ADVERTISEMENT

ನರೇಗಲ್: ಭಾವೈಕ್ಯದ ಮಾರುತೇಶ್ವರ ಕಾರ್ತಿಕೋತ್ಸವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 3:16 IST
Last Updated 1 ಡಿಸೆಂಬರ್ 2025, 3:16 IST
ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೊನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತೀಕೋತ್ಸವದಲ್ಲಿ ಹಿಂದೂ-ಮುಸ್ಲಿಮ ಯುವಕರು ದೀಪ ಹಚ್ಚಿದರು
ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೊನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತೀಕೋತ್ಸವದಲ್ಲಿ ಹಿಂದೂ-ಮುಸ್ಲಿಮ ಯುವಕರು ದೀಪ ಹಚ್ಚಿದರು   

ನರೇಗಲ್:‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೊನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವವನ್ನು ಹಿಂದೂ-ಮುಸ್ಲಿಂ ಸಮುದಾಯದ ಜನರು ಈಚೆಗೆ ಸಂಭ್ರಮದಿಂದ ನೆರವೇರಿಸಿದರು.

ಎಲ್ಲರೂ ಸಾಂಘಿಕವಾಗಿ ಬೆಳಿಗ್ಗೆಯಿಂದ ದೇವಸ್ಥಾನದ ಸ್ವಚ್ಛೆತೆ, ಲೈಟಿಂಗ್‌ ವ್ಯವಸ್ಥೆ, ಎಲೆ ಚಟ್ಟು ಸಿದ್ಧತೆ, ಅಡುಗೆ ಹಾಗೂ ಅಲಂಕಾರವನ್ನು ಮಾಡಿದರು.

ಸಂಜೆ 8ಕ್ಕೆ ಆರಂಭವಾದ ಕಾರ್ತೀಕೋತ್ಸವದಲ್ಲಿ ಪಾಲ್ಗೊಂಡ ಅಪಾರ ಸಂಖ್ಯೆಯ ಮಹಿಳೆಯರು, ಯುವಕರು, ಹಿರಿಯರು ವಿಶೇಷ ಪೂಜೆ ಕಾರ್ಯ ಕೈಗೊಂಡರು. ಮಂಗಳಾರತಿ ಹಾಡುವ ಮೂಲಕ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗುಡಿಯ ಸುತ್ತ ದೀಪ ಹಚ್ಚಿ ಭಾವೈಕ್ಯದ ಸಂದೇಶ ಸಾರಿದರು.

ADVERTISEMENT

ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ದಾದಾಸಾಬ್‌ ನದಾಫ್‌ ಮಾತನಾಡಿ, ‘ಪ್ರತಿ ವ್ಯಕ್ತಿಯಲ್ಲೂ ವಿಶೇಷತೆ ಅಡಗಿರುತ್ತದೆ. ಜ್ಞಾನದ ಮಹತ್ವ ಅರಿತು ಸದ್ಗುಣ, ಸಜ್ಜನಿಕೆಯಿಂದ ಬಾಳಿ, ಬದುಕಿದಾಗ ಆ ಬದುಕಿಗೆ ಅರ್ಥ ಸಿಗುತ್ತದೆ. ಅನಾದಿ ಕಾಲದಿಂದ ಆಚರಣೆಯಲ್ಲಿರುವ ದೀಪ ಬೆಳಗಿಸುವ ಕಾರ್ತಿಕೋತ್ಸವ ಹಬ್ಬ ಬರೀ ಆಚರಣೆಯಲ್ಲ. ನಮ್ಮ ಬದುಕಿನಲ್ಲಿ ಅಡಗಿರುವ ಕತ್ತಲೆಯನ್ನು ಹೊಡೆದೋಡಿಸಿ, ಜ್ಞಾನದ ಬೆಳಕನ್ನು ಬೆಳಗುವ ಸಂಕೇತ. ಅದನ್ನು ಪ್ರತಿ ವರ್ಷ ಒಗ್ಗಟ್ಟಾಗಿ ಆಚರಣೆ ಮಾಡುತ್ತೇವೆ’ ಎಂದರು.

