ADVERTISEMENT

ಕಪ್ಪತಗುಡ್ಡ: ಬೀದಿಗಿಳಿದ ವಿದ್ಯಾರ್ಥಿಗಳು

ವನ್ಯಜೀವಿಧಾಮ ಮಾನ್ಯತೆ ವಾಪಸ್‌ ಪಡೆಯಬಾರದು ಎಂದು ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 10:46 IST
Last Updated 25 ಸೆಪ್ಟೆಂಬರ್ 2019, 10:46 IST
ಕಪ್ಪತಗುಡ್ಡಕ್ಕೆ ನೀಡಿರುವ ವನ್ಯಜೀವಿ ಧಾಮ ಸ್ಥಾನ ಮಾನವನ್ನು ಸರ್ಕಾರ ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿ ಮುಂಡರಗಿ ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ಕಪ್ಪತಗುಡ್ಡಕ್ಕೆ ನೀಡಿರುವ ವನ್ಯಜೀವಿ ಧಾಮ ಸ್ಥಾನ ಮಾನವನ್ನು ಸರ್ಕಾರ ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿ ಮುಂಡರಗಿ ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ‘ರಾಜ್ಯ ಸರ್ಕಾರವು ಜಿಲ್ಲೆಯ ಜೀವವೈವಿಧ್ಯ ತಾಣ ಕಪ್ಪತಗುಡ್ಡಕ್ಕೆ ನೀಡಿರುವ ‘ವನ್ಯಜೀವಿ ಧಾಮ’ ಮಾನ್ಯತೆಯನ್ನು ಯಾವುದೇ ಕಾರಣಕ್ಕೂ ವಾಪಸ್‌ ಪಡೆಯಬಾರದು’ ಎಂದು ಆಗ್ರಹಿಸಿ ಮುಂಡರಗಿ ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆಯ ನೇತೃತ್ವದಲ್ಲಿ ಪಟ್ಟಣದ ವಿವಿಧ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಅನ್ನದಾನೀಶ್ವರ ಕಾಲೇಜು, ತೋಂಟದಾರ್ಯ ಸಿ.ಬಿ.ಎಸ್.ಸಿ ಶಾಲೆ, ಕ.ರಾ.ಬೆಲ್ಲದ ಪದವಿ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯ ಅನ್ನದಾನೀಶ್ವರ ಕಾಲೇಜು ಆವರಣದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕೂ ಕಪ್ಪತಗುಡ್ಡದ ಪರ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೊಪ್ಪಳ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರ ಕಚೇರಿಗೆ ಬಂದು ಮನವಿ ಸಲ್ಲಿಸಿದರು.

ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆಯ ಅಧ್ಯಕ್ಷ ವೈ.ಎನ್.ಗೌಡರ ಮಾತನಾಡಿ, 'ಕಪ್ಪತಗುಡ್ಡದ ಉಳಿವಿಗಾಗಿ ದಶಕಗಳ ಕಾಲ ಈ ಭಾಗದಲ್ಲಿ ಹೋರಾಟ ನಡೆದಿದ್ದರಿಂದ ಸರ್ಕಾರ ವನ್ಯಜೀವಿ ಧಾಮ ಸ್ಥಾನ ನೀಡಿದೆ. ಈಗ ಸರ್ಕಾರ ಕೆಲವು ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಸ್ಥಾನಮಾನ ವಾಪಾಸ ಪಡೆಯಲು ಹುನ್ನಾರ ನಡೆಸುತ್ತಿರುವುದು ಅಕ್ಷಮ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

'ವನ್ಯಜೀವಿಧಾಮ ಮಾನ್ಯತೆ ರದ್ದುಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಸೆ.26ರಂದು ಈ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವನ್ಯಜೀವಿ ಮಂಡಳಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಗಣಿ ಧಣಿಗಳು ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರ್ಕಾರ ಸ್ಥಾನಮಾನ ರದ್ದುಗೊಳಿಸಿದರೆ ಜಿಲ್ಲೆಯು ಹೊತ್ತಿ ಉರಿಯಲಿದೆ' ಎಂದು ಅವರು ಎಚ್ಚರಿಸಿದರು.

'ಅಪಾರ ಖನಿಜ ಸಂಪತ್ತು ಹಾಗೂ ಔಷಧ ತಾಣವಾಗಿರುವ ಕಪ್ಪತಗುಡ್ಡದ ಮೇಲೆ ಗಣಿ ಧಣಿಗಳ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಅದನ್ನು ಕಬಳಿಸಬೇಕು ಎಂದು ಹುನ್ನಾರ ನಡೆಸಿದ್ದಾರೆ. ಸರ್ಕಾರ, ಸ್ಥಾನ ಮಾನ ರದ್ದುಗೊಳಿಸಿದರೆ ಜಿಲ್ಲೆಯಾಧ್ಯಂತ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ' ಎಂದರು.

ಗೊಣಿಬಸಪ್ಪ ಕೊರ್ಲಹಳ್ಳಿ, ಡಾ.ಪಿ.ಬಿ.ಹಿರೇಗೌಡರ, ಪ್ರಾಚಾರ್ಯ ಸಿ.ಎಸ್.ಅರಸನಾಳ, ಡಾ.ಎಚ್.ಆರ್.ಜಂಗಣವಾರಿ, ಆರ್.ಆರ್.ಇನಾಮದಾರ, ಪಿ.ಬಿ.ಹಿರೇಮಠ, ಡಿ.ಎಸ್.ಜೋಗಿನ, ಶರಣಕುಮಾರ ಬುಗುಟಿ, ಮಲ್ಲಿಕಾರ್ಜುನ ಹಣಜಿ, ನಿರ್ಮಲಾ ಪಾಟೀಲ, ಮಹಾಂತೇಶ ಔದಕ್ಕನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.