ADVERTISEMENT

ನ್ಯಾಯಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಉತ್ತರ ಕರ್ನಾಟಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:07 IST
Last Updated 19 ಆಗಸ್ಟ್ 2025, 4:07 IST
ರವಿಕಾಂತ ಅಂಗಡಿ
ರವಿಕಾಂತ ಅಂಗಡಿ   

ಗದಗ: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಶಿರಹಟ್ಟಿಯ ಫಕೀರೇಶ್ವರ ಮಠದಿಂದ ಗದಗ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿ, ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು’ ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದರು.

‘ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡು 9 ವರ್ಷಗಳು ಕಳೆದರೂ ರೈತರಿಗೆ ಪರಿಹಾರ ನೀಡಿಲ್ಲ. ಕೂಡಲೇ ಅವರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ, ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಭೂಸ್ವಾಧೀನ ಮಾಡಿಕೊಳ್ಳುವಾಗ ದೊಡ್ಡವರ ಜಮೀನು ಪಡೆಯದೇ, ಸಣ್ಣ ಪುಟ್ಟ ರೈತರಿಗೆ ಆಸೆ ತೋರಿಸಿ ಜಮೀನು ಪಡೆದುಕೊಳ್ಳಲಾಗಿದೆ. ಅಲ್ಲದೇ ಖಾಸಗಿ ಭೂಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರೊಂದಿಗೆ ಶಾಮೀಲಾಗಿ ₹11 ಕೋಟಿ ಪರಿಹಾರವನ್ನೂ ಕೊಡಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ರೈತರು ನೂರಾರು ವರ್ಷಗಳಿಂದ ತಮ್ಮ ಉಪಜೀವನಕ್ಕಾಗಿ ಜಮೀನು ಸಾಗುವಳಿ ಮಾಡುತ್ತ ಬಂದಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಅವಲಂಬಿತರಿಗೆ ಹಕ್ಕುಪತ್ರ ನೀಡದೇ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಗದಗ ತಾಲ್ಲೂಕಿಗೆ ಒಂದು ನ್ಯಾಯ, ಇತರೆ ತಾಲ್ಲೂಕಿನ ಜನರಿಗೆ ಒಂದು ನ್ಯಾಯ ಎನ್ನುವ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಜಿಲ್ಲಾ ಉಸ್ತುವಾರಿ ಎಚ್‌.ಕೆ.ಪಾಟೀಲ ಅವರು ಹುಲಕೋಟಿ ಅಥವಾ ಗದಗ ತಾಲ್ಲೂಕಿಗೆ ಮಾತ್ರ ಸೀಮಿತವಲ್ಲ. ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇದ್ದಾರೆ ಎನ್ನುವ ವಾಸ್ತವ ಅಂಶವನ್ನು ಅರ್ಥ ಮಾಡಿಕೊಂಡು ಅವರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಕಿಡಿಕಾರಿದರು.

‘ಗದಗ ತಾಲ್ಲೂಕಿನ ನರಸಾಪುರದಲ್ಲಿ ಕೆಐಎಡಿಬಿ ಎರಡನೇ ಹಂತದ 216 ಎಕರೆ ಭೂಸ್ವಾಧೀನ ಕೈಬಿಟ್ಟು ರೈತರಿಗೆ ಜಮೀನು ಮರಳಿಸಬೇಕು. ಲಕ್ಷ್ಮೇಶ್ವರ ತಾಲ್ಲೂಕಿನ ಯಲ್ಲಾಪುರ ಗ್ರಾಮದ ಹುಲ್ಲುಗಾವಲು ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡಬೇಕು. ಶಾಸಕರ ನೇತೃತ್ವದ ಬಗರ್‌ಹುಕುಂ ಸಮಿತಿ ಇದ್ದೂ ಇಲ್ಲದಂತಾಗಿದೆ. ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸಚಿವ ಎಚ್‌.ಕೆ.ಪಾಟೀಲ ಅವರು ತಮ್ಮ ತಂದೆಯ ಹೆಸರನ್ನು ಇಡಲು ಸರ್ಕಾರದ ಹಂತದಲ್ಲಿ ಏನೆಲ್ಲಾ ಸಾಹಸ ಮಾಡಿದರು. ಅದೇರೀತಿ ಹಲವು ದಶಕಗಳಿಂದ ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಡಿ ಎಂದು ಜಿಲ್ಲೆಯ ರೈತರು ಹೋರಾಟ, ಪ್ರತಿಭಟನೆ ಮಾಡಿದರೂ  ಇದುವರೆಗೂ ಕ್ರಮ ಕೈಗೊಂಡಿಲ್ಲ. ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು. 

ಮಂಜುನಾಥ ಶಲವಡಿ, ಕೃಷ್ಣ ದೇಶಪಾಂಡೆ, ನಿಂಗಪ್ಪ ಪೂಜಾರಿ, ಫಿರೋಜ್‌ ನದಾಫ್‌, ನಬೀಸಾಬ್‌, ಮಹದೇವಪ್ಪ ಬೇವಿನಮರದ, ಪೀರ್‌ಸಾಬ್‌ ನದಾಫ್‌, ಮುಲ್ಲಾ ಸಾಬ್‌, ಮಲ್ಲಿಕ್‌ಸಾಬ್‌ ಇದ್ದರು.   

ಪವನ ವಿದ್ಯುತ್‌ ಕಂಪನಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ಇದನ್ನು ಪ್ರಶ್ನಿಸಲು ರೈತರಿಗೆ ಧ್ವನಿ ಇಲ್ಲದಂತಾಗಿದೆ. ಆಡಳಿತ ವ್ಯವಸ್ಥೆಯೂ ಇದರಿಂದ ದೂರ ಉಳಿದಿದೆ. ಪವನ ವಿದ್ಯುತ್‌ ಕಂಪನಿಗಳಿಂದ ಮೋಸಕ್ಕೆ ಒಳಗಾಗಿರುವ ರೈತರಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಬೇಕು.
ರವಿಕಾಂತ ಅಂಗಡಿ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.