ADVERTISEMENT

‘ರಾಜ್ಯಪಾಲರು ಮೌನ ಮುರಿದು ಕ್ರಮ ಕೈಗೊಳ್ಳಲಿ’

ಶಾಸಕ ಎಚ್‌.ಕೆ.ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 3:58 IST
Last Updated 23 ಡಿಸೆಂಬರ್ 2020, 3:58 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ವಿಧಾನ ಪರಿಷತ್‌ನಲ್ಲಿ ನಡೆದ ಪ್ರತಿ ಘಟನೆಯನ್ನೂ ರಾಜ್ಯಪಾಲರು ಕೂಲಂಕಷವಾಗಿ ಗಮನಿಸಿ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

ಮಂಗಳವಾರ ಹುಲಕೋಟಿ ಗ್ರಾಮದಲ್ಲಿ ಮತದಾನದ ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ‘ವಿಧಾನ ಪರಿಷತ್‌ನಲ್ಲಿ ಅಂದು ಸಭಾಪತಿಯ ಪೀಠದ ಬಳಿ ನಡೆದ ಘಟನೆ ಸದನದ ಗೌರವಕ್ಕೆ ಕಳಂಕ ತರುವಂತದ್ದು. ಬೆಂಗಳೂರಿನಲ್ಲಿ ಹಿಂದೆ ಈ ರೀತಿಯ ಅಪರಾಧಗಳನ್ನು ಭೂಗತ ಲೋಕದ ಡಾನ್‌ಗಳು ಮಾಡುತ್ತಿದ್ದರು. ಅದೇ ಮಾದರಿಯ ವರ್ತನೆಗಳು ವಿಧಾನ ಪರಿಷತ್‌ಗೆ ಬಂದು ಬಿಟ್ಟರೆ ಸರ್ಕಾರದಿಂದ ಏನನ್ನು ಅಪೇಕ್ಷೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಸಂವಿಧಾನವು ರಾಜ್ಯಪಾಲರಿಗೆ ವಿಶೇಷ ಅಧಿಕಾರ ನೀಡಿದ್ದರು ಕೂಡ ಅದನ್ನು ಸರಿಯಾದ ರೀತಿಯಲ್ಲಿ ಪ್ರಯೋಗಿಸದೇ ಹೋದರೆ ಈ ರೀತಿಯ ಘಟನೆಗಳು ಮರುಕಳಿಸುತ್ತಿರುತ್ತವೆ. ಜನಾಡಳಿತ ಕುಸಿದು ಬೀಳುತ್ತದೆ. ಘಟನೆ ನಡೆದು ಇಷ್ಟು ದಿನಗಳಾದರೂ ಇಲ್ಲೀವರೆಗೆ ಕ್ರಮ ಕೈಗೊಳ್ಳದಿರುವುದು ನೋವುಂಟು ಮಾಡಿದೆ. ರಾಜ್ಯಪಾಲರು ಮೌನ ಮುರಿದು ತಕ್ಷಣ ಜಾಗೃತರಾಗಬೇಕು. ಇಲ್ಲವಾದಲ್ಲಿ ತಪ್ಪು ಮಾಡಿದವರ ಜತೆಗೆ ಕ್ರಮ ಕೈಗೊಳ್ಳದವರಿಗೂ ಕೆಟ್ಟ ಹೆಸರು ಬರುತ್ತದೆ’ ಎಂದು ಹೇಳಿದರು.

ADVERTISEMENT

ತಪ್ಪು ಮರುಕಳಿಸದಿರಲಿ

ಗದಗ: ‘ಕೋವಿಡ್‌–19ಗೆ ಕಾರಣವಾಗುವ ಕೊರೊನಾ ವೈರಸ್‌ನ ನೂತನ ಸ್ವರೂಪ ಪತ್ತೆಯಾದ ದೇಶಗಳಿಂದ ಈವರೆಗೆ ರಾಜ್ಯಕ್ಕೆ 12,300 ಮಂದಿ ಬಂದಿದ್ದಾರೆ. ಆದರೆ, ಸರ್ಕಾರ 2,300 ಜನರು ಬಂದಿದ್ದಾರೆ ಎಂದು ಸುಳ್ಳು ಹೇಳುತ್ತಿದೆ. ಈ ರೀತಿ ಸತ್ಯ ಮರೆಮಾಚುತ್ತಾ ಹೋದರೆ ಮುಂದೆ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಕಳೆದ ಸಲ ಮಾಡಿದ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಳ್ಳಬೇಕು. ಇಂಗ್ಲೆಂಡ್‌, ನ್ಯೂಜಿಲೆಂಡ್, ನೆದರ್ಲೆಂಡ್‌‌ನಿಂದ ಬಂದವರನ್ನು ತಕ್ಷಣವೇ ಗುರುತಿಸಿ, ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‌ನಲ್ಲಿ ಇಡಬೇಕು. ರೋಗ ಲಕ್ಷಣ ಇರುವವರನ್ನು ಐಸೋಲೇಷನ್‌ನಲ್ಲಿ ಇಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.