ADVERTISEMENT

ನಿರಂತರ ಮಳೆ: ಮುಳಗುಂದ–ಗದಗ ರಸ್ತೆ ಹಾಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 14:10 IST
Last Updated 31 ಜುಲೈ 2024, 14:10 IST
ಮುಳಗುಂದ–ಗದಗ ನಡುವಿನ ರಸ್ತೆಯು ಮಳೆಯಿಂದಾಗಿ ಗುಂಡಿ ಬಿದ್ದು ಹಾಳಾಗಿದೆ
ಮುಳಗುಂದ–ಗದಗ ನಡುವಿನ ರಸ್ತೆಯು ಮಳೆಯಿಂದಾಗಿ ಗುಂಡಿ ಬಿದ್ದು ಹಾಳಾಗಿದೆ   

ಮುಳಗುಂದ: ನಿರಂತರ ಮಳೆ ಪರಿಣಾಮ ಮುಳಗುಂದ–ಗದಗ ನಡುವಿನ ಮುಖ್ಯ ರಸ್ತೆ ಹಾಳಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಮಳೆ ಆಗುವ ಪೂರ್ವದಲ್ಲೇ ರಸ್ತೆ ತಗ್ಗು ಬಿದ್ದು ಹಾಳಾಗಿತ್ತು, ಈಗ ಮತ್ತಷ್ಟು ಹದಗೆಟ್ಟಿದೆ. ಕಳೆದೊಂದು ತಿಂಗಳಿಂದ ನಿರಂತರ ಮಳೆ ಆಗುತ್ತಿರುವ ಕಾರಣ ಹರ್ತಿ ಗ್ರಾಮದಿಂದ ನಾಗಾವಿ ಕ್ರಾಸ್ ವರೆಗೆ 10 ಕಿ.ಮೀ. ಡಾಂಬರು ರಸ್ತೆ ಕಿತ್ತು, ದಾರಿ ಉದ್ದಕ್ಕೂ ಗುಂಡಿಗಳು ಬಿದ್ದು, ಹೊಂಡಗಳು ಸೃಷ್ಟಿಯಾಗಿವೆ. ಬೈಕ್, ವಾಹನ ಸವಾರರು ಎದ್ದು ಬಿದ್ದು ಹೋಗುವ ಸನ್ನಿವೇಶಗಳು ನಿತ್ಯ ನಡೆಯುತ್ತಿವೆ.

‘ಇಚಲಹಳ್ಳದ ಸೇತುವೆ ಹತ್ತಿರ ದೊಡ್ಡ ಕಂದಕ ಉಂಟಾಗಿದೆ, ಮುಳಗುಂದ ದ್ವಾರ ಬಾಗಿಲ ಹತ್ತಿರ ರಸ್ತೆ ಕಿತ್ತು ಹೋಗಿದ್ದು, ರಾತ್ರಿ ಹೊತ್ತು ಬೈಕ್, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಬೇಸಿಗೆಯಲ್ಲಿ ದುರಸ್ತಿ ಕಾಮಗಾರಿ ಮಾಡದಿರುವ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗಿದೆ’ ಎಂದು ರಾಘವೇಂದ್ರ ಕುಂಬಾರಗೇರಿ ಅವರು ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈ ಮಾರ್ಗವಾಗಿ ನಿತ್ಯ ನೂರಾರು ಪ್ರಯಾಣಿಕ ವಾಹನಗಳು, ಟಿಪರ್, ಲಾರಿ, ಬೈಕ್ ಸೇರಿಂದತೆ ಸಾವಿರಾರು ವಾಹನಗಳ ಸಂಚಾರವಿದೆ. ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆ ಹಾಳಾಗುವುದು ಸಾಮಾನ್ಯವಾಗಿದ್ದು, ಸರ್ವಋತು ರಸ್ತೆ ನಿರ್ಮಾಣ ಕಾಮಗಾರಿ ಮಾಡಬೇಕಿದೆ. ಅಧಿಕಾರಿಗಳು ಗಮನ ಹರಿಸಬೇಕು’ ಎಂಬುದು ಸಾರ್ವಜನಿಕರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.