ಗದಗ: ಮನೆಯ ತಳಪಾಯ ಅಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆಗೆ ಮೆಚ್ಚಿ ಲಕ್ಕುಂಡಿ ಗ್ರಾಮ ಪಂಚಾಯಿತಿ ಅವರ ಕುಟುಂಬಕ್ಕೆ 30/40 ನಿವೇಶನ ಹಂಚಿಕೆ ಮಾಡಲು ನಿರ್ಣಯಿಸಿದೆ.
ಲಕ್ಕುಂಡಿಯಲ್ಲಿ ಗುರುವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಈ ನಿರ್ಣಯ ಕೈಗೊಂಡು, ಗ್ರಾಮದ ಮಾರುತಿ ನಗರದಲ್ಲಿ ಅವರಿಗೆ 30/40 ನಿವೇಶನ ಮಂಜೂರು ಮಾಡಲು ಹಾಗೂ ಆ ಕುಟುಂಬಕ್ಕೆ ಮನೆ ಕಟ್ಟಿಸಿಕೊಡಲು ನೆರವಾಗುವಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲು ನಿರ್ಧರಿಸಲಾಯಿತು.
ಇದರ ಜತೆಗೆ ನಿಧಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕನ ನಡೆ ಇತರ ಮಕ್ಕಳಿಗೂ ಸ್ಫೂರ್ತಿ ಆಗಲಿ ಎಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್‌ನ ಪ್ರಾಮಾಣಿಕತೆಯ ಕುರಿತಾದ ಪುಟ್ಟ ಬರಹದೊಂದಿಗೆ ಆತನ ಫೋಟೊ ಹಾಕಿಸುವ ನಿರ್ಧಾರವನ್ನೂ ಮಾಡಲಾಯಿತು.
‘ಪ್ರಾಮಾಣಿಕತೆ ಮೆರೆದ ರಿತ್ತಿ ಕುಟುಂಬಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಗುರುವಾರ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ಕರೆಯಲಾಗಿತ್ತು. ಎಲ್ಲರ ಒಮ್ಮತದ ನಿರ್ಣಯದೊಂದಿಗೆ ಅವರಿಗೆ ನಿವೇಶನ ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರೂ ಪಂಚಾಯಿತಿ ವತಿಯಿಂದ ನಿವೇಶನ ಒದಗಿಸಲು ಕ್ರಮವಹಿಸುವಂತೆ ಕೋರಿದ್ದರು’ ಎಂದು ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ ತಿಳಿಸಿದರು.
‘ಬಡವರಾದ ರಿತ್ತಿ ಕುಟುಂಬದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದ ಯೋಜನೆಗಳಿಂದ ಸಿಗುವ ನೆರವು ಸಾಕಾಗದು. ಹಾಗಾಗಿ, ಅವರಿಗೆ ಕನಿಷ್ಠ ₹10ರಿಂದ ₹15 ಲಕ್ಷ ಧನ ಸಹಾಯ ಒದಗಿಸುವಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.
‘ಇಷ್ಟು ದಿನಗಳ ಕಾಲ ಹೇಗೋ ಏನೋ ಎಂಬ ಆತಂಕ ಇತ್ತು. ಈಗ ಎಲ್ಲರೂ ನೆರವಿಗೆ ಬಂದಿರುವ ಕಾರಣ ಭಯ ದೂರವಾಗಿದೆ. ಪಂಚಾಯಿತಿಯವರು ಜಾಗ ಕೊಟ್ಟಿದ್ದಾರೆ. ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು ಹಾಗೂ ನೌಕರಿಯ ಭರವಸೆ ಸಿಕ್ಕಿದೆ. ಮುಂದೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಂದಿದೆ’ ಎಂದು ಪ್ರಜ್ವಲ್‌ನ ತಾಯಿ ಗಂಗವ್ವ ರಿತ್ತಿ ಹೇಳಿದರು.
ನಿಧಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯಿತಿ ವತಿಯಿಂದ ಶಾಲು ಹೊದಿಸಿ, ಹೊಸ ಬಟ್ಟೆ ನೀಡಿ ಸನ್ಮಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.