ಗದಗ: ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಸೂಡಿ ಗ್ರಾಮದ ಐತಿಹಾಸಿಕ ಜೋಡು ಕಳಸ (ನಾಗೇಶ್ವರ) ದೇವಾಲಯದ ಸ್ತಬ್ಧಚಿತ್ರವು ಬೆಳಗಾವಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದೆ.
ಈ ಸ್ತಬ್ಧಚಿತ್ರವನ್ನು ಸ್ಥಳೀಯ ಕಲಾವಿದರಾದ ರವಿ ಶಿಶ್ವನಹಳ್ಳಿ, ಕಿರಣ ಓದುಗೌಡರ, ಷಹಜಾನ್ ಮುದಕವಿ, ಫಕ್ಕಿರೇಶ ಕುಳಗೇರಿ, ಜಿ.ಕೆ. ಬಡಿಗೇರ, ರವಿ ಬಾದಾಮಿ, ಅರುಣ, ಕೊಟ್ರೇಶ ಮೊದಲಾದವರ ಕೈಚಳಕದಲ್ಲಿ ನಿರ್ಮಿಸಲಾಗಿತ್ತು. ಕಲಾವಿದರ ತಂಡದ ಸೂಕ್ಷ್ಮ ಕೆತ್ತನೆಗಳು ಮತ್ತು ವಿವರಗಳು ದೇವಾಲಯದ ಮೂಲ ಸ್ವರೂಪಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿತ್ತು.
‘ಮೆರವಣಿಗೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಈ ಸ್ತಬ್ಧಚಿತ್ರ, ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿದಿದೆ. ಈ ಪ್ರದರ್ಶನವು ಗದಗ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕಲೆಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
ಜೋಡು ಕಳಸದ ಸ್ತಬ್ಧಚಿತ್ರವು ಜಿಲ್ಲೆಯ ಪುರಾತನ ಕಲೆ ಮತ್ತು ವಾಸ್ತುಶಿಲ್ಪದ ಶ್ರೀಮಂತಿಕೆ ಅನಾವರಣಗೊಳಿಸಿದೆ. ಜಿಲ್ಲೆಯ ಪ್ರಾಚೀನ ಪರಂಪರೆಯನ್ನು ಬಿಂಬಿಸಿದ ಈ ಸ್ತಬ್ಧಚಿತ್ರವು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ನಿರೀಕ್ಷೆಯಂತೆ ಈ ಬಾರಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.