸನ, ಶಿಲ್ಪಕಲೆ, ಮುತ್ತು, ರತ್ನ, ಹವಳ, ನಾಣ್ಯ ಸಂಗ್ರಹಿಸಲಾಗಿದೆ. ಅವುಗಳ ಸಂರಕ್ಷಣೆಗೆ ಬಯಲು ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಯೋಜಿಸಲಾಗಿದೆ’ ಎಂದರು.

‘ಕರ್ನಾಟಕದಲ್ಲಿ 25 ಸಾವಿರಕ್ಕೂ ಅಧಿಕ ಪ್ರಾಚ್ಯಾವಶೇಷಗಳಿವೆ. ಅವುಗಳನ್ನು ಸಂಪೂರ್ಣ ಸಮೀಕ್ಷೆ ಮಾಡುವ ಕೆಲಸ ಆರಂಭಿಸಲಾಗಿದೆ. ರಾಜ್ಯದ 119 ತಾಲ್ಲೂಕುಗಳಲ್ಲಿ 35–40 ತಂಡಗಳಾಗಿ ಸಮೀಕ್ಷೆ ಪೂರ್ಣಗೊಳಿಸಿದೆ. ಸಮೀಕ್ಷೆಗೆ ಬೇಕಿರುವ ತಂತ್ರಜ್ಞಾನ ಆಧರಿತ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದ್ದು, ಸರ್ಕಾರದ ಒಪ್ಪಿಗೆ ದೊರೆತು ಅದು ಬಳಕೆಗೆ ಲಭ್ಯವಾದರೆ ಸಮೀಕ್ಷೆಗೆ ಇನ್ನಷ್ಟು ವೇಗ ಸಿಗಲಿದೆ. ಮುಂದಿನ ಮಾರ್ಚ್‌ 31 ಅಥವಾ ಜೂನ್‌ ಅಂತ್ಯದೊಳಗೆ ರಾಜ್ಯದ 238 ತಾಲ್ಲೂಕುಗಳಲ್ಲಿನ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಆಗ, ಎಲ್ಲ ಪ್ರಾಚ್ಯಾವಶೇಷಗಳ ಬಗ್ಗೆ ಸಮೀಕ್ಷೆ ಆಗಿದ್ದರೆ ನಮ್ಮ ರಾಜ್ಯದಲ್ಲಿ ಮಾತ್ರ ಎಂಬ ಹಿರಿಮೆ ದಕ್ಕಲಿದೆ’ ಎಂದರು.

‘ಪ್ರಾಚ್ಯಾವಶೇಷಗಳ ಸಮೀಕ್ಷೆಯೊಂದೇ ಮುಖ್ಯವಲ್ಲ. ಅದರ ಮುಂದಿನ ಹೆಜ್ಜೆ ಮಹತ್ವದ್ದು. ಪ್ರತಿ ಕಲ್ಲಿಗೂ ಒಂದು ಇತಿಹಾಸ ಇದೆ. ಅದರಿಂದ ಅದ್ಭುತ ಸಾಹಿತ್ಯ ಸೃಷ್ಟಿಗೆ ಅವಕಾಶ ಇದೆ. ಸರ್ಕಾರದ ಜತೆಗೆ ಇತಿಹಾಸ ಅಕಾಡೆಮಿ ಹಾಗೂ ಇತಿಹಾಸಕಾರರು ಕೈಜೋಡಿಸಿದರೆ ಸ್ಥಳೀಯ ಇತಿಹಾಸ ಸಾಹಿತ್ಯ ಸೃಷ್ಟಿಗೆ, ಸಂಶೋಧನೆಗೆ ಹೆಚ್ಚಿನ ಬಲ ಬರಲಿದೆ. ಹಾಗಾಗಿ, 238 ಮಂದಿ ಇತಿಹಾಸಕಾರರು ಒಂದೊಂದು ತಾಲ್ಲೂಕಿನ ನೇತೃತ್ವ ವಹಿಸಿಕೊಂಡು ಅಲ್ಲಿನ ಪ್ರಾಚ್ಯಾವಶೇಷ ಗಮನಿಸಿ ಸಾಹಿತ್ಯ ಸೃಷ್ಟಿ, ಸಂಶೋಧನೆ ವಿವರ ದಾಖಲಿಸಿ, ಪುಸ್ತಕ ಮಾಡಿಕೊಡುವುದಾದರೆ ದೇಶದಲ್ಲೇ ನೂತನ ಕಾರ್ಯಕ್ರಮ ಇದಾಗಲಿದೆ. ಇದಕ್ಕೆ ಇತಿಹಾಸಕಾರರು ಬೆವರು ಸುರಿಸಬೇಕು. ಸರ್ಕಾರ ಅದಕ್ಕೆ ಬೇಕಿರುವ ಆರ್ಥಿಕ ಶಕ್ತಿ ಒದಗಿಸಲಿದೆ’ ಎಂಬ ಭರವಸೆ ನೀಡಿದರು.  

