ADVERTISEMENT

ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಕೈಬಿಡಿ: ಶಾಸಕ ಡಾ. ಚಂದ್ರು ಲಮಾಣಿ

ಬಂಜಾರ ಸಮುದಾಯದಿಂದ ಪ್ರತಿಭಟನೆ; ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ– ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:49 IST
Last Updated 7 ಅಕ್ಟೋಬರ್ 2025, 2:49 IST
ಅವೈಜ್ಞಾನಿಕ ಒಳಮೀಸಲಾತಿಯ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಗದಗ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು
ಅವೈಜ್ಞಾನಿಕ ಒಳಮೀಸಲಾತಿಯ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಗದಗ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು   

ಗದಗ: ‘ಕೆಲವು ಸಮುದಾಯಗಳನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಒಳಮೀಸಲಾತಿ ಜಾರಿ ಮಾಡಿದ್ದು, ಈ ಅವೈಜ್ಞಾನಿಕ ಒಳಮೀಸಲಾತಿಯ ವರ್ಗೀಕರಣವನ್ನು ಕೂಡಲೇ ಕೈಬಿಡಬೇಕು’ ಎಂದು ಶಾಸಕ ಡಾ. ಚಂದ್ರು ಲಮಾಣಿ ಆಗ್ರಹಿಸಿದರು.

ಅವೈಜ್ಞಾನಿಕ ಒಳಮೀಸಲಾತಿಯ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ನಡೆದ ಬೃಹತ್‌ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.

‘2011ರ ಜನಗಣತಿಯ ಅಂಕಿ ಅಂಶಗಳನ್ನು 2025ರೊಂದಿಗೆ ಹೋಲಿಸಿದಾಗ, ಕೆಲವು ಜಾತಿಗಳ ಜನಸಂಖ್ಯೆ ಕೇವಲ ಶೇ 1.13ರಷ್ಟು ಹೆಚ್ಚಳ ತೋರಿಸಲಾಗಿದೆ. ಇನ್ನು ಕೆಲವು ಜಾತಿಗಳಿಗೆ ಶೇ 10ರಿಂದ 12ರಷ್ಟು ಹೆಚ್ಚಳ ತೋರಿಸಿರುವುದರ ಹಿಂದಿನ ಮರ್ಮವನ್ನು ನಾಗಮೋಹನದಾಸ್‌ ಅವರು ಬಹಿರಂಗಪಡಿಸಬೇಕಿದೆ’ ಎಂದು ಆಗ್ರಹಿಸಿದರು.

ADVERTISEMENT

‘ಈ ಹಿಂದೆ ಹೋರಾಟ ನಡೆದಾಗ ಜಿಲ್ಲಾ ಉಸ್ತುವಾರಿ ಸಚಿವರು ಮಾತು ಕೊಟ್ಟಿದ್ದರು. ಆದರೆ, ಆ ಮಾತಿನಂತೆ ನಡೆದುಕೊಳ್ಳಲಿಲ್ಲ’ ಎಂದು ಕಿಡಿಕಾರಿದರು.

ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಮಾತನಾಡಿ, ‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಏಕ ಸದಸ್ಯ ಪೀಠದ ಆಯೋಗವು ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಮಾನದಂಡಗಳನ್ನು ಸಂರ್ಪೂಣವಾಗಿ ಉಲ್ಲಂಘಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಮುಂದುವರಿದ ಭಾಗದಂತಿದೆ. ಶಿಕ್ಷಣ, ಉದ್ಯೋಗ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಅಂಕಿ ಅಂಶಗಳು ವಾಸ್ತವಕ್ಕೆ ದೂರವಾಗಿವೆ. ಕೆಲವು ಕುಟುಂಬಗಳು ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ ಎಂದು ಆಯೋಗವೇ ಒಪ್ಪಿಕೊಂಡಿದ್ದರೂ, ಸರ್ಕಾರ ಈ ಅಪೂರ್ಣ ವರದಿಯನ್ನೇ ಜಾರಿಗೊಳಿಸಿ ಕಾಂಗ್ರೆಸ್‌ ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯವೆಸಗಿದೆ’ ಎಂದು ಕಿಡಿಕಾರಿದರು. 

