ADVERTISEMENT

ನರಗುಂದ: ಕನ್ನಡದ ತೇರನೆಳೆಯುವ ದೊರೆಸ್ವಾಮಿ ಮಠ

ಬಸವರಾಜ ಹಲಕುರ್ಕಿ
Published 1 ನವೆಂಬರ್ 2025, 4:37 IST
Last Updated 1 ನವೆಂಬರ್ 2025, 4:37 IST
ಕನ್ನಡ ರಥಜಮದೊಂದಿಗೆ ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ
ಕನ್ನಡ ರಥಜಮದೊಂದಿಗೆ ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ   

ನರಗುಂದ: ಮಠಗಳೆಂದರೆ ಪುರಾಣ, ಪ್ರವಚನ, ಪೂಜೆ, ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮ ಜೊತೆಗೆ ದಾಸೋಹ ನಡೆಸುವುದು ಸಹಜ. ಆದರೆ ಕನ್ನಡ, ಕನ್ನಡಿಗ, ಕರ್ನಾಟಕ ಎಂದು ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಕನ್ನಡ ಉಳಿಸುವ ಕಾಯಕವನ್ನೇ ಮಾಡುತ್ತಾ ಬಂದಿರುವುದು ರಾಜ್ಯದ ಗಮನ ಸೆಳೆದಿದೆ.

ಭಾಷೆ, ನೆಲ-ಜಲಕ್ಕಾಗಿ ಸದ್ದಿಲ್ಲದೇ ಕನ್ನಡ ಉಳಿಸಿ-ಬೆಳೆಸುವಲ್ಲಿ ನಿರಂತರ ಕೆಲಸ ಮಾಡುತ್ತಿರುವುದು ಶ್ರೀಗಳ ಕಾರ್ಯ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಇಂಥಹ ಅಪರೂಪದ ಶಾಂತಲಿಂಗ ಶ್ರೀ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ 2023ರಲ್ಲಿ ಕನ್ನಡ ರಥ ನಿರ್ಮಿಸಿ ಅದನ್ನು ಪ್ರತಿ ವರ್ಷ ನ.1 ರಂದು ಗ್ರಾಮದಲ್ಲಿ ಎಳೆಯುವುದು ಕನ್ನಡ ನಾಡಿನ ವಿಶೇಷವೆಂದೇ ಹೇಳಬಹುದು.

ನಾಡಿನಾದ್ಯಂತ ನ.1ರಂದು ರಾಜ್ಯೋತ್ಸವ ಆಚರಿಸುವುದು ಸಾಮಾನ್ಯ. ಆದರೆ ಈ ಮಠದಲ್ಲಿ ಏಕೀಕರಣ ಹೋರಾಟಗಾರರ ಪರಿಚಯಿಸುವ ವರ್ಷಪೂರ್ತಿ ಉಪನ್ಯಾಸ ಮಾಲಿಕೆ ನಡೆಸಲಾಗುತ್ತದೆ. ಸಾಹಿತಿಗಳನ್ನ, ಸಾಧಕರ ಸನ್ಮಾನ ಕನ್ನಡ ರಥ ಎಳೆಯುವುದು ನಾಡಿನ ಹೆಮ್ಮೆ.

ADVERTISEMENT

ಬಡ ಮಕ್ಕಳಿಗೆ ಭರವಸೆಯ ಬೆಳಕು: ಶ್ರೀಗಳು ಉಚಿತ ಪ್ರಸಾದ ನಿಲಯ ಸ್ಥಾಪಿಸಿದ್ದಾರೆ. ಸಾವಿರಾರು ಬಡವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ, ಸಂಸ್ಕೃತಿ-ಸಂಸ್ಕಾರ ಕಲಿಸುತ್ತಾ ಬಡಮಕ್ಕಳ ಪಾಲಿಗೆ ಭರವಸೆಯ ಬೆಳಕಾಗಿದ್ದಾರೆ. ಇಲ್ಲಿ ಅಧ್ಯಯನಗೈದ ವಿದ್ಯಾರ್ಥಿಗಳು ಕೃಷಿ, ಸರಕಾರಿ ಸೇವೆ ಮಾಡಿದರೆ. ಕೆಲವರು ಕಾವಿದೀಕ್ಷೆಯನ್ನು ಪಡೆದು ಮಠಾಧೀಶರಾಗಿದ್ದಾರೆ. ಸದ್ಯ ನೂರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಶ್ರೀಮಠದೊಂದಿಗೆ ಗಣ್ಯರ ನಂಟು: ನಾಡಿನ ಶ್ರೇಷ್ಠ ಪತ್ರಕರ್ತರಾಗಿದ್ದ ಪಾಟೀಲ ಪುಟ್ಟಪ್ಪ, ಭಾವೈಕ್ಯ ಕವಿ ಇಬ್ರಾಹಿಂ ಸುತಾರ, ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟಿ, ಹಿರಿಯ ಸಾಹಿತಿ ಜ್ಞಾನದೇವ ದೊಡ್ಡಮೇಟಿ ಹಾಗೂ ಕಾರ್ಮಿಕ ನೇತಾರ ಡಾ.ಕೆ.ಎಸ್.ಶರ್ಮಾ ಸೇರಿದಂತೆ ಅನೇಕ ಗಣ್ಯರು ಶ್ರೀಮಠದ ನಿಕಟ ಸಂಪರ್ಕ ಹೊಂದಿದ್ದಾರೆ.

