ADVERTISEMENT

ಮುಂಡರಗಿ|ಕಾಲುವೆಗಳನ್ನು ಆವರಿಸಿರುವ ಗಿಡಗಳು:ಜಮೀನಿಗೆ ಇನ್ನಾದರೂ ಹರಿಯುವುದೇ ನೀರು?

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:20 IST
Last Updated 7 ಡಿಸೆಂಬರ್ 2025, 5:20 IST
<div class="paragraphs"><p>ಮುಂಡರಗಿ ತಾಲ್ಲೂಕಿನ ಯಕ್ಲಾಸಪುರ ಗ್ರಾಮದ ಬಳಿ ಸಂಪೂರ್ಣ ಹಾಳಾಗಿರುವ ಮುಖ್ಯ ಕಾಲುವೆ ಹಾಗೂ ರೈತರ ಜಮೀನು ಸಂಪರ್ಕಿಸಲು ನಿರ್ಮಿಸಿರುವ ಕಿರು ಸೇತುವೆ</p></div>

ಮುಂಡರಗಿ ತಾಲ್ಲೂಕಿನ ಯಕ್ಲಾಸಪುರ ಗ್ರಾಮದ ಬಳಿ ಸಂಪೂರ್ಣ ಹಾಳಾಗಿರುವ ಮುಖ್ಯ ಕಾಲುವೆ ಹಾಗೂ ರೈತರ ಜಮೀನು ಸಂಪರ್ಕಿಸಲು ನಿರ್ಮಿಸಿರುವ ಕಿರು ಸೇತುವೆ

   

ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ವಿವಿಧ ಕಾಮಗಾರಿಗಳು ಅಪೂರ್ಣಗೊಂಡಿದ್ದು, ಸಮರ್ಪಕ ನಿರ್ವಹಣೆ ಇಲ್ಲದೆ ನೀರಾವರಿ ಯೋಜನೆ ಇದ್ದೂ ಇಲ್ಲದಂತಾಗಿದೆ. ಹಲವು ಕಾರಣಗಳಿಂದ ಮೂರು ದಶಕ ಕಳೆದರೂ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ.

ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ದಿ. ಎಂ.ಪಿ.ಪ್ರಕಾಶ ಹಾಗೂ ಸಚಿವ ಎಚ್.ಕೆ.ಪಾಟೀಲ ಅವರ ಸತತ ಪ್ರಯತ್ನದ ಫಲವಾಗಿ ಹಮ್ಮಿಗಿ ಗ್ರಾಮದಲ್ಲಿ ಶಿಂಗಟಾಲೂರ ಏತ ನೀರಾವರಿ ಯೋಜನೆ ಆರಂಭವಾಯಿತು. ಸಾವಿರಾರು ಕೋಟಿ ವ್ಯಯಿಸಿ ನಿರ್ಮಿಸಿದ ನೀರಾವರಿ ಯೋಜನೆಯು ಈವರೆಗೂ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ಈ ಭಾಗದ ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆ ಹಾಗೂ ಸೂಕ್ಷ್ಮ ಹನಿ ನೀರಾವರಿ ಪದ್ಧತಿಯ ಮೂಲಕ ಗದಗ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ರೈತರ ಜಮೀನಿಗೆ ವರ್ಷದುದ್ದಕ್ಕೂ ಸಮೃದ್ಧವಾಗಿ ನೀರು ಹರಿಯಬೇಕಿತ್ತು. ಯೋಜನೆಯ ಮೂಲಕ ಮುಂಡರಗಿ ತಾಲ್ಲೂಕಿನ 92,881 ಎಕರೆ, ಗದಗ ತಾಲ್ಲೂಕಿನ 66,827 ಎಕರೆ, ಕೊಪ್ಪಳ ತಾಲ್ಲೂಕಿನ 55,706 ಎಕರೆ, ಹೂವಿನಹಡಗಲಿ ತಾಲ್ಲೂಕಿನ 35,791 ಎಕರೆ, ಯಲಬುರ್ಗಾ ತಾಲ್ಲೂಕಿನ 14,624 ಎಕರೆ ಜಮೀನಿಗೆ ನೀರು ಹರಿಯಬೇಕಿದೆ.

ಆದರೆ, ದಶಕಗಳ ಹಿಂದೆ ಅಸಮರ್ಪಕವಾಗಿ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಬೃಹತ್ ಹಾಗೂ ಕಿರುಗಾಲುವೆಗಳು ಈಗ ಸಂಪೂರ್ಣವಾಗಿ ಗಿಡಗಳಿಂದ ಆವೃತವಾಗಿವೆ. ಕೆಲವು ಕಿರುಗಾಲುವೆಗಳು ಸಂಪೂರ್ಣವಾಗಿ ಹೂತು ಹೋಗಿವೆ. ಕೆಲವು ಭಾಗಗಳಲ್ಲಿ ರೈತರ ಜಮೀನಿಗಿಂತ ಆರೇಳು ಅಡಿ ಕೆಳಗೆ ಕಾಲುವೆ ನಿರ್ಮಿಸಲಾಗಿದ್ದು, ಅವುಗಳಿಂದ ರೈತರ ಜಮೀನಿಗೆ ನೀರು ಹರಿಯದಾಗಿದೆ.