‘12 ದಿನಗಳ ಅಹೋರಾತ್ರಿ ಹೋರಾಟದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಅನೇಕ ಮಠಾಧೀಶರು ಮತ್ತು ಮುಖಂಡರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಬಂಜಾರ ಸಮುದಾಯದ ಮುಖಂಡ ಉಮೇಶ ರಾಠೋಡ ಮಾತನಾಡಿ, ‘ಆಯೋಗ ಸಿದ್ಧಪಡಿಸಿದ ಕೋಷ್ಟಕದಲ್ಲಿ ‘ಡಿ’ ಗುಂಪಿನಲ್ಲಿರುವ ಲಂಬಾಣಿ ಮತ್ತು ಇತರೆ ಸಮುದಾಯವು 23 ಮಾನದಂಡಗಳಲ್ಲಿ ಕೇವಲ 6 ವಿಷಯಗಳಲ್ಲಿ ಮಾತ್ರ ತುಸು ಮುಂದಿದ್ದು, ಉಳಿದ 17 ವಿಷಯಗಳಲ್ಲಿ ‘ಸಿ’ ಗುಂಪಿಗಿಂತ ತುಂಬಾ ಹಿಂದುಳಿದಿದೆ ಎಂಬುದನ್ನು ತೋರಿಸಲಾಗಿದೆ. ಹೀಗಿದ್ದರೂ, ‘ಡಿ’ ಗುಂಪಿಗೆ ‘ಸಿ’ ಗುಂಪಿಗಿಂತ ಕಡಿಮೆ ಶೇಕಡಾವಾರು ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಗದಗ ಜಿಲ್ಲಾ ತಾಂಡಾದ ನಾಯಕ, ಡಾವಸಾಣ, ಕಾರಭಾರಿ ಮತ್ತು ಪಂಚರು, ಮುಖಂಡರಾದ ಚಂದ್ರಕಾಂತ ಚವ್ಹಾಣ, ಭೀಮಸಿಂಗ್ ರಾಠೋಡ್‌, ಐ.ಎಸ್.ಪೂಜಾರ, ಟಿ.ಎಲ್.ನಾಯಕ, ಚಂದು ನಾಯಕ, ಶಿವಪ್ಪ ನಾಯಕ, ಕೇಶಪ್ಪ ಕಾರಭಾರಿ, ಕುಬೇರಪ್ಪ ನಾಯಕ, ಖೀಮಪ್ಪ ನಾಯಕ, ತೇಜು ನಾಯಕ, ಗೀತಾಬಾಯಿ ಸೇರಿದಂತೆ ಸಮಾಜದ ಮುಖಂಡರು, ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಹಿಂದೆ ನಾವು ಹೋರಾಟ ಮಾಡಿದಾಗ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಸಮಾಜದ ಹಿತ ಕಾಪಾಡುತ್ತೇನೆಂದು ಹೇಳಿದ್ದರು. ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಸಿಎಂ ಜತೆಗೆ ಮಾತನಾಡಬೇಕು
ರವಿಕಾಂತ ಅಂಗಡಿ ಮುಖಂಡ

ಅಹೋರಾತ್ರಿ ಧರಣಿಗೆ ಚಾಲನೆ

ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಬಂಜಾರ ಸಂಪ್ರದಾಯದಂತೆ ಭೋಗ್ ಹಚ್ಚಿ ನಗಾರಿ ಬಾರಿಸುವುದರ ಮೂಲಕ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಗೆ ಚಾಲನೆ ನೀಡಲಾಯಿತು. ನಗರದ ಗಾಂಧಿ ವೃತ್ತದಿಂದ ಪ್ರಾರಂಭವಾದ ಪಾದಯಾತ್ರೆ ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ಟಾಂಗಾಕೂಟ ಬಸವೇಶ್ವರ ಸರ್ಕಲ್ ಚನ್ನಮ್ಮ ವೃತ್ತ ಮುಳಗುಂದ ನಾಕಾದಲ್ಲಿ ಒಳಮೀಸಲಾತಿ ಆದೇಶ ಪ್ರತಿಯನ್ನು ಬಂಜಾರ ಮಹಿಳೆಯರು ಸುಟ್ಟು ಹಾಕುವುದರ ಮೂಲಕ ಆಕ್ರೋಶ ಹೊರಹಾಕಿದರು. ಅವೈಜ್ಞಾನಿಕ ಒಳಮೀಸಲಾತಿ ರದ್ದುಪಡಿಸಿ ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದರು. ಬಳಿಕ ಸ್ವಲ್ಪ ಸಮಯ ರಸ್ತೆ ತಡೆ ನಡೆಸಿದರು. ನಂತರ ಟಿಪ್ಪು ಸುಲ್ತಾನ್ ವೃತ್ತದ ಮಾರ್ಗವಾಗಿ ಗದಗ ಜಿಲ್ಲಾಧಿಕಾರಿ ಕಚೇರಿ ತಲುಪಿ ಅಹೋರಾತ್ರಿ ಧರಣಿ ಪ್ರಾರಂಭಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.