ADVERTISEMENT

ಬೆಂಗಳೂರು ಗಲಭೆ ಪ್ರಕರಣ | ಶಾಸಕ ಜಮೀರ್‌ಗೆ ರಾಜಕಾರಣ ಗೊತ್ತಿಲ್ಲ: ಶೆಟ್ಟರ್‌ ಟೀಕೆ

ಡಿ.ಜೆ.ಹಳ್ಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ?

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 13:54 IST
Last Updated 14 ಆಗಸ್ಟ್ 2020, 13:54 IST
ಸಚಿವ ಜಗದೀಶ್ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್   

ಗದಗ: ಬೆಂಗಳೂರಿನ ಡಿ.ಜೆ. ಹಳ್ಳಿ ಗಲಭೆ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಶಾಸಕ ಜಮೀರ್ ಅಹಮದ್‌ ಖಾನ್‌ ಅವರ ಕ್ರಮವನ್ನು ಸಚಿವ ಜಗದೀಶ್ ಶೆಟ್ಟರ್ ಟೀಕೆ ಮಾಡಿದರು.

ಗದುಗಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಜಮೀರ್‌ ಅವರಿಗೆ ಕಾನೂನು ಗೊತ್ತಿಲ್ಲ; ಜಾತಿ ರಾಜಕಾರಣ ಮಾತ್ರ ಗೊತ್ತು. ಕಿಡಿಗೇಡಿಗಳ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡುವ ಮೂಲಕ ಮತ್ತಷ್ಟು ಪ್ರಚೋದನೆ ನೀಡಿದ್ದಾರೆ. ಅವರು ಒಬ್ಬ ಶಾಸಕರಾಗಿ ಮಾಡುವ ಕರ್ತವ್ಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ’ ಎಂದು ಆರೋಪಿಸಿದ ಅವರು, ಗಲಭೆ ನಡೆಸಿದ ಸಂಘಟನೆಗಳನ್ನು ನಿಷೇಧಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

‘ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ನಿಕಟ ಸಂಬಂಧ ಇದೆ’ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಆರೋಪಿಸಿದರು.

ADVERTISEMENT

‘ಕೇವಲ ಒಂದು ವಾಟ್ಸ್‌ಆ್ಯಪ್‌ ಮೆಸೇಜ್‌ನಿಂದ ಎರಡು–ಮೂರು ಸಾವಿರ ಜನರು ಒಂದಡೆ ಸೇರುತ್ತಾರೆ ಅಂದರೆ ಅದು ಹೇಗೆ ಸಾಧ್ಯ. ಇದೊಂದು ಪೂರ್ವನಿಯೋಜಿತ ಕೃತ್ಯ. ಇಷ್ಟೆಲ್ಲಾ ಗಲಾಟೆ, ಹಿಂಸಾಚಾರ ನಡೆದರೂ ಕಾಂಗ್ರೆಸ್‌ ಖಂಡಿಸುತ್ತಿಲ್ಲ ಏಕೆ.’ ಎಂದು ಪ್ರಶ್ನಿಸಿದರು‌.

‘ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶವಾಗಿದೆ’ ಎಂದು ದೂರಿದರು.

ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದು ನಿಜವೇ ಎಂದು ಖಚಿತಪಡಿಸಿಕೊಳ್ಳಲು ಶಾಸಕ ಜಮೀರ್‌ ಖಾನ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.