ADVERTISEMENT

ಗದಗ: ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 3:03 IST
Last Updated 1 ಡಿಸೆಂಬರ್ 2025, 3:03 IST
ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಪದಾಧಿಕಾರಿಗಳು ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಎ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು
ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಪದಾಧಿಕಾರಿಗಳು ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಎ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು   

ಗದಗ: ಜಿಲ್ಲೆಯ ಜೈನ ಬಸದಿಗಳನ್ನು ಜೀರ್ಣೋದ್ಧಾರ ಮಾಡುವಂತೆ ಆಗ್ರಹಿಸಿ ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಎ. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಆಧೀನಕ್ಕೆ ಒಳಪಡುವ ಗದಗ ಜಿಲ್ಲೆಯ ಜೈನ ಬಸದಿಗಳಾದ ರೋಣ ಪಟ್ಟಣದ ಭಗವಾನ 1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಜೀರ್ಣಾವಸ್ಥೆಯಲ್ಲಿದ್ದು, ಮಂದಿರದ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಒತ್ತುವರಿ ಮಾಡಲಾಗಿದೆ.

ಮುಳಗುಂದ ಪಟ್ಟಣದ ಗುಡ್ಡದಲ್ಲಿರುವ ತ್ರಿಕೂಟ ಜಿನಾಲಯ ಹಾಗೂ ಭಗವಾನ್‌ 1008 ಚಂದ್ರಪ್ರಭು ತೀರ್ಥಂಕರ ಮಂದಿರಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ.

ADVERTISEMENT

ಇದೇ ರೀತಿಯಲ್ಲಿ ಲಕ್ಷ್ಮೇಶ್ವರ ಪಟ್ಟಣದ ನೇಮಿನಾಥ ಬಸದಿ (ಶಂಖ ಬಸದಿ) ಕೂಡ ಶಿಥಿಲವಾಗಿದ್ದು ಗದಗ ಪ್ರವಾಸದಲ್ಲಿರುವ ತಾವುಗಳು ಈ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ಪಾಳು ಬಿದ್ದಿರುವ ಜೈನ ಮಂದಿಗಳನ್ನು ಜೀರ್ಣೋದ್ಧಾರ ಮಾಡಲು ತುರ್ತು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಮನವಿ ಸ್ವೀಕರಿಸಿದ ಆಯುಕ್ತ ದೇವರಾಜ್ ಅವರು, ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುವ ಭರವಸೆ ನೀಡಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಉಪಾಧ್ಯಕ್ಷ ಎಂ.ಟಿ.ಕಬ್ಬಿಣ, ಪಿ.ಜಿ.ನಾವಳ್ಳಿ, ಕಾರ್ಯದರ್ಶಿ ಪ್ರಕಾಶ ಮುತ್ತಿನ, ಜಂಟಿ ಕಾರ್ಯದರ್ಶಿ ಸಂಕಪ್ಪ ನಾವಳ್ಳಿ, ಪ್ರಾಚ್ಯವಸ್ತು ಸಂಶೋಧಕ ಅ.ದ.ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.