ನೀರಾವರಿ ಯೋಜನೆಗಾಗಿ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ಖರ್ಚು ಮಾಡಿದ್ದು, ಪ್ರತಿವರ್ಷ ನಿರ್ವಹಣೆಗಾಗಿಯೇ ಅಪಾರ ಹಣ ವ್ಯಯಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ನೀರಾವರಿ ಯೋಜನೆಯ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಲಿದೆ. ಆದರೆ ರೈತರ ಜಮೀನುಗಳಿಗೆ ಮಾತ್ರ ನೀರು ಹರಿಯದಾಗಿದೆ.

ಆರಂಭದಲ್ಲಿ ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಜಮೀನುಗಳಿಗೆ ನೀರು ಒದಗಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಸಚಿವ ಎಚ್.ಕೆ.ಪಾಟೀಲ ಬ್ಯಾರೇಜ್‌ನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವನ್ನು (ಟಿಎಂಸಿ) ಹೆಚ್ಚಿಸಿ ಕೊಪ್ಪಳ ಹಾಗೂ ಮತ್ತಿತರ ಭಾಗಗಳ ರೈತರಿಗೂ ನೀರೊದಗಿಸಲು ಪ್ರಯತ್ನಿಸಿದರು. ಅದರ ಫಲವಾಗಿ ಹಮ್ಮಿಗಿಯಿಂದ ವಿವಿಧ ಭಾಗಗಳಿಗೂ ನೀರೊದಗಿಸುವ ಯೋಜನೆ ರೂಪಿಸಲಾಯಿತು. ಆದರೆ, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಪ್ರತಿವರ್ಷ ವಿಶೇಷ ಅಧಿವೇಶನ ನಡೆಸಲಾಗುತ್ತಿದೆ ಎಂದು ಹೇಳುತ್ತಿರುವ ಎಲ್ಲ ಸರ್ಕಾರಗಳು, ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಿಡಗಳಿಂದ ಆವೃತ್ತವಾಗಿರುವ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆಗಳು
ಈವರೆಗೂ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವುದು ದುರ್ದೈವದ ಸಂಗತಿ. ಸರ್ಕಾರ ಅನವಶ್ಯಕ ಖರ್ಚು ವೆಚ್ಚಗಳನ್ನು ಬದಿಗಿರಿಸಿ ರೈತರ ಜಮೀನುಗಳಿಗೆ ನೀರು ಒದಗಿಸಲು ಪ್ರಯತ್ನಿಸಬೇಕು
ಎಸ್.ಎಸ್.ಪಾಟೀಲ ಮಾಜಿ ಸಚಿವ

ಹನಿ ನೀರಾವರಿಗೆ ರೈತರ ವಿರೋಧ

ಮೊದಲು ಎಲ್ಲ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರೊದಗಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಈಚೆಗೆ ಕಾಲುವೆ ಬದಲಾಗಿ ಸೂಕ್ಷ್ಮಹನಿ ನೀರಾವರಿ ಪದ್ಧತಿಯ ಮೂಲಕ ನೀರು ಪೂರೈಸುವ ಯೋಜನೆ ರೂಪಿಸಿ ಬಹುತೇಕ ರೈತರ ಜಮೀನುಗಳಲ್ಲಿ ಹನಿ ನೀರಾವರಿ ಪೈಪ್‌ಗಳನ್ನು ಜೋಡಿಸಲಾಗಿದೆ. ವ್ಯವಸ್ಥಿತ ಯೋಜನೆಯಿಲ್ಲದೆ ರೈತರ ಜಮೀನಿನಲ್ಲಿ ಅಳವಡಿಸಿದ್ದ ಹನಿ ನೀರಾವರಿ ಸಲಕರಣೆಗಳು ಈಗ ಸಂಪೂರ್ಣವಾಗಿ ನಾಶವಾಗಿವೆ. ರೈತರ ಸಂಪೂರ್ಣ ಜಮೀನಿಗೆ ಹನಿ ನೀರಾವರಿಯ ಮೂಲಕ ನೀರೊದಗಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ರೈತರು ಹನಿನೀರಾವರಿ ಪದ್ಧತಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದು ಕಾಲುವೆ ಮೂಲಕ ನೀರು ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.