ADVERTISEMENT

ನರೇಗಲ್‌: ಮಾರ್ದನಿಸುತ್ತಿದೆ ಫೈಬರ್‌ ತಮಟೆ ಸದ್ದು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 5:04 IST
Last Updated 23 ಮಾರ್ಚ್ 2024, 5:04 IST
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದಲ್ಲಿ ಗುರುವಾರದಂದು ಪೈಬರ್‌ ತಮಟೆ ಬಾರಿಸುತ್ತಾ ಬಾಯಿ ಬಡಿದುಕೊಂಡು ಸಂಭ್ರಮಿಸುತ್ತಿರುವ ಮಕ್ಕಳು
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದಲ್ಲಿ ಗುರುವಾರದಂದು ಪೈಬರ್‌ ತಮಟೆ ಬಾರಿಸುತ್ತಾ ಬಾಯಿ ಬಡಿದುಕೊಂಡು ಸಂಭ್ರಮಿಸುತ್ತಿರುವ ಮಕ್ಕಳು   

ನರೇಗಲ್‌: ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಹೋಬಳಿಯ ಎಲ್ಲಾ ಗ್ರಾಮದಲ್ಲೂ ಹಲಗಿ ಸದ್ದು ಮಾರ್ದನಿಸುತ್ತಿದೆ. ಮಕ್ಕಳು ಬಾಯಿ ಬಡಿದುಕೊಂಡು ಸಂಭ್ರಮಿಸುತ್ತಿದ್ದಾರೆ. ಆದರೆ, ಆಧುನಿಕತೆ ಪರಿಣಾಮದಿಂದ ಚರ್ಮದ ಹಲಗಿ ತನ್ನ ಚಾರ್ಮ್‌ ಕಳೆದುಕೊಂಡಿದ್ದು, ಅದರ ಜಾಗದಲ್ಲಿ ಫೈಬರ್‌, ಪ್ಲಾಸ್ಟಿಕ್‌ ತಮಟೆಗಳ ಸದ್ದು ಜೋರಾಗಿದೆ.

ಶಿವರಾತ್ರಿಯ ಮರುದಿನದಿಂದ ಆರಂಭವಾಗುವ ಹೋಳಿ ಸಂಭ್ರಮ ಹುಣ್ಣಿಮೆವರೆಗೂ ಅಂದರೆ 15 ದಿನಗಳ ಕಾಲ ನಡೆಯುತ್ತದೆ. ಈ ಹಬ್ಬದಲ್ಲಿ ಮಕ್ಕಳು, ಪಡ್ಡೆ ಹುಡುಗರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಗ್ರಾಮದ ಓಣಿ ತುಂಬಾ ತಮಟೆ ಬಾರಿಸುತ್ತಾ ತಿರುಗಾಡುತ್ತಾರೆ. ‘ಕಾಮಣ್ಣನ ಮಕ್ಕಳು.. ಕಳ್ಳ ಸುಳ್ಳ ಮಕ್ಕಳು, ಏನೇನು ಕದ್ದರು ಕಟಿಗಿ ಕುಳ್ಳು ಕದ್ದರು, ಯಾತಕ್ಕೆ ಕದ್ದರು, ಕಾಮಣ್ಣನ ಸುಡಾಕ ಕದ್ದರು' ಎಂದು ಹಾಡುತ್ತಾ ಬಾಯಿ ಬಡಿದುಕೊಳ್ಳುವ ಮೂಲ ಜನರನ್ನು ಆಕರ್ಷಿಸುತ್ತಾರೆ. ಕೆಲ ಯುವಕರು ಹಲಗಿಯಲ್ಲಿ ಬಗೆ ಬಗೆಯ ಸ್ವರ ನುಡಿಸುವ ಮೂಲಕ ಸಂತಸಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಯುವಕರು ಲಯಬದ್ಧವಾಗಿ ಹಲಗೆ ನುಡಿಸಿದರೆ, ಚಿಕ್ಕ ಮಕ್ಕಳು ಹತ್ತಾರು ಬಗೆಯಲ್ಲಿ ಬಾರಿಸಿ ಖುಷಿ ಪಡುತ್ತಿದ್ದಾರೆ.

ಜಕ್ಕಲಿ ಗ್ರಾಮದ ಹಾಗೂ ನರೇಗಲ್‌ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಜೆ ವೇಳೆ ಹಲಗಿ ಬಾರಿಸಲು ಪಡ್ಡೆ ಹೈಕಳ ದೊಡ್ಡ ಗುಂಪೇ ಜಮಾಯಿಸುತ್ತದೆ. ಅದರಲ್ಲಿ ಕೆಲವರು ನರ್ತನದಲ್ಲಿ ತೊಡಗಿದರೆ ಉಳಿದವರು ಸಿಳ್ಳೆ-ಕೇಕೆ ಹಾಕುತ್ತಾ ಬೆಂಬಲಿಸುತ್ತಾರೆ.

ADVERTISEMENT

ಈ ಹಿಂದೆ ಕಾಮಣ್ಣನ ಎದುರು ಹಲಿಗೆ ಬಾರಿಸುವ ಪೈಪೋಟಿ ಇರುತ್ತಿತ್ತು.ಇತ್ತೀಚಿನ ದಿನಗಳಲ್ಲಿ ಜಾನಪದ ವಾದ್ಯ, ಚರ್ಮದ ಹಲಿಗೆ ತೆರೆಮರೆಗೆ ಸರಿಯುತ್ತಿವೆ. ಇದರಿಂದ ವಂಶಪಾರಂಪರ್ಯವಾಗಿ ತಯಾರಿಸುತ್ತಿದ್ದ ಹಲಿಗೆಗಳು ಮಾಯವಾಗುತ್ತವೆ. ಮೂಲ ಕಸಬನ್ನು ನಂಬಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲಕುವ ಸಾಧ್ಯತೆ ಇರುತ್ತದೆ ಎಂದು ಹಲಿಗೆ ತಯಾರಕರಾದ ಮರಿಮಾದಪ್ಪ ನಡುಮನಿ ಹೇಳಿದರು.

ಆಧುನೀಕತೆಗೆ ತಕ್ಕಂತೆ ಹಬ್ಬಗಳು ಹಾಗೂ ವಾದ್ಯಗಳು ಬದಲಾಗುತ್ತಿವೆ. ಇದರಿಂದ ಹೋಳಿಯಲ್ಲಿ ಕಂಡು ಬರುತ್ತಿದ್ದ ಜಾನಪದ ಹಾಗೂ ಗ್ರಾಮೀಣ ಸೊಗಡು ಮರೆಯಾಗುತ್ತಿದೆ
ಮಹಾದೇವ ಬೇವಿನಕಟ್ಟಿ, ಜನಪದ ಸಾಹಿತ್ಯ ಪರಿಷತ್ ಗಜೇಂದ್ರಗಡ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.