ADVERTISEMENT

ವಿಜಯಪಥವಾಗಲಿದೆ ಜನಸಂಕಲ್ಪ ಯಾತ್ರೆ: ಸಿಎಂ ಬೊಮ್ಮಾಯಿ

ಭಾವೈಕ್ಯದ ನಾಡು ಶಿರಹಟ್ಟಿ; ತುಂಗಾ ತೀರದ ಫಲವತ್ತಾದ ಬೀಡು ಮುಂಡರಗಿ– ಸಿಎಂ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 6:39 IST
Last Updated 9 ನವೆಂಬರ್ 2022, 6:39 IST
ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬೃಹತ್‌ ಹಾರ ಹಾಕಿ ಗೌರವಿಸಲಾಯಿತು
ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬೃಹತ್‌ ಹಾರ ಹಾಕಿ ಗೌರವಿಸಲಾಯಿತು   

ಶಿರಹಟ್ಟಿ (ಗದಗ ಜಿಲ್ಲೆ): ‘ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ವಿಜಯಪಥದ ಯಾತ್ರೆಯಾಗಿ 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು, ‘2018ರ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ ರಾಮಣ್ಣ ಲಮಾಣಿ ದಾಖಲೆಯ ಗೆಲುವು ಸಾಧಿಸಿದ್ದಾರೆ. ಪ್ರತಿ ಬೂತ್‌ನಲ್ಲೂ ಮುನ್ನಡೆ ಪಡೆದು ಗೆಲುವು ಸಾಧಿಸಿದ ರಾಜ್ಯದ ಏಕೈಕ ಕ್ಷೇತ್ರ ಇದು’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷ ಕಬ್ಬು ಇದ್ದಂತೆ. ಅಧಿಕಾರ ಇದ್ದಾಗ ನಾಯಕರು ಕೊಬ್ಬಿರುತ್ತಾರೆ. ಇಲ್ಲದಿದ್ದಾಗ ಹತ್ತಿಯಂತೆ ಆಗುತ್ತಾರೆ. ಸಾಮಾಜಿಕ ನ್ಯಾಯ ಕಾಂಗ್ರೆಸ್ಸಿಗರ ಭಾಷಣದ ಸರಕಾಗಿದೆ. ಬಾಯಿ ಮಾತಿನಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಕೃತಿಯಲ್ಲಿ ಮಾಡಬೇಕು. ಹಿಂದುಳಿದವರು ಹಿಂದೆಯೇ ಉಳಿದರು. ಹಿಂದುಳಿದವರ ಹೆಸರಿನಲ್ಲಿ ಸಿದ್ದರಾಮಯ್ಯ ಮುಂದೆ ಹೋದರು’ ಎಂದು ವಾಗ್ಧಾಳಿ ನಡೆಸಿದರು.

ADVERTISEMENT

‘ಕೇಂದ್ರದ ಮೋದಿ ಸರ್ಕಾರ ಎಂಟು ವರ್ಷಗಳಲ್ಲಿ ಅಪಾರ ಸಾಧನೆ ಮಾಡಿದೆ. ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಮತ್ತು ನೀರು ಕೊಡುವ ಕೆಲಸ ಮಾಡಿದೆ. ದೇಶದಲ್ಲಿ 10 ಕೋಟಿಗಿಂತ ಹೆಚ್ಚು ಮನೆಗಳಿಗೆ ಜೆಜೆಎಂ ಮೂಲಕ ನೀರು ಒದಗಿಸಲಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ 27 ಲಕ್ಷ, ಈ ವರ್ಷ 25 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ಇಂತಹ ದೊಡ್ಡ ಯೋಜನೆ ಮಾಡುವ ತಾಕತ್ತು ಹಿಂದಿನ ಯಾವುದೇ ಪ್ರಧಾನಿಗೆ ಇರಲಿಲ್ಲ. ಮನೆಗಳಿಗೆ ಕನಿಷ್ಠ ನೀರು ಕೊಡಲಾಗದ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

