ADVERTISEMENT

ಗರಿಗೆದರಿದ ಪ್ರವಾಸೋದ್ಯಮ ಅಭಿವೃದ್ಧಿ ಕನಸು

ಕಪ್ಪತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯ ಅಂತಿಮ ಅಧಿಸೂಚನೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 27 ಜೂನ್ 2025, 5:11 IST
Last Updated 27 ಜೂನ್ 2025, 5:11 IST
ಕಪ್ಪತಗುಡ್ಡದಲ್ಲಿರುವ ಸೆಲ್ಫಿ ಪಾಯಿಂಟ್‌
ಕಪ್ಪತಗುಡ್ಡದಲ್ಲಿರುವ ಸೆಲ್ಫಿ ಪಾಯಿಂಟ್‌   

ಗದಗ: ಗದಗ ಸೇರಿದಂತೆ ಸುತ್ತಮುತ್ತಲಿನ ಐದಾರು ಜಿಲ್ಲೆಗಳಿಗೆ ಜೀವದಾಯಿ ಆಗಿರುವ ಕಪ್ಪತಗುಡ್ಡ ವನ್ಯಜೀವಿಧಾಮದ 322 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಈ ಭಾಗದ ಜನರಲ್ಲಿ ಸಂತಸ ತರಿಸಿದೆ.

ಈ ಹಿಂದೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದಾದ ಬಳಿಕ ಅಂತಿಮ ಅಧಿಸೂಚನೆ ಜೂನ್‌ 4ರಂದು ಹೊರಬಿದ್ದಿದೆ. ಅದರಂತೆ, ಕಪ್ಪತಗುಡ್ಡ ವನ್ಯಜೀವಿಧಾಮದ ಗಡಿಯಿಂದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಕಂದಾಯ ಭೂಮಿ ಇರುವ ಕಡೆಗಳಲ್ಲಿ ಕನಿಷ್ಠ 1 ಕಿ.ಮೀ. ಮತ್ತು ಕಾಯ್ದಿಟ್ಟ ಅರಣ್ಯ ಪ್ರದೇಶ ಇರುವ ಕಡೆಗಳಲ್ಲಿ ಗರಿಷ್ಠ 4.30 ಕಿ.ಮೀ.ವರೆಗೆ ಗುರುತಿಸಲಾಗಿದೆ.

‘ಪರಿಸರ ಸೂಕ್ಷ್ಮ ವಲಯ ಘೋಷಣೆಯಾದ ಬೆನ್ನಲ್ಲೇ ಕಪ್ಪತಗುಡ್ಡ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಒತ್ತು ಸಿಗಲಿದೆ’ ಎಂಬ ವಿಶ್ವಾಸ ‍‍ಪರಿಸರಪ್ರಿಯರಲ್ಲಿ ಮೂಡಿದೆ.

ADVERTISEMENT

‘ಕಪ್ಪತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಇಲ್ಲಿನ ಹವೆ, ಹಸಿರು ಮತ್ತಷ್ಟು ಸಮೃದ್ಧಗೊಳ್ಳಲಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ನಿರ್ದೇಶನಗಳಿವೆ. ಅದನ್ನು ಗಮನದಲ್ಲಿರಿಸಿಕೊಂಡು ಕಪ್ಪತಗುಡ್ಡ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದ್ದಾರೆ.

‘ಕಳೆದ ಭಾನುವಾರ 3 ಸಾವಿರ ಮಂದಿ ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯ ಆಸ್ವಾದಿಸಿದ್ದಾರೆ. ಆ ದಿನ ಪ್ರವೇಶ ಮತ್ತು ಪಾರ್ಕಿಂಗ್‌ ಶುಲ್ಕ ಸೇರಿ ಒಟ್ಟು ₹1.43 ಲಕ್ಷ ಸಂಗ್ರಹವಾಗಿದೆ. ಹಾಗಾಗಿ, ಕಪ್ಪತಗುಡ್ಡದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಎಲ್ಲಿ ಜಿಪ್‌ಲೈನ್‌ ಅಳವಡಿಸಬೇಕು, ರೆಸಾರ್ಟ್‌ಗಳನ್ನು ಎಲ್ಲಿ ಆರಂಭಿಸಬೇಕು, ಇಲ್ಲಿನ ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಲು ಏನೇನು ಚಟುವಟಿಕೆಗಳನ್ನು ನಡೆಸಬೇಕು ಎಂಬುದನ್ನು ಸಮಗ್ರವಾಗಿ ಯೋಜಿಸಿ ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದರು.

