ಗಜೇಂದ್ರಗಡ: ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ಪಟ್ಟಣ ಹಾಗೂ ನೂತನ ತಾಲ್ಲೂಕು ಕೇಂದ್ರವಾಗಿರುವ ಗಜೇಂದ್ರಗಡದಲ್ಲಿ ಪ್ರತ್ಯೇಕ ಮಾರುಕಟ್ಟೆ ಇಲ್ಲದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪ್ರತಿ ಮಂಗಳವಾರ ಇಲ್ಲಿನ ಕಾಲಕಾಲೇಶ್ವರ ವೃತ್ತದಿಂದ ದುರ್ಗಾ ವೃತ್ತದವರೆಗಿನ ಜೋಡು ರಸ್ತೆಯ ಒಂದು ಬದಿಯಲ್ಲಿ ಸಂತೆ ನಡೆಯುತ್ತದೆ. ಇನ್ನೊಂದು ಬದಿಯ ರಸ್ತೆಯಲ್ಲಿ ದ್ವಿಮುಖ ಸಂಚಾರದಿಂದಾಗಿ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು, ಸಂತೆಗೆ ಬರುವ ಜನರು ಪರದಾಡುವುದು ಸಾಮಾನ್ಯ ಸಂಗತಿಯಾಗಿದೆ.
ಕಳೆದ ಹಲವು ದಶಕಗಳಿಂದ ಪ್ರತ್ಯೇಕ ಮಾರುಕಟ್ಟೆ ಇಲ್ಲದೆ ರಸ್ತೆಯಲ್ಲಿಯೇ ತರಕಾರಿ ಮಾರಾಟ ನಡೆದುಕೊಂಡು ಬಂದಿದೆ. ಮೊದಲು ಮೈಸೂರು ಮಠದ ಮುಂದಿನ ರಸ್ತೆಯಲ್ಲಿ ವಾರದ ಸಂತೆ ನಡೆಯುತ್ತಿತ್ತು. ಪಟ್ಟಣ ಬೆಳೆದಂತೆ ಸಂಚಾರಕ್ಕೆ ತೊಂದರೆಯಾದಾಗ ಅದನ್ನು ಸಿದ್ದಾರೂಢ ಮಠದ ಮುಂದಿನ ರಸ್ತೆಗೆ ವರ್ಗಾಯಿಸಲಾಯಿತು.
ಸದ್ಯ ಹಲವು ವರ್ಷಗಳಿಂದ ಕಾಲಕಾಲೇಶ್ವರ ವೃತ್ತದಿಂದ ದುರ್ಗಾ ವೃತ್ತದವರೆಗಿನ ಜೋಡು ರಸ್ತೆಯಲ್ಲಿ ನಡೆಯುತ್ತಿದ್ದು, ಸಂತೆಗೆ ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ರೈತರು ಕಾಳುಕಡಿ, ತರಕಾರಿಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತಾರೆ. ಅಲ್ಲದೆ 600ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರಿದ್ದು, ಅವರೆಲ್ಲ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸ್ವಲ್ಪ ಮಳೆ ಬಂದರೆ ಸಾಕು ರಸ್ತೆಯಲ್ಲಿ ಹರಿದು ಬರುವ ಕೊಳಚೆ ನೀರಿನಲ್ಲಿಯೇ ವ್ಯಾಪಾರ ಮಾಡುವಂತಾಗಿದೆ. ಅಲ್ಲದೆ ಸ್ವಲ್ಪ ಆಚೆ ಈಚೆ ಹೋದರು ದನಗಳು, ಹಂದಿಗಳು ತರಕಾರಿ, ಹಣ್ಣಿನ ಬುಟ್ಟಿಗಳಿಗೆ ಬಾಯಿ ಹಾಕುತ್ತವೆ.
ಸುತ್ತಲಿನ ಯಲಬುರ್ಗಾ, ಕುಷ್ಟಗಿ, ನರೇಗಲ್, ರೋಣ, ಗುಡೂರು ಭಾಗದ ಹಳ್ಳಿಗರು ಪಟ್ಟಣಕ್ಕೆ ಮಂಗಳವಾರ ಸಂತೆಗೆ ಬರುತ್ತಾರೆ. ಕೆಲವರು ಬಸ್, ಖಾಸಗಿ ವಾಹನಗಳಲ್ಲಿ ಬಂದರೆ ಕೆಲವರು ದ್ವಿಚಕ್ರ ವಾಹನಗಳಲ್ಲಿ ಬರುವವರು ತಮ್ಮ ವಾಹನಗಳನ್ನು ಅಂಗಡಿಗಳ ಮುಂದೆ ನಿಲುಗಡೆ ಮಾಡುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಸಂಚಾರ ಸುಗಮಗೊಳಿಸಲು ಪೊಲೀಸರು ಪ್ರತಿ ಮಂಗಳವಾರ ಹರಸಾಹಸ ಪಡುವಂತಾಗಿದೆ.
