ಗದಗ: ‘ಸಾವಿರಾರು ಕೋಟಿ ಮೌಲ್ಯದ 54 ವಕಾರ ಸಾಲು ಆಸ್ತಿಯನ್ನು ಕಾನೂನುಬಾಹಿರವಾಗಿ ನಕಲಿ ಸಹಿ ಮಾಡಿ ಗುತ್ತಿಗೆ ಅವಧಿ ವಿಸ್ತರಿಸಿದ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು’ ಎಂದು ಜಯ ಕರ್ನಾಟಕ ಸಂಘಟನೆ ಸದಸ್ಯರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಚವ್ಹಾಣ, ‘ನಗರಸಭೆ ಮಾಲೀಕತ್ವದ ವಕಾರಸಾಲು ಆಸ್ತಿಯನ್ನು ಸಂಚು ಮಾಡಿ ಕಬಳಿಸಲು ಹೊಂಚು ಹಾಕಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ನಗರಸಭೆಗೆ ಮೋಸ ಮಾಡಿದ್ದಾರೆ. ಜೊತೆಗೆ ಸರ್ಕಾರಕ್ಕೂ ಮೋಸ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘378ನೇ ಠರಾವು ಪಾಸು ಮಾಡಬೆಕೆಂದರೇ ಬಹುಕೋಟಿ ಹಗರಣ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕಾಣದ ಕೈಗಳು ಇದರ ಹಿಂದಿರುವುದು ಕಂಡುಬರುತ್ತಿದೆ. ನಗರಸಭೆಯಲ್ಲಿ ನಕಲಿ ಠರಾವು ಪಾಸ್ ಮಾಡಿದ್ದು ಬೆಳಕಿಗೆ ಬಂದಿದೆ. ಇಂತಹದ್ದೇ ಅನೇಕ ನಕಲಿ ಸಹಿ ಮಾಡಿರುವ ಸಾಧ್ಯತೆ ಇದ್ದು, ಈವರೆಗೆ ಪಾಸು ಮಾಡಿರುವ ಎಲ್ಲ ಠರಾವುಗಳನ್ನು ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಬೇಕು. ಜತೆಗೆ ಅವುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.