‘ಗದಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಉತ್ತಮ ಹವಾಮಾನ ಇರಲು ಕಪ್ಪತಗುಡ್ಡ ಕಾರಣವಾಗಿದೆ. ಕಪ್ಪತಗುಡ್ಡ ಉಳಿವಿಗಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ತೋಂಟದ ಸಿದ್ಧಲಿಂಗ ಶ್ರೀಗಳು ಈ ಹೋರಾಟದಲ್ಲಿ ವಿಶೇಷ ಮುಖಂಡತ್ವ ವಹಿಸಿದ್ದರು. ಕಪ್ಪತಗುಡ್ಡ ಉಳಿವಿಗಾಗಿ ಶ್ರೀಗಳು, ನಾವು ಮತ್ತು ಪರಿಸರ ಹೋರಾಟಗಾರರು ಸಾಕಷ್ಟು ಕಾರ್ಯತಂತ್ರ ರೂಪಿಸಿದ್ದೆವು. ಅದೆಲ್ಲದರ ಫಲವಾಗಿ ಕಪ್ಪತಗುಡ್ಡ ಇಂದು ಗಣಿಗಾರಿಕೆ ಆತಂಕದಿಂದ ಮುಕ್ತಗೊಂಡಿದೆ’ ಎಂದು ಹೇಳಿದರು.

- ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ. ಕಪ್ಪತಗುಡ್ಡವನ್ನು ಪ್ರವಾಸಿತಾಣ ಮಾಡಲು ಸಾಕಷ್ಟು ಅವಕಾಶಗಳಿವೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು
ಎಚ್‌.ಕೆ.ಪಾಟೀಲ ಪ್ರವಾಸೋದ್ಯಮ ಸಚಿವ

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಬಂಧಿತ ಚಟುವಟಿಕೆಗಳು:

* ಈಗಿರುವ ಹಾಗೂ ಹೊಸ ವಾಣಿಜ್ಯ ಗಣಿಗಾರಿಕೆ ಕಲ್ಲು ಗಣಿಗಾರಿಕೆ ಕಲ್ಲುಪುಡಿ ಮಾಡುವ ಘಟಕಗಳಿಗೆ ಸಂಪೂರ್ಣ ನಿಷೇಧ

* ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ

* ಪರಿಸರ ಸೂಕ್ಷ್ಮ ಪ್ರದೇಶದ 1 ಕಿ.ಮೀ. ವ್ಯಾಪ್ತಿಯೊಳಗೆ ಹೋಟೆಲ್‌ ರೆಸಾರ್ಟ್‌ ತೆರೆಯುವಂತಿಲ್ಲ

* ಇಟ್ಟಿಗೆ ಗೂಡುಗಳ ಸ್ಥಾಪನೆ ಮರದ ಮಿಲ್‌ಗಳಿಗೆ ನಿರ್ಬಂಧ

* ಮರ ಆಧಾರಿತ ಕೈಗಾರಿಕೆಗಳ ಆರಂಭಿಸುವಂತಿಲ್ಲ

ಅನುಮತಿಸಲಾದ ಚಟುವಟಿಕೆಗಳು:

* ಮಳೆನೀರು ಸಂಗ್ರಹ ಸಾವಯವ ಕೃಷಿಗೆ ಉತ್ತೇಜನ

* ಎಲ್ಲ ಚಟುವಟಿಕೆಗಳಿಗೆ ಹಸಿರು ತಂತ್ರಜ್ಞಾನದ ಅಳವಡಿಕೆ

* ಪರಿಸರ ಸ್ನೇಹಿ ಸಾರಿಗೆಯ ಬಳಕೆ ಮತ್ತು ಪ್ರಚಾರ

* ಕ್ಷೀಣಿಸಿದ ಭೂಮಿ ಅರಣ್ಯ ಆವಾಸಸ್ಥಾನದ ಪುನರ್‌ಸ್ಥಾಪನೆಗೆ ಸಕ್ರಿಯ ಪ್ರಚಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.