ADVERTISEMENT

ಡಿ.5ರಿಂದ ಉಪವಾಸ ಸತ್ಯಾಗ್ರಹ: ಹೊರಟ್ಟಿ

ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಕಷ್ಟಕ್ಕೆ ಸ್ಪಂದಿಸದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 4:38 IST
Last Updated 28 ನವೆಂಬರ್ 2020, 4:38 IST
ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳು ಆಯೋಜಿಸಿದ್ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು.
ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳು ಆಯೋಜಿಸಿದ್ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು.   

ಗದಗ: ‘ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಡಿ.5ರಿಂದ ಮೂರು ದಿನಗಳ ಕಾಲ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ವಿಧಾನ ಪರಿಷ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳು ಈಚೆಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರದ ಇತ್ತೀಚಿನ ಕೆಲವು ಧೋರಣೆಗಳು ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಮಾರಕವಾಗಿವೆ. ದಿನಕ್ಕೊಂದು ಅವೈಜ್ಞಾನಿಕ ಆದೇಶ ಹೊರಡಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನೇ ಆತಂಕಕ್ಕೆ ದೂಡುತ್ತಿದೆ. ಯಾವ ಆದೇಶದಲ್ಲಿಯೂ ಸ್ಪಷ್ಟತೆ ಇಲ್ಲ’ ಎಂದು ಹೇಳಿದರು.

ADVERTISEMENT

‘ಧಾರವಾಡದ ಪೊಲೀಸ್‌ ವಸತಿ ಶಾಲೆ ಸಿಬ್ಬಂದಿ ವೇತನ ಬಿಡುಗಡೆಗೊಳಿಸುವುದು, ಆರ್ಥಿಕ ಮಿತವ್ಯಯ ಹಿಂಪಡೆಯುವುದು, 1995ರ ನಂತರ ಪ್ರಾರಂಭವಾದ ಕನ್ನಡ ಶಾಲೆಗಳಿಗೆ ಅನುದಾನ ನೀಡುವುದು, ಖಾಸಗಿ ಅನುದಾನಿತ ನೌಕರರನ್ನು ಎನ್‌ಪಿಎಸ್‌ಗೆ ಒಳಪಡಿಸುವುದು, ಖಾಸಗಿ ಅನುದಾನ ರಹಿತ ಶಾಲಾ ಸಿಬ್ಬಂದಿಗೆ ಸೇವಾಭದ್ರತೆ ಒದಗಿಸುವುದು, ಕಾಲ್ಪನಿಕ ವೇತನ ಬಡ್ತಿ ಜಾರಿಗೊಳಿಸುವುದು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಡಿ. 5, 6 ಮತ್ತು 7ರಂದು ಉಪವಾಸ ಸತ್ಯಾಗ್ರಹ ಆಯೋಜಿಸಲಾಗಿದೆ. ಸರ್ಕಾರ ಇದಕ್ಕೂ ಸ್ಪಂದಿಸದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಗೌರವಾಧ್ಯಕ್ಷ ಡಾ.ಬಸವರಾಜ ಧಾರವಾಡ ಮಾತನಾಡಿ, ‘ಸಂಘಟಿತರಾಗಿ ಹೋರಾಟ ಮಾಡದೇ ಹೋದರೆ ಖಾಸಗಿ ಶಾಲೆಗಳ ಶಿಕ್ಷಕರ ಬದುಕು ತೀವ್ರ ಆತಂಕಕ್ಕೆ ಈಡಾಗುತ್ತದೆ. ಉಪವಾಸ ಸತ್ಯಾಗ್ರಹಕ್ಕೆ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು’ ಎಂದು ವಿನಂತಿಸಿದರು.

ಕರ್ನಾಟಕ ರಾಜ್ಯ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಎನ್.ಚಂದ್ರೇಗೌಡ, ಧೀರಣ್ಣ ಹುಯಿಲಗೋಳ, ಪ್ರಾ.ಎಚ್.ಸಿ.ಹೆದ್ದೂರಿ, ಪ್ರಾ.ಬಿ.ಎಲ್.ಚವ್ಹಾಣ, ಎಸ್.ಎಂ.ಅಗಡಿ, ಕೆ.ಬಿ.ಭಜಂತ್ರಿ, ಎಂ.ಕೆ.ಲಮಾಣಿ, ಕಿಶೋರಬಾಬು ನಾಗರಕಟ್ಟಿ, ಎಚ್.ಸಿ.ಪೂಜಾರ, ಪಿ.ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.