
ನರಗುಂದ: ಪಟ್ಟಣದ ಸೋಮಾಪೂರ ಕಾಲೊನಿ ನಿವಾಸಿ ವೆಂಕಪ್ಪ ಲಕ್ಷ್ಮಪ್ಪ ಕಲಕೇರಿ (62) ಮಂಗಳವಾರ ಹೃದಯಾಘಾತದಿಂದ ಮೃತಪಟ್ಟರು.
ಈ ವೇಳೆ ಕುಟುಂಬದ ಸದಸ್ಯರು, ವೆಂಕಪ್ಪ ಅವರಿಗೆ ಹೃದಯಾಘಾತ ಆದಾಗ ಅಂಬುಲೆನ್ಸ್‌ಗೆ ಕರೆ ಮಾಡಿದ್ದು, ಸಕಾಲಕ್ಕೆ ಬಾರದ ಪರಿಣಾಮ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಎರಡು ಗಂಟೆಗಳ ಕಾಲ ಧರಣಿ: ಅಂಬುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಖಂಡಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸದಸ್ಯರು ಹಾಗೂ ಕುಟುಂಬಸ್ಥರು ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಶ್ರೀಶೈಲ ತಳವಾರ, ಸಿಪಿಐ ಮಂಜುನಾಥ್ ನಡುವಿನಮನಿ, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಭದ್ರಗೌಡ್ರ ಅವರು ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಲು ಮುಂದಾದರು. ಆಗ, ಪ್ರತಿಭಟನಕಾರರು ‘ಮೃತನ ಕುಟುಂಬಕ್ಕೆ ಅಂಬುಲೆನ್ಸ್ ವಾಹನದವರೇ ಪರಿಹಾರ ನೀಡಬೇಕು’ ಎಂದು ಪಟ್ಟು ಹಿಡಿದರು.
ಡಿಎಸ್ಎಸ್ ಮುಖಂಡ ಗುರುನಾಥ ಕೆಂಗಾರಕರ ಮಾತನಾಡಿ, ‘ಮಂಗಳವಾರ ಬೆಳಿಗ್ಗೆ 10.10ಕ್ಕೆ ಅಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದಾಗ ಅಂಬುಲೆನ್ಸ್ ಹುಬ್ಬಳ್ಳಿಗೆ ತೆರಳಿದೆ ಎಂದು ಸಿಬ್ಬಂದಿ ಸುಳ್ಳು ಹೇಳಿದ್ದಾರೆ. ತಾಲ್ಲೂಕು ಆಸ್ಪತ್ರೆಗೆ ಬಂದು ನೋಡಿದರೆ ವಾಹನ ಅಲ್ಲಿಯೇ ಇದೆ’ ಎಂದು ಆರೋಪಿಸಿದರು.
ಸ್ಥಳಕ್ಕೆ ಬಂದ ಅಂಬುಲೆನ್ಸ್ ವಾಹನ ಜಿಲ್ಲಾ ಮುಖ್ಯಸ್ಥ ಶ್ರೀನಿವಾಸ, ‘ಸಿಬ್ಬಂದಿ ಕೊರತೆ ಕಾರಣ ಅಂಬುಲೆನ್ಸ್ ಸಂಚಾರ ಸ್ಥಗಿತಗೊಂಡಿದೆ. ಪರಿಹಾರ ಕುರಿತು ಮನವಿ ನೀಡಿ ಅದನ್ನು ಮೇಲಾಧಿಕಾರಿಗಳಿಗೆ ಜತೆಗೆ ಚರ್ಚಿಸಲಾಗುವುದು’ ಎಂದರು.
ಈ ವೇಳೆ ದತ್ತು ಜೋಗಣ್ಣವರ, ವೀರಣ್ಣ ಮ್ಯಾಗೇರಿ, ಶರಣಪ್ಪ ಚಲವಾದಿ, ಮುತ್ತು ಸುರಕೋಡ, ಮಂಜುನಾಥ್ ಚಿಂತಾಲ, ಯಶವಂತ ನಡುವಿನಮನಿ, ಖಾಜು ಕಿಲ್ಲೆದಾರ ಹಾಗೂ ಡಿಎಸ್ಎಸ್ ಸದಸ್ಯರು ಇದ್ದರು.
ವೆಂಕಪ್ಪ ಕಲಕೇರಿ ಅವರ ಅಂತ್ಯ ಸಂಸ್ಕಾರ ಸಂಜೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.