ಗದಗ: ‘ಐದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿದ್ದು, ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿಯವರ ಜೀವಮಾನದ ಸಾಧನೆಗಳು ಬೆರಗುಗೊಳಿಸುವಂಥದ್ದು’ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ ಈಚೆಗೆ ನಡೆದ 2,753ನೇ ಶಿವಾನುಭವದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಸವರಾಜ ಹೊರಟ್ಟಿಯವರು 8 ಬಾರಿ ಶಾಸಕರಾಗಿ, ಸಚಿವರಾಗಿ, ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವದು ದೇಶದ ಇತಿಹಾಸದಲ್ಲಿ ಮೊದಲು ಹಾಗೂ ಏಕೈಕ ಕನ್ನಡಿಗ ಎಂಬ ಹೆಮ್ಮೆ ಸಹ ನಮಗಿದೆ. ಶಿಕ್ಷಕರೊಬ್ಬರು ಇಷ್ಟೊಂದು ಸಾಧನೆ ಮಾಡಿದ್ದು, ಶಿಕ್ಷಕ ಸಮೂಹಕ್ಕೆ ಗೌರವ ತಂದಿದೆ’ ಎಂದರು.
ಹೊರಟ್ಟಿಯವರ ಬದುಕು, ಹೋರಾಟ, ಸಂಘಟನೆ ಕುರಿತು ಪ್ರಾಚಾರ್ಯ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ‘ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯವರೆಗಿನ ಎಲ್ಲ ಶಿಕ್ಷಕರ ಹಿತ ಕಾಯ್ದುಕೊಂಡು ಬಂದವರು ಹೊರಟ್ಟಿ. ಅಲ್ಲದೇ ಮಠದ ಅಭಿವೃದ್ಧಿಯಲ್ಲಿಯೂ ಹೊರಟ್ಟಿಯವರ ಮಾರ್ಗದರ್ಶನ, ಪಾತ್ರ ಇದೆ’ ಎಂದರು.
ಬಸವರಾಜ ಧಾರವಾಡ ಮಾತನಾಡಿದರು. ಅಪೇಕ್ಷಾ ಎಸ್. ಹೊನಗಣ್ಣವರ ಧರ್ಮಗ್ರಂಥ ಪಠಿಸಿದರು. ಸೃಷ್ಟಿ ವಿ. ಪೂಜಾರ ವಚನ ಚಿಂತನ ನಡೆಸಿಕೊಟ್ಟರು. ವಿದ್ಯಾ ಪ್ರಭು ಗಂಜಾಳ ನಿರೂಪಣೆ ಮಾಡಿದರು.
ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವಿ ದಂಡಿನ, ಉದ್ದಿಮೆದಾರ ಅಶೋಕ ಜೈನ್, ಎಸ್.ಎಂ. ಅಗಡಿ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ಹೆಚ್.ಡಿ. ಪೂಜಾರ, ರವಿ ಕೊಣ್ಣೂರು, ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಕೋಶಾಧ್ಯಕ್ಷ ಬಸವರಾಜ ಸಿ. ಕಾಡಪ್ಪನವರ, ಸಹ ಕಾರ್ಯದರ್ಶಿ ಸೋಮಶೇಖರ ಪುರಾಣಿಕ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ನಾಗರಾಜ ಹಿರೇಮಠ ಇದ್ದರು.
ನನ್ನೆಲ್ಲ ಶ್ರೇಯಸ್ಸು ನಾನು ನಂಬಿಕೊಂಡು ಬಂದ ಶಿಕ್ಷಕರ ಸಮೂಹಕ್ಕೆ ಸಲ್ಲಬೇಕು. ನಾನು ಇಂದು ಏನೇ ಆಗಿದ್ದರೂ ಅದಕ್ಕೆ ಕಾರಣ ಶಿಕ್ಷಕರು. ನನ್ನ ತಾಯಿಯ ಆಶೀರ್ವಾದ ತಂದೆಯ ಆದರ್ಶಗಳು ಮಠದ ಸಹಕಾರದಿಂದ ಸಾಧ್ಯವಾಗಿದೆಬಸವರಾಜ ಹೊರಟ್ಟಿ ಸಭಾಪತಿ
‘ಫ.ಗು.ಹಳಕಟ್ಟಿ ಅವರಿಂದ ವಚನ ಸಾಹಿತ್ಯ ಜೀವಂತ’:
‘ವಚನ ಸಾಹಿತ್ಯ ಇಂದು ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಕಾರಣೀಭೂತರು ಫ.ಗು.ಹಳಕಟ್ಟಿ. ತಮ್ಮ ಎಲ್ಲ ಆಸ್ತಿಯನ್ನು ಮಾರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ವಚನ ಸಾಹಿತ್ಯ ಮುದ್ರಣ ಮಾಡುವ ಮೂಲಕ ನಾಡಿಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ’ ಎಂದು ಪ್ರಾಚಾರ್ಯ ರಮೇಶ ಕಲ್ಲನಗೌಡ್ರ ಹೇಳಿದರು. ‘ವಚನ ಪಿತಾಮಹ ಫ.ಗು.ಹಳಕಟ್ಟಿ ಹಾಗೂ ಲಿಂಗಾನಂದ ಸ್ವಾಮೀಜಿ ಕುರಿತು ಉಪನ್ಯಾಸ ನೀಡಿದ ಅವರು ಲಿಂಗಾನಂದ ಸ್ವಾಮೀಜಿ ಕೂಡ ವಚನ ಸಾಹಿತ್ಯ ಶರಣ ಸಾಹಿತ್ಯಕ್ಕೆ ಹೊಸತನ ತರುವ ಮೂಲಕ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದ್ದಾರೆ. ಅವರು ಸದಾ ಸ್ಮರಣೀಯರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.