
ಗಜೇಂದ್ರಗಡ: ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ನಿತ್ಯ ಕನ್ನಡದ ಜ್ಯೋತಿ ಬೆಳಗುತ್ತದೆ. ಎಪಿಎಂಸಿ ವರ್ತಕರು, ಖರೀದಿದಾರರು ತಮ್ಮ ನಿತ್ಯದ ವ್ಯವಹಾರಗಳಲ್ಲಿ ಕನ್ನಡದ ಅಂಕಿಗಳನ್ನೇ ಬಳಸುವುದು ವಿಶೇಷ.
ನಿತ್ಯದ ಬದುಕಿನಲ್ಲಿ ಕನ್ನಡದ ಅಂಕಿಗಳನ್ನು ಕಾಣುವುದೇ ಅಪರೂಪ ಆಗಿರುವ ಕಾಲಘಟ್ಟದಲ್ಲಿ, ಇಲ್ಲಿ ನಿತ್ಯವೂ ಅದೇ ಅಂಕಿಗಳಲ್ಲಿ ಲೆಕ್ಕಪತ್ರ ಬರೆಯಲಾಗುತ್ತದೆ.
ಖರೀದಿದಾರರು ತಮ್ಮ ತಮ್ಮ ನಿತ್ಯದ ಖಾತೆ ಪುಸ್ತಕದಲ್ಲಿ, ಟೆಂಡರ್‌ನಲ್ಲಿ ನಮೂದಿಸಿದ ದರದ ವಿವರ, ರೈತರಿಗೆ ಪಾವತಿಸಬೇಕಾದ ಮೊತ್ತವನ್ನು ಕನ್ನಡದ ಅಂಕಿಯಲ್ಲಿಯೇ ಬರೆಯುತ್ತಾರೆ.
ಅಲ್ಲದೆ ಇಲ್ಲಿನ ಕೆಲವು ಕಿರಾಣಿ ಅಂಗಡಿಗಳಲ್ಲೂ ಕನ್ನಡ ಅಂಕಿಗಳನ್ನೇ ಬಳಸುತ್ತಾರೆ.
‘ಎಪಿಎಂಸಿಯಲ್ಲಿ ಕಳೆದ 14 ವರ್ಷಗಳಿಂದ ಇಲ್ಲಿ ವರ್ತಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಂದಿನಿಂದ ಇಂದಿನ ವರೆಗೂ ವ್ಯವಹಾರದಲ್ಲಿ ಹಾಗೂ ಲೆಕ್ಕಪತ್ರಗಳನ್ನು ಕನ್ನಡ ಅಂಕಿ-ಸಂಖ್ಯೆಯಲ್ಲೇ ಬರೆಯುವುದು ರೂಢಿಯಲ್ಲಿದೆ. ಎಪಿಎಂಸಿ ಹೊರತುಪಡಿಸಿ ಬೇರೆ ಕಡೆ ಗಳಲ್ಲಿಯೂ ಸಂದರ್ಭಕ್ಕೆ ಅನುಗುಣವಾಗಿ ಕನ್ನಡ ಹಾಗೂ ಇಂಗ್ಲಿಷ್ ಅಂಕಿ-ಸಂಖ್ಯೆಗಳನ್ನು ಬಳಸುತ್ತೇವೆ. ಆದರೆ ಎಪಿಎಂಸಿ ಯಲ್ಲಿ ಮಾತೃ ಭಾಷೆಯಲ್ಲೇ ನಿತ್ಯ ವ್ಯವಹಾರ ಮಾಡುತ್ತೇವೆ ಎನ್ನುವ ಹೆಮ್ಮೆಯಿದೆ’ ಎನ್ನುತ್ತಾರೆ ಖರೀದಿದಾರ ರಾದ ಮಹಾಂತೇಶ ಪೂಜಾರ.
ವರ್ಷವಿಡಿ ಅನ್ಯ ಭಾಷೆ, ಇಂಗ್ಲಿಷ್ ಅಂಕಿ ಬಳಸುವ ಬಹುತೇಕ ಜನರಲ್ಲಿ ನವೆಂಬರ್ ತಿಂಗಳು ಬಂತೆಂದರೆ ಕನ್ನಡಾಭಿಮಾನ ಮೂಡುತ್ತದೆ.
ಆದರೆ ಪಟ್ಟಣದ ಎಪಿಎಂಸಿ ಹಾಗೂ ಕಿರಾಣಿ ಅಂಗಡಿಗಳ ವರ್ತಕರು ನವೆಂಬರ್ ಕನ್ನಡಿಗರಾಗಿರದೇ ತಮ್ಮ ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಜೀವಂತವಾಗಿಡುವ ಮೂಲಕ ನಿತ್ಯ ಕನ್ನಡ ಜೋತಿ ಬೆಳಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.