
ಗದಗ: ‘ಗ್ರಾಮೀಣ ಭಾಗದ ಪತ್ರಕರ್ತರೇ ಸಮಾಜವನ್ನು ನೈಜವಾಗಿ ಅರ್ಥೈಸಿಕೊಂಡವರು. ಪತ್ರಕರ್ತರು ಜನರ ನೈಜ ಬದುಕಿನ ಚಿತ್ರಣವನ್ನು ದೇಶದ ಮುಂದೆ ತೆರೆದಿಡಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಮುಳಗುಂದ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ಜನಜಾಗೃತಿಗಾಗಿ ಪತ್ರಿಕೋದ್ಯಮ ಆರಂಭವಾಗಿತ್ತು. ಆದರೆ, ಇಂದಿನ ದಿನಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸವು ಪತ್ರಿಕೋದ್ಯಮದಲ್ಲಿ ಉಳಿದಿಲ್ಲ. ಯುವ ಪತ್ರಕರ್ತರು ನೈಜ ಸಮಾಜವನ್ನು ಪ್ರತಿನಿಧಿಸುವ ಕೆಲಸ ಮಾಡಬೇಕು’ ಎಂದರು.
‘ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ರಾಜ್ಯಮಟ್ಟದ ಗೌರವ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಿದೆ. ಜಿಲ್ಲೆಯಲ್ಲಿರುವ ಹಿರಿಯ ಪತ್ರಕರ್ತರ ಮಾಹಿತಿ ನೀಡಿದರೆ ಪಿಂಚಣಿ ಕೊಡಿಸುವ ಕೆಲಸ ಮಾಡಲಾಗುವುದು. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸವನ್ನು ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ರಾಜ್ಯ, ದೇಶದ ಪ್ರಗತಿಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಪತ್ರಕರ್ತರು ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕು’ ಎಂದರು.
‘ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಮಸ್ಯೆಗಳ ಕುರಿತು ವರದಿ ಮಾಡಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ವಸ್ತುನಿಷ್ಠ ವರದಿ ಮಾಡುವ ಕೆಲಸವನ್ನು ಮಾಡಬೇಕು. ಮೂರು ವರ್ಷಗಳ ಕಾಲ ರೂಪಿಸುವ ಯೋಜನೆ ರಾಜ್ಯಕ್ಕೆ ಮಾದರಿ ಆಗಿರಲಿ’ ಎಂದರು.
ಹಿರಿಯ ಪತ್ರಕರ್ತ ಜಗದೀಶ್ ಕುಲಕರ್ಣಿ ಮಾತನಾಡಿ, ‘ಜಿಲ್ಲೆಯೂ ಪತ್ರಿಕಾ ರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯವಾದ ಕೊಡುಗೆ ನೀಡಿದೆ. ಮುಂಬರುವ ದಿನಗಳಲ್ಲಿ ಮೊದಲ ಮಹಡಿಯ ಮೇಲೆ ಕೊಠಡಿ ನಿರ್ಮಿಸಿದರೆ ತಾಲ್ಲೂಕಿನ ಪತ್ರಕರ್ತರಿಗೆ ಅನುಕೂಲವಾಗುತ್ತದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚವಡಿ, ಹಿರಿಯ ಪತ್ರಕರ್ತರಾದ ಅನಂತ ಕಾರ್ಕಳ, ಬಸವರಾಜ ದಂಡಿನ, ಎಸ್.