ಗದಗ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸ್ಪಷ್ಟವಾಗಿ ಹೇಳಿಬಿಟ್ಟಿದೆ. ಹಾಗಂತ, ನಮ್ಮ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ. ಮತ್ತೆ ಅವರ ಮುಂದೆ ಮಂಡಿಯೂರಿ ಕುಳಿತು ಮೀಸಲಾತಿ ಕೊಡಿ ಅಂತ ಕೇಳುವುದಕ್ಕಿಂತ ಮುಂದೆ ಯಾವ ಸಿಎಂ ಬಂದರೆ ನಮಗೆ ಅನುಕೂಲ ಆಗಲಿದೆ ಎಂಬುದರ ಬಗ್ಗೆ ನಿರ್ಣಯಿಸಲು ಜನಜಾಗೃತಿ ಮೂಡಿಸಲಾಗುವುದು’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸುವ ಪ್ರತಿನಿಧಿಗಳನ್ನು ಬೆಂಬಲಿಸುವ ಸಂಬಂಧ ಈ ಭಾಗದ 10 ಜಿಲ್ಲೆಗಳಲ್ಲಿ ಸಮಾಜದ ಮನೆ ಮನೆಗೆ ಹೋಗಿ, ಆಗಿರುವ ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. 2028ರಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದಿಂದ ನಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಪ್ರಯತ್ನಕ್ಕೆ ಈ ಜಾಗೃತಿ ಮುಖ್ಯವಾಗಲಿದೆ’ ಎಂದು ಹೇಳಿದರು.
‘ಜಾತಿ ಗಣತಿ ವೇಳೆ ಪಂಚಮಸಾಲಿ ಸಮಾಜದವರು ಜಾತಿ ಕಾಲಂನಲ್ಲಿ ಏನೆಂದು ಬರೆಸಬೇಕು ಎಂಬುದರ ಕುರಿತು ಶೀಘ್ರದಲ್ಲೇ ಸಭೆ ನಡೆಸಿ ತಿಳಿಸಲಾಗುವುದು. ಆ ಆದೇಶವನ್ನು ಪಂಚಮಸಾಲಿಗಳು ತಪ್ಪದೇ ಪಾಲಿಸಬೇಕು’ ಎಂದರು.
ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ‘ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಕೂಡಲಸಂಗಮದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗಿಲ್ಲ. ಆದರೂ ಅವರು ಅದನ್ನು ತೋರ್ಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರ ಜತೆಗೆ ಚರ್ಚಿಸಿ ಮಲಪ್ರಭಾ ನದಿ ತಟದಲ್ಲಿ ಹೊಸ ಆಶ್ರಯ ಮಾಡಿಕೊಡಬೇಕು ಎನ್ನುವ ಚಿಂತನೆಯಿದೆ’ ಎಂದರು.
‘ಸಮಾಜ ಮತ್ತು ರಾಜಕಾರಣದ ಆಯ್ಕೆ ಬಂದಾಗ ನಾನು ಸಮಾಜವನ್ನು ಒಪ್ಪಿಕೊಳ್ಳುತ್ತೇನೆ. ಇದೇ ಮನೋಭಾವ ಸಮಾಜದ ಇತರ ರಾಜಕಾರಣಿಗಳಿಗೂ ಇರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.