ಯುವ ಮುಖಂಡ ಸದ್ದಾಂ ನಶೇಖಾನ್‌ ಮಾತನಾಡಿ, ‘ಪ್ರತಿಯೊಂದು ಧರ್ಮದಲ್ಲೂ ಪೂರ್ವಿಕರು ಆಚರಣೆ ಮಾಡಿಕೊಂಡು ಬಂದ ಪ್ರತಿಯೊಂದು ಹಬ್ಬದಲ್ಲಿ ವೈಜ್ಞಾನಿಕ ಸತ್ಯಗಳು ಅಡಗಿವೆ. ಅದರಂತೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಇಂಗಾಲ ಬಿಡುಗಡೆಯಾಗುವುದಿಲ್ಲ. ಮತ್ತು ಪರಿಸರದಲ್ಲಿರುವ ರೋಗಾಣುಗಳು ನಾಶವಾಗುತ್ತವೆ. ಅಷ್ಟೇ ಅಲ್ಲದೆ ದೇವಸ್ಥಾನಗಳಲ್ಲಿ ಬೆಳಗುವ ದೀಪಗಳಿಂದ ಧನಾತ್ಮಕ ಚಿಂತನೆಗಳು ಬರುತ್ತವೆ’ ಎಂದರು.

ಮುಖಂಡ ಶರಣಪ್ಪ ಕೊಂಡಿ ಮಾತನಾಡಿ, ‘ಚಳಿಗಾಲದ ಅತಿಯಾದ ಚಳಿಯಿಂದ ಪ್ರಾಣಿ, ಪಕ್ಷಿಗಳಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದನ್ನು ತಡೆಯಲು ಹಿರಿಯರು ಪ್ರಕೃತಿದತ್ತವಾಗಿ ಸಿಗುವ ಎಣ್ಣೆಯ ಮೂಲಕ ಸಾಮೂಹಿಕ ದೀಪ ಹಚ್ಚಿ ತಾಪಮಾನದ ಸಮತೋಲನ ಕಾಪಾಡಲು ಕಾರ್ತಿಕೋತ್ಸವ ಆಚರಣೆ ಜಾರಿಗೆ ತಂದರು’ ಎಂದರು.

ಕಾರ್ತಿಕೋತ್ಸವದ ನಂತರ ಅನ್ನ ಸಂತರ್ಪಣೆ ನೆರವೇರಿತು. ವಿರೂಪಾಕ್ಷಯ್ಯ ಹಿರೇಮಠ, ಚನ್ನವೀರಯ್ಯ ಹಿರೇಮಠ, ನಿಂಗಯ್ಯ ಸಿದ್ದನಗೌಡ್ರ, ಶರಣಪ್ಪ ಹಂಚಿನಾಳ, ವೀರೇಶ ಪಮ್ಮಾರ, ದೇವಪ್ಪ ಮಾಳೋತ್ತರ, ವೀರೇಶ ರಾಠೋಡ, ಪರಸಪ್ಪ ರಾಠೋಡ, ಹಸನ ಕೊಪ್ಪಳ, ಹನಂತಪ್ಪ ಜೋಡಗಂಬಳಿ, ಗುರು ಮಾಳೋತ್ತರ, ದುರಗಪ್ಪ ಕಟ್ಟಿಮನಿ, ರಾಚಯ್ಯ, ವೀರೇಶ ಹರ್ತಿ ಮಹಿಳೆಯರು ಇದ್ದರು.

ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಪೂಜೆ ವೇಳೆ ಪಾಲ್ಗೊಂಡ ಹಿಂದೂ-ಮುಸ್ಲಿಂ ಸಮುದಾಯದ ಜನರು
ನರೇಗಲ್‌ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಪೂಜೆ ವೇಳೆ ಪಾಲ್ಗೊಂಡ ಹಿಂದೂ-ಮುಸ್ಲಿಂ ಸಮುದಾಯದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.