‘ಸಾಮಾಜಿಕ ನ್ಯಾಯದ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಆಗಬೇಕು. ಅದಕ್ಕಾಗಿಯೇ, ಸ್ತ್ರೀ ಸಾಮರ್ಥ್ಯ ಯೋಜನೆ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ 28 ಲಕ್ಷ ಮಂದಿ ರೈತರಿಗೆ ಸಾಲಸೌಲಭ್ಯ ಒದಗಿಸಿದೆ. ರೈತ ವಿದ್ಯಾನಿಧಿ ಮೂಲಕ ಜಿಲ್ಲೆಯಲ್ಲಿ ₹9 ಕೋಟಿ ಹಾಗೂ ಪಿಎಂಕಿಸಾನ್‌ ಯೋಜನೆಯಲ್ಲಿ ₹159 ಕೋಟಿ ಒದಗಿಸಲಾಗಿದೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಅವರಿಗಾಗಿ ಏನೂ ಮಾಡಿಲ್ಲ. ವೋಟ್‌ ಬ್ಯಾಂಕ್‌ ಮಾಡಿಕೊಂಡಿದೆಯಷ್ಟೇ. ಚುನಾವಣೆ ಮುಗಿದ ನಂತರ ಮತ್ತೇ ಅವರನ್ನು ಬಾವಿಗೆ ಇಳಿಸುತ್ತಾರೆ’ ಎಂದು ದೂರಿದರು.

‘ಬಲಿಷ್ಠ ಭಾರತ ಕಟ್ಟುವ ದೂರದೃಷ್ಟಿತ್ವದ ನಾಯಕತ್ವ ಒಂದು ಕಡೆ. ಕೆಳಹಂತದ ಜನರ ಕಲ್ಯಾಣ ಮಾಡು ರಾಜ್ಯ ಸರ್ಕಾರ ಮತ್ತೊಂದೆಡೆ. ರಾಜ್ಯದ ಪ್ರತಿಯೊಬ್ಬ ನಾಗರಿಕನೂ ಸ್ವಾಭಿಮಾನದಿಂದ ಬದುಕಬೇಕು. ಅಂತಹ ಅವಕಾಶ ಸೃಷ್ಟಿಸುವುದು ಬಿಜೆಪಿ ಸಂಕಲ್ಪ. ಇದು ಜನ ಸಂಕಲ್ಪ ಯಾತ್ರೆಯ ಉದ್ದೇಶವೂ ಹೌದು’ ಎಂದು ಹೇಳಿದರು.

ಸಚಿವರಾದ ಶ್ರೀರಾಮುಲು, ಸಿ.ಸಿ.‍ಪಾಟೀಲ, ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ರಾಮಣ್ಣ ಲಮಾಣಿ, ಎಸ್.ವಿ.ಸಂಕನೂರ,ಎನ್ ರವಿಕುಮಾರ್, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಹಾವನಾಳ ಇದ್ದರು.

‘ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ’

‘ಜನ ಸಂಕಲ್ಪ ಯಾತ್ರೆಯಿಂದ ಕಾಂಗ್ರೆಸ್ ಬೆಸ್ತು ಬಿದ್ದಿದೆ. ಶಿರಹಟ್ಟಿ ಸೇರಿದಂತೆ ರಾಜ್ಯದ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಲಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ನರೇಂದ್ರ ಮೋದಿ ಸರಿಸಮನಾಗಿ ನಿಲ್ಲುವ ಮುಖಂಡ ಕಾಂಗ್ರೆಸ್‌ನಲ್ಲಿ ಇಲ್ಲ. ಜಾತಿ, ಹಣ ಬಲದಿಂದ ಅಧಿಕಾರಕ್ಕೆ ಬರುವ ಕಾಲವೊಂದಿತ್ತು. ಆದರೆ, ಈಗ ಅದು ಬದಲಾಗಿದೆ. ಜನರು ಅಭಿವೃದ್ಧಿ ಕಾರ್ಯಗಳನ್ನಷ್ಟೇ ನೋಡುತ್ತಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಯೋಜನೆಗಳನ್ನು ಚುನಾವಣೆ ವೇಳೆ‌ ಜನರಿಗೆ‌ ನೆನಪು ಮಾಡಿಕೊಡಬೇಕು’ ಎಂದು ಹೇಳಿದರು.