‘ಇತಿಹಾಸ ದರ್ಶನ’ ಸಂಪುಟ 40 ಕೃತಿಯನ್ನು ಸಂಶೋಧಕ ಡಾ. ಲಕ್ಷ್ಮಣ್‌ ತೆಲಗಾವಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಇತಿಹಾಸಕಾರರು ರಚಿಸಿದ ಪುಸ್ತಕಗಳು ಲೋಕಾರ್ಪಣೆಗೊಂಡವು.

ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಎಸ್‌.ವಿ.ನಾಡಗೌಡರ, ಹಂಪಿ ಕನ್ನಡ ವಿ.ವಿ. ಕುಲಪತಿ ಪ್ರೊ. ಪಿ.ವಿ.ಪರಶಿವಮೂರ್ತಿ, ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ರಾಜಶೇಖರ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಇದ್ದರು.

ರಾಜ್ಯದಲ್ಲಿನ ಒಂದು ಸಾವಿರ ಅರಕ್ಷಿತ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳನ್ನಾಗಿ ಮಾರ್ಚ್‌ 31ರೊಗಳೆಗೆ ಘೋಷಣೆ ಮಾಡಲು ಸರ್ಕಾರ ನಿರ್ಣಯಿಸಿದೆ
ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ
ಕರ್ನಾಟಕದ ಇತಿಹಾಸ ತಜ್ಞರು ಇತಿಹಾಸ ಸಂಶೋಧನೆಯನ್ನು ವಿಶ್ವವಿದ್ಯಾಲಯಗಳಿಂದ ಹೊರತಂದು ಅದನ್ನು ಜೀವಂತವಾಗಿಸಿದ್ದಾರೆ.
ರಾಜಾರಾಮ ಹೆಗಡೆ ಇತಿಹಾಸತಜ್ಞ

ಎಚ್‌.ಕೆ.ಪಾಟೀಲರ ಒಳನೋಟ ಸ್ಫೂರ್ತಿದಾಯಕ’

‘ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಅವರು ಇತಿಹಾಸ ಪ್ರವಾಸೋದ್ಯಮದ ಬಗ್ಗೆ ಅನೇಕ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಅವರ ಮಾತು ಪ್ರೇರಣಾದಾಯಕ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಇತಿಹಾಸತಜ್ಞ ಡಾ. ರಾಜಾರಾಮ ಹೆಗಡೆ ಹೇಳಿದರು. ‘ಇತಿಹಾಸ ಸಂರಕ್ಷಣೆಯ ಕ್ಷೇತ್ರದಲ್ಲಿ ಏನು ಆಗಿದೆ? ಏನು ಆಗಬೇಕಿದೆ? ಎಂಬ ಅವರ ವಿಚಾರಗಳು ತಜ್ಞರಿಗೂ ಬೋಧಕ ರೀತಿಯಲ್ಲಿವೆ. ಬ್ರಿಟಿಷ್‌ ಆಡಳಿತ ಕಾಲದಲ್ಲಿ ಈ ನಾಡಿನ ಇತಿಹಾಸ ಸಂಸ್ಕೃತಿ ಪರಂಪರೆ ತಿಳಿಯುವ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಅದರೆ ಕಾಲಾಂತರದಲ್ಲಿ ಅದರ ಉದ್ದೇಶವೇ ಸರ್ಕಾರಗಳಿಗೆ ಮರೆತುಹೋಗಿತು. ಪ್ರವಾಸೋದ್ಯಮ ಅಂದ ತಕ್ಷಣ ಹಣಕಾಸಿನ ಲಾಭ ಯೋಚನೆ ಮಾಡದೇ ಅದರ ಮೂಲ ಆಶಯ ಏನಿದೆ ಎನ್ನುವುದನ್ನು ಸರಿಯಾಗಿ ಗ್ರಹಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದರು. ‘ಇತಿಹಾಸ ಕ್ಷೇತ್ರದಲ್ಲಿ ಕೆಲಸ ಮಾಡಲೆಂದೇ ಸರ್ಕಾರದಲ್ಲಿ ಇಲಾಖೆಗಳಿವೆ. ಆ ಇಲಾಖೆಗಳಲ್ಲಿನ ಅಧಿಕಾರಿಗಳ ಜತೆಗೆ ವ್ಯವಹಿಸುವುದೇ ಇತಿಹಾಸ ತಜ್ಞರಿಗೆ ಕಷ್ಟವಾಗಿದೆ. ಅಲ್ಲಿರುವ ಅನೇಕ ಅಧಿಕಾರಿಗಳಿಗೆ ಅದರ ಹಿಂದಿನ ಆಶಯಗಳೇ ತಿಳಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.