ADVERTISEMENT

ಭಾರತ ಪ್ರಜಾಪ್ರಭುತ್ವ ವಿಶ್ವದಲ್ಲಿಯೇ ಶ್ರೇಷ್ಠ: ಜಿ.ಎಸ್‌.ಪಾಟೀಲ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಜಿ.ಎಸ್‌.ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 3:04 IST
Last Updated 16 ಸೆಪ್ಟೆಂಬರ್ 2025, 3:04 IST
ಗದಗ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಶಾಸಕ ಜಿ.ಎಸ್‌.ಪಾಟೀಲ ಉದ್ಘಾಟಿಸಿದರು
ಗದಗ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಶಾಸಕ ಜಿ.ಎಸ್‌.ಪಾಟೀಲ ಉದ್ಘಾಟಿಸಿದರು   

ಗದಗ: ‘ಭಾರತವು ಬಲಿಷ್ಠ ಹಾಗೂ ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿದ ದೇಶ’ ಎಂದು ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಪ್ರಜಾಪ್ರಭುತ್ವದಲ್ಲಿ ಶಾಂತಿ ಮತ್ತು ಸಮಾನತೆ ಅವಕಾಶ ಕಲ್ಪಿಸಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸಬೇಕಿದೆ. ವಿಶೇಷವಾಗಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿಲ್ಲದ ದೇಶಗಳೂ ಸಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಳ್ಳುವ ಮಹತ್ವದ ಹೆಜ್ಜೆ ಇಡಬೇಕು’ ಎಂದರು.

ADVERTISEMENT

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ‘ಸಂವಿಧಾನದ ಆಶಯದಂತೆ ಮೀಸಲಾತಿ ಇರದೇ ಹೋಗಿದ್ದರೆ ಕೆಳವರ್ಗದ ಪ್ರಜೆಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಪ್ರಜಾಪ್ರಭುತ್ವದ ಕುರಿತು ಇನ್ನೂ ಹೆಚ್ಚು ಅರಿವು ಮೂಡಿಸುವ ಕಾರ್ಯ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಆಗಬೇಕಿದೆ’ ಎಂದರು.

ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಸಂವಿಧಾನದ ಪ್ರಸ್ತಾವ ಬೋಧಿಸಿದರು.

ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಚಿತ್ರಕಲೆ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಗದಗ ಬೆಟಗೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ, ಎಸ್.ಎನ್.ಬಳ್ಳಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ ಇದ್ದರು.

ಮೊರಾರ್ಜಿ ದೇಸಾಯಿ ವಸತಿಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಸ್ವಾಗತಿಸಿದರು. ಎಚ್.ಆರ್.ಸಕ್ರಿ ವಂದಿಸಿದರು. ವೀರಯ್ಯ ಹೊಸಮಠ ನಿರೂಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಪ್ರಜೆಗಳ ಹಿತಕ್ಕಾಗಿ ಪ್ರಜಾಪ್ರಭುತ್ವದ ಅವಶ್ಯಕತೆ ಇದೆ ಎನ್ನುವ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರದಿಂದಲೇ ದೇಶವು ಅಖಂಡವಾಗಿ ಉಳಿಯಲು ಸಾಧ್ಯವಾಯಿತು
ಜಿ.ಎಸ್‌.ಪಾಟೀಲ ಶಾಸಕ
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸದೇ ಇದ್ದರೆ ಕೆಳವರ್ಗದ ಜನರು ಅಧಿಕಾರ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರಕಬೇಕಿದೆ
ಬಿ.ಬಿ.ಅಸೂಟಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ

‘ವಿವಿಧತೆಯಲ್ಲಿ ಏಕತೆ ಸಾಧಿಸಿದ ಭಾರತ’

‘ವಿಶ್ವದ 195 ದೇಶಗಳಲ್ಲಿ ಭಾರತವು ಪ್ರಜಾಪ್ರಭುತ್ವದಲ್ಲಿ ತನ್ನದೇ ಆದ ವೈಶಿಷ್ಟ್ಯ ಹಾಗೂ ಮಹತ್ವ ಹೊಂದಿದೆ. ವಿವಿಧತೆಯಲ್ಲಿ ಏಕತೆ  ಸಾರಿದಂತಹ ದೇಶ ನಮ್ಮದು’ ಎಂದು ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಎ.ಕರ್ನೂಲ ಹೇಳಿದರು. ‘ಸಮಾನತೆಯೇ ಪ್ರಜಾಪ್ರಭುತ್ವದ ಮೂಲ ಸಾರ. ಸಂವಿಧಾನದ ಮೂರು ಅಂಗಗಳು ಒಂದಕ್ಕೊಂದು ಪೂರಕವಾಗಿವೆ. 18 ವರ್ಷ ಪೂರೈಸಿದ ಪ್ರತಿಯೊಬ್ಬ ಸ್ತ್ರೀ ಪುರುಷರು ಮುಕ್ತವಾಗಿ ಮತದಾನ ಮಾಡಬಹುದಾಗಿದೆ. ಬಂದೂಕಿನ ಅಸ್ತ್ರಕ್ಕಿಂತ ಮತದಾನ ಬಲಿಷ್ಠವಾಗಿದೆ. ನಿರಂತರ ಜಾಗರೂಕತೆಯೇ ಪ್ರಜಾಪ್ರಭುತ್ವದ ಬೆಲೆಯಾಗಿದೆ. ದಾರ್ಶನಿಕರು ಹಿರಿಯರು ಹಾಕಿದ ಮಾರ್ಗದರ್ಶನದಲ್ಲಿ ಮುನ್ನಡೆದು ಸಂವಿಧಾನವನ್ನು ಗೌರವಿಸಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.