ADVERTISEMENT

ಗದಗ | ಶಿರಹಟ್ಟಿಯಲ್ಲಿ ಅದ್ಧೂರಿ ಜನಸಂಕಲ್ಪ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 7:16 IST
Last Updated 9 ನವೆಂಬರ್ 2022, 7:16 IST
   

ಶಿರಹಟ್ಟಿ: ಪಟ್ಟಣದ ಎಫ್.ಎಂ. ಡಬಾಲಿ ಶಾಲಾ ಮೈದಾನದಲ್ಲಿ ಬಿಜೆಪಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆ ಅದ್ಧೂರಿಯಾಗಿ ಜರುಗಿತು.

ಬೆಳಿಗ್ಗೆ 8 ಗಂಟೆಯಿಂದಲೇ ಕಾರ್ಯಕರ್ತರು ಆಗಮಿಸಲು ಪ್ರಾರಂಭಿಸಿದ್ದರು. ಸ್ಥಳೀಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೆಲಿಪ್ಯಾಡ್ ಮೂಲಕ ಬಂದಿಳಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಿಎಂ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

ಸುಮಾರು 12,000 ಜನ ಕಾರ್ಯಕರ್ತರು ಜನಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಆಸನದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಕಾರ್ಯಕರ್ತರು ಕಾರ್ಯಕ್ರಮವನ್ನು ನಿಂತುಕೊಂಡೇ ವೀಕ್ಷಿಸಿದರು. ಪಾಲ್ಗೊಂಡ ಎಲ್ಲಾ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

ಪೊಲೀಸ್ ಭದ್ರತೆ:

ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ಪೊಲೀಸ್ ಇಲಾಖೆ ಬಿಗಿ ಭದ್ರತೆ ಒದಗಿಸಿತು. ಸಿಎಂ ಫಕೀರೇಶ್ವರ ಮಠಕ್ಕೆ ಭೇಟಿ ನೀಡುವ ರಸ್ತೆಯಲ್ಲಿ ಜಿರೋ ಟ್ರಾಫಿಕ್ ಇರಿಸಲಾಗಿತ್ತು. ಮಠ ಹಾಗೂ ಡಬಾಲಿ ಮೈದಾನದ ಕಾರ್ಯಕ್ರಮದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬ್ಯಾನರ್ ಅವಾಂತರ:

ಕಾರ್ಯಕ್ರಮ ನಡೆಯುವಾಗಲೇ ಕೆಲ ಕಾರ್ಯಕರ್ತರು ವೇದಿಕೆಯ ಪಕ್ಕದಲ್ಲಿನ ಬ್ಯಾನರ್ ಹಾಗೂ ಕಟೌಟ್‌ಗಳನ್ನು ಹೊತ್ತೋಯ್ದರು. ಕಾರ್ಯಕ್ರಮ ಮುಗಿದ ನಂತರ ಅಳಿದುಳಿದ‌ ಬ್ಯಾನರ್ ಹಾಗೂ ದೊಡ್ಡ ಕಂಬಗಳನ್ನು ತೆಗೆದುಕೊಂಡು ಹೋಗಲು ಜನರು ಕಚ್ಚಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.