ಯಾರು ಏನಂತಾರೆ?
ಸಾರ್ವಜನಿಕರಿಗೆ ತೀವ್ರ ತೊಂದರೆ ಪಟ್ಟಣದಲ್ಲಿ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ. ಬೀದಿ ಬದಿ ವ್ಯಾಪಾರಸ್ಥರು ಪ್ರತಿದಿನ ಬಿಸಿಲು ಮಳೆ ಚಳಿಯೆನ್ನದೆ ರಸ್ತೆಯಲ್ಲಿಯೇ ವ್ಯಾಪಾರ ಮಾಡುವಂತಾಗಿದೆ. ನಾವು ವ್ಯಾಪಾರ ಮಾಡುವ ಜೋಡು ರಸ್ತೆಯಲ್ಲಿ ಮೂತ್ರಾಲಯ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ವ್ಯಾಪಾರಸ್ಥರು ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ
–ರಾಜು ಮಾಂಡ್ರೆ ಟಿವಿಸಿ ಕಮಿಟಿ ಸದಸ್ಯ ಗಜೇಂದ್ರಗಡ
ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆ ಮಾಡಲಾಗಿದ್ದು 500ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರಿದ್ದಾರೆ. ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಆರಂಭದಲ್ಲಿ ₹10 ಸಾವಿರ ಸಾಲ ಸೌಲಭ್ಯ ಕೊಡಿಲಾಗುತ್ತಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ₹20 ಸಾವಿರ ₹50 ಸಾವಿರ ಸಾಲ ಸೌಲಭ್ಯ ಕೊಡಿಸಲಾಗುತ್ತಿದೆ. ನಮ್ಮ ಪುರಸಭೆ ವ್ಯಾಪ್ತಿಯಲ್ಲಿ 563 ವ್ಯಾಪಾರಿಗಳಿಗೆ ₹10 ಸಾವಿರ 228 ವ್ಯಾಪಾರಿಗಳಿಗೆ ₹20 ಸಾವಿರ 43 ವ್ಯಾಪಾರಿಗಳಿಗೆ ₹50 ಸಾವಿರ ಸಾಲ ಸೌಲಭ್ಯ ಕೊಡಿಸಲಾಗಿದೆ. ಅಲ್ಲದೆ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
–ಮಲ್ಲಿಕಾರ್ಜುನ ಪುರಸಭೆ ವ್ಯವಸ್ಥಾಪಕ ಗಜೇಂದ್ರಗಡ.
ಜಾಗ ಸಿಗುವವರೆಗೆ ತೊಂದರೆ ಗಜೇಂದ್ರಗಡ ಪಟ್ಟಣದಲ್ಲಿ ಪ್ರತ್ಯೇಕ ಮಾರುಕಟ್ಟೆ ಇಲ್ಲದ ಕಾರಣ ವ್ಯಾರಸ್ಥರು ರಸ್ತೆಯಲ್ಲಿಯೇ ವ್ಯಾಪಾರ ಮಾಡುವಂತ ಸ್ಥಿತಿ ಇದ್ದು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಎಪಿಎಂಸಿ ಎದುರಿನ ಪುರಸಭೆಯ ಬಯಲು ಜಾಗೆಯ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯ ಚಾಲ್ತಿಯಲ್ಲಿರುವುದರಿಂದ ವ್ಯಾಜ್ಯ ನಿಕಾಲಿ ತರುವಾಯ ಅಲ್ಲಿ ತರಕಾರಿ ಹಣ್ಣಿನ ಮಾರುಕಟ್ಟೆ ಸೇರಿದಂತೆ ಎಲ್ಲ ರೀತಿಯ ಮಾರುಕಟ್ಟೆಗಳನ್ನು ನಿರ್ಮಿಸಲು ಅನುಕೂಲವಾಗುತ್ತದೆ. ಅಲ್ಲದೆ ಮಾರುಕಟ್ಟೆಗೆ ಸೂಕ್ತವಾದ ಜಾಗೆ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
-ಮುರ್ತುಜಾ ಡಾಲಾಯತ ಪುರಸಭೆ ವಿಪಕ್ಷ ನಾಯಕ ಗಜೇಂದ್ರಗಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.