ಕೇಂದ್ರದಲ್ಲಿ ಮೋದಿ ಸರ್ಕಾರ ಎಂಟು ವರ್ಷಗಳ ಕಾಲ ದೇಶ ಮೆಚ್ಚುವ ಆಡಳಿತ ನೀಡಿದೆ. ಕಾಂಗ್ರೆಸ್ ನಾಯಕರು ತಾವು ಶ್ರೀಮಂತರಾದರೇ ಹೋದರೆ ಹೊರತು ಬಡವರ ಕಷ್ಟಕ್ಕೆ ಮಿಡಿಯಲಿಲ್ಲ. ಕಾಂಗ್ರೆಸ್ ಎಂದಿಗೂ ಹಿಂದುಳಿದವರ ಪರವಾಗಿ ಇಲ್ಲ
ಗೋವಿಂದ ಕಾರಜೋಳ, ಸಚಿವ

ಕಾಂಗ್ರೆಸ್ ಶಕ್ತಿ‌ ಕಳೆದು ಕೊಂಡಿದೆ. ಜನ ಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಆಶ್ವಮೇಧ ಯಾಗ ಆರಂಭಿಸಿದೆ. ಭಾರತದಲ್ಲಿ ಬಿಜೆಪಿ ಕುದುರೆ ಬಿಟ್ಟಿದ್ದೇವೆ. ಕಾಂಗ್ರೆಸ್ಸಿಗರಿಗೆ ಧಮ್‌ ಇದ್ದರೆ ಕುದುರೆ ಕಟ್ಟಿಹಾಕಲಿ
ಎಂ.ಎಸ್ ಕರಿಗೌಡ್ರ, ಬಿಜೆಪಿ ಮುಖಂಡ

ಕಾಂಗ್ರೆಸ್ ಚುನಾವಣೆ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುತ್ತದೆ. ಬೂತ್ ಮಟ್ಟದಲ್ಲಿ ಪ್ರಬಲವಾಗಿಲ್ಲ. ಹಾಗಾಗಿಮ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವದ ಹುಡುಕಾಟದಲ್ಲಿದೆ
ಕಳಕಪ್ಪ ಬಂಡಿ, ಶಾಸಕ

ಕಾಂಗ್ರೆಸ್‌ ಪಕ್ಷ ಹಿಂದುಳಿದ ವರ್ಗಗಳ ಜನರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದೆ. ಆದರೆ, ಬಿಜೆಪಿ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸಿದೆ
ಸಿ.ಸಿ.ಪಾಟೀಲ, ಸಚಿವ

ಗದಗ ಯಲವಿಗಿ ರೈಲ್ವೆ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದ್ದು, ಇದಕ್ಕೆ ₹600 ಕೋಟಿ ನೀಡಲಾಗುವುದು. ಈ ರೈಲು ಶಿರಹಟ್ಟಿಯ ಮೂಲಕ ಸಾಗುವ ಬಗ್ಗೆ ಪೂರಕ ಪ್ರಯತ್ನಗಳನ್ನು ಮಾಡಲಾಗುವುದು
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಕ್ಷೇತ್ರದಲ್ಲಿನ ಹಳ್ಳಿ ಹಳ್ಳಿಗಳಲ್ಲಿ ಅಡ್ಡಾಡಿ ಸೇವೆ ಸಲ್ಲಿಸಿರುವೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ 140ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ. ಕ್ಷೇತ್ರದ ಜನತೆ ನನಗೆ ಮತ್ತೊಂದು ಅವಕಾಶ ನೀಡಬೇಕು
ರಾಮಣ್ಣ ಲಮಾಣಿ, ಶಾಸಕ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.