ADVERTISEMENT

ಗದಗ| ಹೂವಿಗೆ ಮಳೆಯ ಪೆಟ್ಟು; ಕಷ್ಟದಲ್ಲಿ ರೈತ

ಹೂವಿನ ಊರು ಲಕ್ಕುಂಡಿ ಸುತ್ತಮುತ್ತಲಿನ ಪ್ರದೇಶದ ತೋಟಗಳಿಗೆ ಹಾನಿ

ಸತೀಶ ಬೆಳ್ಳಕ್ಕಿ
Published 4 ನವೆಂಬರ್ 2020, 1:55 IST
Last Updated 4 ನವೆಂಬರ್ 2020, 1:55 IST
ಹಾನಿಯಾಗಿರುವ ಬೆಳೆ
ಹಾನಿಯಾಗಿರುವ ಬೆಳೆ   
""

ಗದಗ: ‘ಕೊರೊನಾ ಲಾಕ್‌ಡೌನ್‌ ಅವಧಿ ಹೂವಿನ ಉದ್ಯಮಕ್ಕೆ ಭಾರಿ ಪೆಟ್ಟು ನೀಡಿತ್ತು. ದೇಶದಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಜಾರಿಗೊಂಡ ನಂತರ ಹೂವಿನ ವಹಿವಾಟು ಹಳೆ ಹಳಿಗೆ ಮರಳುತ್ತದೆ ಎಂಬ ವಿಶ್ವಾಸದಲ್ಲಿದ್ದ ಹೂವು ಬೆಳೆಗಾರರನ್ನು ಈ ಬಾರಿ ಎಡೆಬಿಡದೆ ಸುರಿದ ಮಳೆ, ಬೆಂಕಿಯಿಂದ ಬಾಣಲೆಗೆ ತಳ್ಳಿತು. ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ನಗು ತುಳುಕಿಸುತ್ತಿದ್ದ ಗಿಡಗಳೆಲ್ಲವೂ ಕೊಳೆತು ನೆಲಕ್ಕೊರಗಿದವು.

ಗದಗ ಜಿಲ್ಲೆಯಲ್ಲಿ ಹೂವು ಹೆಚ್ಚಾಗಿ ಬೆಳೆಯುವ ಲಕ್ಕುಂಡಿ, ಪಾಪನಾಶಿ, ಕದಾಂಪೂರ, ಕಣಿಹೊಸೂರು ಹಾಗೂ ಸುತ್ತಮುತ್ತಲಿನ ಹೂವು ಬೆಳೆಗಾರರು ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷದ ಮುಂಗಾರು ಸುಮಾರು 300 ಹೆಕ್ಟೇರ್‌ ಪ್ರದೇಶದಲ್ಲಿದ್ದ ಹೂವಿನ ಬೆಳೆಗೆ ಹಾನಿ ಮಾಡಿದೆ. ಅತಿಯಾದ ತೇವಾಂಶದಿಂದಾಗಿ ತೋಟಕ್ಕೆ ಕೊಳೆರೋಗ ತಗುಲಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಹೂವಿನ ಫಸಲು ಭರ್ಜರಿ ಆಗಿತ್ತು. ಆದರೆ, ಮಾರುಕಟ್ಟೆ ಇರಲಿಲ್ಲ. ಈ ಕಾರಣಕ್ಕಾಗಿ ಹುಲುಸಾಗಿ ಬೆಳೆದಿದ್ದ ಹೂವಿನ ಬೆಳೆಯನ್ನು ಟ್ರ್ಯಾಕ್ಟರ್‌ನಲ್ಲಿ ಉಳುಸಿಬಿಟ್ಟೆವು. ಲಾಕ್‌ಡೌನ್‌ ತೆರವಿನ ನಂತರ ಹಾಕಿದ ಬೆಳೆ ಕೂಡ ಚೆನ್ನಾಗಿ ಬಂದಿತ್ತು. ಆದರೆ, ಈಚೆಗೆ ಸುರಿದ ಸತತ ಮಳೆಯಿಂದಾಗಿ ಎರಡೂವರೆ ತಿಂಗಳ ಹೂವಿನ ಗಿಡಗಳಿಗೆ ಕೊಳೆರೋಗ ತಗುಲಿದೆ’ ಎನ್ನುತ್ತಾರೆ ಲಕ್ಕುಂಡಿಯ ಹೂವು ಬೆಳೆಗಾರ ನಿಂಗನಗೌಡ ಶಂಕರಗೌಡ ರೋಣದ.

ADVERTISEMENT
ನಿಂಗನಗೌಡ ಶಂಕರಗೌಡ ರೋಣದ

ಲಕ್ಕುಂಡಿ ಭಾಗದ ಹೂವು ಬೆಳೆಗಾರರು ಸೇವಂತಿಗೆ, ಕನಕಾಂಬರ, ದುಂಡು ಮಲ್ಲಿಗೆ ಹಾಗೂ ಸೂಜಿ ಮಲ್ಲಿಗೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅದೇರೀತಿ, ಬಿಳಿ ಪೂರ್ಣಿಮಾ, ಹಳದಿ ಪೂರ್ಣಿಮಾ, ಕರ್ನೂಲು, ಮತ್ತೂರು ತಳಿಯ ಸೇವಂತಿಗೆ ಹೂಗಳನ್ನು ಬೆಳೆಸುತ್ತಾರೆ. ಇಲ್ಲಿ ಬೆಳೆಯುವ ಹೂವು ಗದಗ, ಹುಬ್ಬಳ್ಳಿ ಹಾಗೂ ಬೆಳಗಾವಿಯ ಹೂವಿನ ಮಾರುಕಟ್ಟೆಗೂ ಹೋಗುತ್ತದೆ. ಮಳೆಯ ಕಾರಣದಿಂದಾಗಿ ಈ ಬಾರಿ ಬೆಳೆ ಕೈ ಕೊಟ್ಟಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

‘ಒಂದು ಎಕರೆ ಹೂವಿನ ಕೃಷಿಗೆ ₹80 ಸಾವಿರ ಖರ್ಚು ತಗುಲುತ್ತದೆ. ಆರು ತಿಂಗಳ ಹೂವಿನ ಕೃಷಿಯಲ್ಲಿ ಗಿಡಗಳು ನಾಲ್ಕನೇ ತಿಂಗಳಿಂದ ಹೂವು ಕೊಡುತ್ತವೆ. ಒಂದು ಎಕರೆ ಹೂವಿನ ತೋಟದಲ್ಲಿ ಒಂದು ಬಾರಿ ಎರಡು ಕ್ವಿಂಟಲ್‌ನಷ್ಟು ಹೂವು ಕೀಳಬಹುದು. ಬೆಳೆ ಮತ್ತು ಬೆಲೆ ಚೆನ್ನಾಗಿದ್ದರೆ ಆ₹3 ಲಕ್ಷದವರೆಗೂ ಆದಾಯ ಬರುತ್ತದೆ. ಆದರೆ, ಈ ಬಾರಿ ಮಾಡಿದ ಖರ್ಚು ಕೂಡ ಕೈ ಸೇರುವುದು ಅನುಮಾನ’ ಎಂದು ದುಃಖ ತೋಡಿಕೊಂಡರು ರೈತ ನಿಂಗನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.