ಇಂಥಹ ಶ್ರೀಗಳು ಈ ಭಾಗದಲ್ಲಿ ಕನ್ನಡ ಸ್ವಾಮೀಜಿ ಎಂದೇ ಹೆಸರಾಗಿದ್ದಾರೆ. ಇಂಥಹ ಕನ್ನಡ ಪ್ರೇಮ ಹೊಂದಿರುವ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ರಥೋತ್ಸವ ಹಾಗೂ ಕಾರ್ಯಕ್ರಮ ಶನಿವಾರ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ.

ಶಾಸಕ ಸಿ.ಸಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡಪರ ಚಿಂತಕರಾದ ಹುಬ್ಬಳ್ಳಿಯ ರವೀಂದ್ರ ದೊಡ್ಡಮೇಟಿ ಕನ್ನಡ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡ್ರ, ಮಾಜಿ ಸಚಿವ ಬಿ.ಆರ್.ಯಾವಗಲ್ ಸೇರಿದಂತೆ ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ನೂರಾರು ಕನ್ನಡಿಗರು ಆಗಮಿಸಲಿದ್ದಾರೆ. ಧಾರವಾಡ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾದ ಡಾ.ವೈ.ಎಂ.ಯಾಕೊಳ್ಳಿ ಅವರು ತ್ರಿಪದಿ ಸಾಹಿತ್ಯಕ್ಕೆ ಸರ್ವಜ್ಞನ ಕೊಡುಗೆ ವಿಷಯವಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕನ್ನಡ ರಥದ ವಿಶೇಷ

ತಾಯಿ ಭುವನೇಶ್ವರಿಯ ಪಂಚಲೋಹದ ಮೂರ್ತಿಯನ್ನಿರಿಸಿ ಎಳೆಯುವ ಕನ್ನಡಾಂಬೆಯ ರಥ ಆಕರ್ಷಕವಾಗಿ ನಿರ್ಮಾಣಗೊಂಡಿದೆ. ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರ ಭಾವಚಿತ್ರಗಳು ವಡ್ಡರಾಧನೆ ಕವಿರಾಜ ಮಾರ್ಗ ಹಲ್ಮಿಡಿ ಶಾಸನ ಪಂಪನಿಂದ ಚಂಪಾವರೆಗೆ ಎಲ್ಲ ಕವಿಗಳ ಭಾವಚಿತ್ರಗಳಿವೆ. ಕನ್ನಡ ಸಾಹಿತ್ಯ ಪರಿಷತ್ತು ವಿಧಾನಸೌಧ ನರಗುಂದ ಕೆಂಪಗಸಿ ನವಿಲು ತೀರ್ಥ ಜಲಾಶಯದ ಚಿತ್ರಗಳು ರಾರಾಜಿಸುತ್ತಿವೆ. ಸುಮಾರು ಒಂದೂವರೆ ದಶಕಗಳ ಕಾಲ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಿತ್ಯ ಜಪ-ತಪ ಅನುಷ್ಠಾನ ಮೂಲಕ ಭಕ್ತರ ಏಳ್ಗೆಯನ್ನೇ ಬಯಸುತ್ತಿರುವ ಪೂಜ್ಯ ಶಾಂತಲಿಂಗ ಶ್ರೀಗಳು ಶಿವಯೋಗಿ ಸಾಧಕರಲ್ಲಿ ಒಬ್ಬರು. ಕನ್ನಡ ಸಾಹಿತ್ಯ ದ ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಶ್ರೀಮಠದಲ್ಲಿ ಸಿಂದಗಿ ಶ್ರೀಶಾಂತವಿರೇಶ್ವರ ಗ್ರಂಥಾಲಯ ಸ್ಥಾಪಿಸಿ ಜನರಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವ ಶ್ರೀಗಳ ಪುಸ್ತಕ ಸೇವೆ ಅನನ್ಯವಾದದ್ದು.

ನರಗುಂದ ತಾಲ್ಲೂಕಿನ. ಭೈರನಹಟ್ಟಿ ದೊರೆಸ್ವಾಮಿ ವಿರಕ್ತತಮಠದ ಪಂಚಲೋಹದ ಭುವನೇಶ್ವರಿ ಮೂರ್ತಿ
ನರಗುಂದ ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.