ವಿ. ಶಿವಪ್ಪಯ್ಯನಮಠ, ಆನಂದ ಸಾಲಿಗ್ರಾಮ, ಎಂ.ಜಿ. ಕುಲಕರ್ಣಿ, ಐ.ಕೆ. ಕಮ್ಮಾರ, ವಸಂತ ಮಹೇಂದ್ರಕರ, ಸಿ.ಬಿ.ಸುಬೇದಾರ, ವೀರಯ್ಯ ಲಕ್ಕುಂಡಿಮಠ, ಸಿ.ಕೆ.ಗಣಪ್ಪನವರ, ಅಶೋಕ ಸೊರಟೂರ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಉಪಾಧ್ಯಕ್ಷ ಅನೀಲ ತೆಂಬದಮನಿ, ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ, ಉಪಾಧ್ಯಕ್ಷ ವಿ.ಡಿ.ಕಣವಿ, ಕಾರ್ಯದರ್ಶಿ ಸಂಗಪ್ಪ ವ್ಯಾಪಾರಿ, ಕಾರ್ಯದರ್ಶಿ ಬನೇಶ ಕುಲಕರ್ಣಿ, ಕಾರ್ಯದರ್ಶಿ ಚಂದ್ರಶೇಖರ ಕುಸ್ಲಾಪುರ, ಖಜಾಂಚಿ ರಾಮಣ್ಣ ವಗ್ಗಿ, ಜಿಲ್ಲಾ ಕಾರ್ಯಾಕಾರಿಣಿ ಸದಸ್ಯರಾದ ವೆಂಕಟೇಶ ಇಮರಾಪುರ, ರುದ್ರಗೌಡ ಪಾಟೀಲ, ಸಂತೋಷ ಮುರಡಿ, ಆದರ್ಶ ಕುಲಕರ್ಣಿ, ಮಲ್ಲು ಕಳಸಾಪುರ, ಶಿವಕುಮಾರ ಶಶಿಮಠ, ಮಹಾಲಿಂಗಯ್ಯ ಹಿರೇಮಠ, ಮಂಜುನಾಥ ಪತ್ತಾರ, ಗಿರೀಶ ಕಮ್ಮಾರ, ಮೌನೇಶ ಬಡಿಗೇರ, ಅಜಿತ್‌ಕುಮಾರ ಹೊಂಬಾಳಿ, ಸಂತೋಷ ಕೊಣ್ಣೂರ, ಆನಂದಯ್ಯ ವಿರಕ್ತಮಠ, ಯಲ್ಲಪ್ಪ ತಳವಾರ ಹಾಗೂ ವಿವಿಧ ತಾಲ್ಲೂಕಿನ ಪತ್ರಕರ್ತರು ಇದ್ದರು.
ಖಾಜಾಹುಸೇನ್ ಮುಧೋಳ ಪ್ರಾರ್ಥಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ವಂದಿಸಿದರು.
----
ಪತ್ರಕರ್ತರು ತಮ್ಮ ಜವಾಬ್ದಾರಿಗಳ ಜತೆಗೆ ಕುಟುಂಬದ ಕಾಳಜಿ ಮಾಡಬೇಕು. ಅದರಲ್ಲೂ ಮಕ್ಕಳ ಗುಣಮಟ್ಟದ ಶಿಕ್ಷಣ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪತ್ರಕರ್ತರ ಮಕ್ಕಳು ಸಹ ಉನ್ನತ ಹುದ್ದೆಗೆ ಹೋಗುವಂತಾಗಬೇಕು
-ಎಸ್.ವಿ.ಸಂಕನೂರ ವಿಧಾನ ಪರಿಷತ್ ಸದಸ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಅದನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಜಿಲ್ಲಾ ಸಂಘದವರು ಹಾಕಿರುವ ಯೋಜನೆಗಳ ಜಾರಿಗೆ ಬೇಕಿರುವ ಸಹಕಾರ ನೀಡಲಾಗುವುದು
-ಸಿ.ಸಿ.ಪಾಟೀಲ ಶಾಸಕ
ಭಾಷಾ ಸಾಮರ್ಥ್ಯ ಇದ್ದವರು ಉತ್ತಮ ಪತ್ರಕರ್ತರಾಗುತ್ತಾರೆ. ಜಿಲ್ಲೆಯ ಪತ್ರಕರ್ತರ ಸಂಘವು ರಚನಾತ್ಮಕ ಕೆಲಸ ಮಾಡುವ ಮೂಲಕ ರಾಜ್ಯ ಸಂಘಕ್ಕೆ ಮಾದರಿಯಾಗಬೇಕು
-ಎಚ್.ಕೆ.ಪಾಟೀಲ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.