ADVERTISEMENT

ಮುಳಗುಂದ | ಮೂಲಸೌಲಭ್ಯ ವಂಚಿತ ಅಶ್ವಿನಿ ನಗರ: ಗ್ರಾಮಸ್ಥರ ಆಕ್ರೋಶ

ರಸ್ತೆ, ಚರಂಡಿ ನಿರ್ಮಾಣ, ಸ್ವಚ್ಛತೆ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:47 IST
Last Updated 17 ಸೆಪ್ಟೆಂಬರ್ 2025, 4:47 IST
ಮುಳಗುಂದದ ಅಶ್ವಿನಿ ನಗರದಲ್ಲಿನ ಕಚ್ಚಾ ರಸ್ತೆ 
ಮುಳಗುಂದದ ಅಶ್ವಿನಿ ನಗರದಲ್ಲಿನ ಕಚ್ಚಾ ರಸ್ತೆ    

ಮುಳಗುಂದ: ಇಲ್ಲಿನ ಅಶ್ವಿನಿ ನಗರದಲ್ಲಿ ಮೂಲಸೌಲಭ್ಯಗಳ ಕೊರತೆ ಹಾಗೂ ಸ್ವಚ್ಛತೆ ಇಲ್ಲದರ ನಡುವೆ ಸಾರ್ವಜನಿಕರು ಜೀವನ ಸಾಗಿಸುವ ಪರಿಸ್ಥಿತಿ ಮುಂದುವರಿದಿದೆ.

ಅಶ್ವಿನಿ ನಗರದಲ್ಲಿ 150ಕ್ಕೂ ಹೆಚ್ಚು ಮನೆಗಳಿದ್ದು, ಮುಖ್ಯ ರಸ್ತೆಗಳನ್ನು ಮಾತ್ರ ಅಭಿವೃದ್ದಿಪಡಿಸಲಾಗಿದೆ. ನಗರದಲ್ಲಿರುವ 10ಕ್ಕೂ ಹೆಚ್ಚು ಕಚ್ಚಾ ಅಡ್ಡರಸ್ತೆಗಳಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತಿವೆ. ವೃದ್ದರು, ಮಕ್ಕಳು ಕೆಸರಿನಲ್ಲಿ ನಡೆದು ಹೋಗುವಾಗ ಜಾರಿ ಬಿದ್ದ ಅನೇಕ ಘಟನೆಗಳು ಸಂಭವಿಸಿವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮನೆಯೊಳಗೆ ನುಗ್ಗಿ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ.

ಕೆಲವು ಭಾಗದಲ್ಲಿ ಮಳೆ ನೀರು ನಿಂತು ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟ ಅಧಿಕವಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ. ಮುಖ್ಯರಸ್ತೆ ಪಕ್ಕದಲ್ಲಿ ನಿರ್ಮಿಸಿದ ಚರಂಡಿಗಳು ಕಸ ಬಿದ್ದು ಹೂಳು ತುಂಬಿವೆ. ಕೊಳಚೆ ನೀರು ಮುಂದೆ ಸಾಗದೆ ನಗರದ ಮನೆಗಳ ಮುಂದೆ ನಿತ್ಯ ದುರ್ನಾತ ಉಂಟಾಗುತ್ತಿದೆ. ಅರ್ಧ ಊರಿನ ಚರಂಡಿ ನೀರು ನಗರದಲ್ಲಿ ಹಾಯ್ದು ಹಳ್ಳ ಸೇರುತ್ತದೆ. ಆದರೆ, ಸೂಕ್ತ ಕಾಲುವೆ ನಿರ್ಮಾಣ ಕಾರ್ಯ ನಡೆದಿಲ್ಲ. ಇದರಿಂದ ಮುಖ್ಯ ಸಿಸಿ ರಸ್ತೆ ಕೂಡ ಹಾಳಾಗಿದೆ. ಅಧಿಕ ಮಳೆಯಾದಾಗ ಸಂದರ್ಭದಲ್ಲಿ ಚರಂಡಿ ನೀರು ಹಾಗೂ ಅಬ್ಬಿಕೆರೆ ಕೋಡಿಬಿದ್ದ ನೀರು ರಭಸವಾಗಿ ಹರಿಯುವುದರಿಂದ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ ಘಟನೆಗಳು ನಡೆದಿವೆ.

ADVERTISEMENT

‘ನಿವಾಸಿಗಳ ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಸ್ಥಳೀಯ ಪಟ್ಟಣ ಪಂಚಾಯಿತಿ ಅನುದಾನದ ₹5 ಲಕ್ಷ ವೆಚ್ಚದಲ್ಲಿ 2022ರಲ್ಲಿ ಬೋರ್‌ವೆಲ್‌ ಹಾಗೂ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಒಂದು ಟ್ಯಾಂಕ್‌ಗೆ ಮಾತ್ರ ನೀರಿನ ಸಂಪರ್ಕ ಕೊಟ್ಟಿದ್ದು, ಇನ್ನೊಂದು ಟ್ಯಾಂಕ್‌ಗೆ ಹಾಗೆ ಬಿಡಲಾಗಿದೆ. ಈ ಕುರಿತು ಸಾಕಷ್ಟು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಕೃಷ್ಣಪ್ಪ ಜಾಧವ ಆರೋಪಿಸಿದರು.

‘ಪಟ್ಟಣ ಪಂಚಾಯಿತಿಗೆ ಮನೆ ತೆರಿಗೆ, ನೀರಿನ ಕರ, ಅಭಿವೃದ್ದಿ ಶುಲ್ಕ ಕಟ್ಟಿದ್ದೇವೆ. ಆದರೂ ಸೂಕ್ತ ಚರಂಡಿ, ರಸ್ತೆ ಅಭಿವೃದ್ದಿ ಆಗುತ್ತಿಲ್ಲ. 32 ವರ್ಷಗಳಿಂದ ಮೂಲಸೌಲಭ್ಯಗಳಿಲ್ಲದೇ ಜೀವನ ಸಾಗಿಸುತ್ತಿದ್ದೇವೆ. ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳ ಗಮನಕ್ಕೆ ಬರುತ್ತೇವೆ. ಆದರೆ, ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಮೈಲಾರಪ್ಪ ಸುಣಗಾರ, ಸೈದುಸಾಬ ಕಲಕುಟ್ರ, ಬಸಪ್ಪ ಲಕ್ಕುಂಡಿ ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಇಲಾಖೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮನವಿಗೆ ಸ್ಪಂದಿಸಿ ಅಶ್ವಿನಿ ನಗರಕ್ಕೆ ಮೂಲಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಮುಳಗುಂದದ ಅಶ್ವಿನಿ ನಗರದಲ್ಲಿನ ಚರಂಡಿಗಳು ಹೂಳು ತುಂಬಿರುವದು  
ಅಶ್ವಿನಿ ನಗರದಲ್ಲಿ ನೀರಿಲ್ಲದೆ ನಿರುಪಯುಕ್ತವಾದ ಟ್ಯಾಂಕ್ 
ಅಶ್ವಿನಿ ನಗರದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಿಸುವ ಕುರಿತು ಪರಿಶೀಲನೆಗೆ ಎಂಜಿನಿಯರ್ ಕಳುಹಿಸಲಾಗುವುದು. ಕಾಮಗಾರಿ ಕ್ರಿಯಾಯೋಜನೆ ಹಾಗೂ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು
ಕೃಷ್ಣ ಹಾದಿಮನಿ ಪ್ರಭಾರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಮುಳಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.